ಬಹುಬೆಳೆ ಪದ್ಧತಿಯಿಂದ ಬರ ತಡೆಯಲು ಸಾಧ್ಯ

| Published : Mar 07 2024, 01:47 AM IST

ಬಹುಬೆಳೆ ಪದ್ಧತಿಯಿಂದ ಬರ ತಡೆಯಲು ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಬಹುಬೆಳೆ ಪದ್ಧತಿಯನ್ನು ಅನುಸರಿಸಿದರೆ ಬರ ತಡೆಯಬಹುದು ಎಂದು ಕೃಷಿ ವಿಜ್ಞಾನಿ ಡಾ.ಮಂಜುನಾಥ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರೈತರು ಬಹುಬೆಳೆ ಪದ್ಧತಿಯನ್ನು ಅನುಸರಿಸಿದರೆ ಬರ ತಡೆಯಬಹುದು ಎಂದು ಕೃಷಿ ವಿಜ್ಞಾನಿ ಡಾ.ಮಂಜುನಾಥ ಸಲಹೆ ನೀಡಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಕೊಳ್ಳೇಗಾಲದ ಜೆಎಸ್‌ಬಿ ಪ್ರತಿಷ್ಠಾನ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಬೇಸಿಗೆಯಲ್ಲಿ ತೋಟಗಳ ನಿರ್ವಹಣೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.ತೋಟಗಾರಿಕೆ ಬೆಳೆಗಳ ಬಹು ಬೆಳೆ ಪದ್ಧತಿಯಲ್ಲಿ ಬೆಳೆಗಳು ಕಡಿಮೆ ನೀರನ್ನು ಕೇಳುತ್ತವೆ. ಹೆಚ್ಚು ಗಿಡಗಳಿದ್ದರೆ ಹೆಚ್ಚಿನ ನೀರು ಬೇಕಾಗುವುದಿಲ್ಲ. ಯಾವುದೇ ಬೆಳೆ ಗರಿಷ್ಠ ಪ್ರಮಾಣದಲ್ಲಿ ಕೆಲಸ ಮಾಡಲು ಇತರೆ ಬೆಳೆಗಳು ಅಗತ್ಯ ಎಂದು ತಿಳಿಸಿದರು.ಪ್ರಸ್ತುತ ದಿನಗಳಲ್ಲಿ ಬಿರು ಬೇಸಿಗೆ ಆರಂಭವಾಗಿದೆ. ತೋಟಗಾರಿಕೆ ಬೆಳೆಗಳಲ್ಲಿ ಉತ್ತಮ ಇಳುವರಿ ಇಲ್ಲದೇ ರೈತರು ಕಂಗಲಾಗಿದ್ದಾರೆ. ತೋಟಗಾರಿಕೆ ಬೆಳೆಗಳು ಲಾಭದಾಯಕವಲ್ಲ ಎಂಬ ಮನೋಭಾವ ಬಂದಿದೆ. ತೋಟಗಾರಿಕೆ ಬೆಳೆಗಳಲ್ಲಿ ರೈತರು ಸೂಕ್ಷ್ಮತೆ ಅರಿತುಕೊಂಡರೆ ಉತ್ತಮ ಇಳುವರಿ ಪಡೆಯಬಹುದು. ಬಿಸಿಲಿನ ವಾತಾವರಣಲ್ಲದೇ ತಂಪು ಇರುವ ಕಡೆಗಳಲ್ಲೂ ತೋಟಗಾರಿಕೆ ಬೆಳೆಗಳಲ್ಲಿ ಹೂವು, ಹಣ್ಣು, ಕಾಯಿ ಉದುರುತ್ತವೆ ಎಂದರು.

ತೋಟಕ್ಕೆ ಹೊರಗಿನಿಂದ ಮಣ್ಣು ತಂದು ಹಾಕುವುದು ದೊಡ್ಡ ಕಾಯಿಲೆಯಾಗಿದೆ. ತೋಟಗಳಲ್ಲಿ ಹೂವಿನ ಬೆಳೆ ಜಾಸ್ತಿ ಮಾಡಬೇಕು. ಇದರಿಂದ ದುಂಬಿಗಳು ಜಾಸ್ತಿಯಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಯಾವುದೇ ಕಳೆನಾಶಕದ ಅವಶ್ಯಕತೆ ಇರುವುದಿಲ್ಲ. ಭೂಮಿ ಬಂಜಾರಾಗಿದೆ. ಸ್ವಾಭಾವಿಕ ಕೃಷಿಗೆ ಪುಷ್ಠಿ ಕೊಡಬೇಕು. ಏಕ ಬೆಳೆ ಪದ್ಧತಿಯಲ್ಲಿ ಒಂದೇ ಸಮನಾದ ಪದರ ಆದರೆ, ಬಹು ಬೆಳೆ ಪದ್ಧತಿಯಲ್ಲಿ ಹಲವು ಪದರಗಳು ನಿರ್ಮಾಣವಾಗಿ ಇಳುವರಿ ಜೊತೆಗೆ ನೀರಿನ ಸಂರಕ್ಷಣೆ ಮಾಡಬಹುದು ಎಂದರು. ವರ್ಷ ವರ್ಷ ಭೂಮಿಯ ಸತ್ವ ಹಾಳಾಗುತ್ತಿದೆ. ಇದರಿಂದ ಇಳುವರಿಯೂ ಕುಗ್ಗುತ್ತದೆ. ಕರ್ನಾಟಕದಲ್ಲಿ ಶೇ.36.5 ರಷ್ಟು ಭೂಮಿ ಬರಡಾಗುತ್ತಿದೆ. ಇದರ ನಿರ್ವಹಣೆ ಕುರಿತ ಅರಿವು ಅಗತ್ಯವಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ರೈತರೊಂದಿಗೆ ಸಂವಾದ ನಡೆಯಿತು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ ಮಾತನಾಡಿ, ಪ್ರಸ್ತುತ ಬರ ಎದುರಾಗಿದ್ದು, ಪೂರ್ವ ಮುಂಗಾರು ಇನ್ನೂ ಆರಂಭವಾಗಿಲ್ಲ. ಮಳೆಯ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ರೈತರು ಬೆಳೆದ ಫಸಲು ಒಣಗುತ್ತಿವೆ. ಮಳೆಯಾಶ್ರಿತ ಭೂಮಿ ಹೆಚ್ಚಾಗಿರುವಚಾಮರಾಜನಗರ ಜಿಲ್ಲೆಯ ರೈತರು ನಿರಂತರವಾಗಿ ಬರ ಎದುರಿಸುತ್ತಿದ್ದಾರೆ. ಪೂರ್ವ ಮುಂಗಾರಿನ ಬಳಿಕ ಜೂನ್‌, ಜುಲೈ ತಿಂಗಳಲ್ಲಿ ಮಳೆಯಿಲ್ಲದೆ ಹಾಕಿದ ಬೆಳೆ ಪ್ರತಿ ವರ್ಷ ಒಣಗುತ್ತಿದೆ. ಇದಕ್ಕೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಕೃಷಿ ವಿಜ್ಞಾನಿಗಳು ಕೆಲಸ ಮಾಡಬೇಕಿದೆ ಎಂದು ತಿಳಿಸಿದರು. ಈ ವೇಳೆ ಹಿರಿಯ ಸಾಹಿತಿ ಕೆ.ವೆಂಕಟರಾಜು, ಸೇವಾ ಭಾರತಿ ಕಾಲೇಜಿನ ಪ್ರಾಂಶುಪಾಲೆ ನಿರ್ಮಲ, ಜೆಎಸ್‌ಬಿ ಪ್ರತಿಷ್ಠಾನದ ಶಶಿಕುಮಾರ್ ಹಾಗೂ ಮತ್ತಿತರರಿದ್ದರು.