ರಾಜ್ಯದಲ್ಲಿ ಮುಂಗಾರು ಋತುವಿನ ಬರ ಪರಿಸ್ಥಿತಿಯ ವೈಜ್ಞಾನಿಕ ಪರಿಶೀಲನೆ ನಿರಂತರವಾಗಿ ಸಾಗುತ್ತಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಮುಂಗಾರು ಋತುವಿನ ಬರ ಪರಿಸ್ಥಿತಿಯ ವೈಜ್ಞಾನಿಕ ಪರಿಶೀಲನೆ ನಿರಂತರವಾಗಿ ಸಾಗುತ್ತಿದೆ. ಹೀಗಾಗಿ 2020ರ ಬರ ನಿರ್ವಹಣಾ ಮಾರ್ಗದರ್ಶಿ ನಿಯಮಾವಳಿ ಅನುಸಾರ ಹೆಚ್ಚುವರಿ 53 ತಾಲೂಕುಗಳಲ್ಲಿ ಬೆಳೆ ಹಾನಿಯ ಪ್ರತ್ಯಕ್ಷ ಸ್ಥಳ ಪರಿಶೀಲನೆ (ಗ್ರೌಂಡ್ ಟ್ರೂಥಿಂಗ್) ನಡೆಸಲು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು(ಕೆಎಸ್‌ಡಿಎಂಎ) ಆದೇಶ ಹೊರಡಿಸಿದೆ.ಉಪ ಮುಖ್ಯಮಂತ್ರಿಗಳೂ ಆಗಿರುವ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಾಮರ್ಶೆ ಸಭೆಯಲ್ಲಿ ನೀಡಿದ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಹಂತ-ಹಂತವಾಗಿ ಮೌಲ್ಯಮಾಪನ ಮಾಡಲಾಗುತ್ತಿದ್ದು, ಈ ಹಿಂದೆ ಮೊದಲ ಹಂತದಲ್ಲಿ 102 ತಾಲೂಕುಗಳಲ್ಲಿ ಪ್ರತ್ಯಕ್ಷ ಪರಿಶೀಲನೆ ನಡೆಸಿ, 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು (89 ತೀವ್ರ ಬರ ಹಾಗೂ 12 ಸಾಧಾರಣ ಬರ). ನಂತರದ ಹಂತದಲ್ಲಿ 24 ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ.ಇದೀಗ ಜೂ.1 ರಿಂದ ಸೆ.16 ರವರೆಗಿನ ಅವಧಿಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (ಕೆಎಸ್‌ಎನ್‌ಡಿಎಂಸಿ) ಉಳಿದ 115 ತಾಲೂಕುಗಳ ವೈಜ್ಞಾನಿಕ ದತ್ತಾಂಶಗಳನ್ನು (ಮಳೆ ಪ್ರಮಾಣ, ಮಣ್ಣಿನ ತೇವಾಂಶ, ಬೆಳೆ ಸೂಚ್ಯಂಕ ಇತ್ಯಾದಿ) ವಿಶ್ಲೇಷಿಸಿದ್ದು, ಈ ಪೈಕಿ 17 ಜಿಲ್ಲೆಗಳ 53 ತಾಲೂಕುಗಳು ಪ್ರತ್ಯಕ್ಷ ಪರಿಶೀಲನೆಯ 3ನೇ ಹಂತಕ್ಕೆ ಅರ್ಹತೆ ಪಡೆದುಕೊಂಡಿವೆ.
ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆ:ಈ ಬಾರಿಯ ಸ್ಥಳ ಪರಿಶೀಲನೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕ ಹಾಗೂ ನಿಖರವಾಗಿ ನಡೆಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಅಭಿವೃದ್ಧಿಪಡಿಸಿರುವ ‘ಕ್ರಾಪ್ ಲಾಸ್ ಜಿಟಿ’ ಎಂಬ ವಿಶೇಷ ಮೊಬೈಲ್ ಆ್ಯಪ್ ಬಳಸಲಾಗುತ್ತಿದೆ. ಈ ಆ್ಯಪ್ ಮೂಲಕ ಜಿಯೋ-ಟ್ಯಾಗ್ ಮಾಡಿದ ಛಾಯಾಚಿತ್ರಗಳು, ಜಿಪಿಎಸ್ ನಿರ್ದೇಶಾಂಕಗಳು, ಜಮೀನಿನ ವಿವರ ಮತ್ತು ಬೆಳೆ ಹಾನಿಯ ವಿಸ್ತೀರ್ಣವನ್ನು ಸ್ಥಳದಲ್ಲೇ ದಾಖಲಿಸಲಾಗುತ್ತದೆ.
ಗ್ರೌಂಡ್ ಟ್ರೂಥಿಂಗ್‌ಗೆ ಆಯ್ಕೆಯಾದ ಹದಿನೇಳು ಜಿಲ್ಲೆಗಳ 53 ತಾಲೂಕು:ಬೆಂಗಳೂರು ನಗರ ಜಿಲ್ಲೆ- ಬೆಂಗಳೂರು ದಕ್ಷಿಣ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ- ದೊಡ್ಡಬಳ್ಳಾಪುರ, ಚಿತ್ರದುರ್ಗ ಜಿಲ್ಲೆ- ಚಿತ್ರದುರ್ಗ, ಹೊಳಲ್ಕೆರೆ ಮತ್ತು ಮೊಳಕಾಲ್ಮೂರು, ದಾವಣಗೆರೆ ಜಿಲ್ಲೆ- ಹರಿಹರ, ಬಳ್ಳಾರಿ ಜಿಲ್ಲೆ- ಸಿರುಗುಪ್ಪ, ಕೊಪ್ಪಳ ಜಿಲ್ಲೆ- ಕೊಪ್ಪಳ ಮತ್ತು ಯಲಬುರ್ಗಾ, ಕಲಬುರಗಿ ಜಿಲ್ಲೆ- ಚಿಂಚೋಳಿ, ಜೇವರ್ಗಿ, ಸೇಡಂ, ಕಾಳಗಿ ಮತ್ತು ಕಮಲಾಪುರ.
ಬೀದರ್ ಜಿಲ್ಲೆ- ಕಮಲಾನಗರ ಮತ್ತು ಹುಲಸೂರು, ಬೆಳಗಾವಿ ಜಿಲ್ಲೆ- ಅಥಣಿ, ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ರಾಯಬಾಗ, ಕಿತ್ತೂರು, ನಿಪ್ಪಾಣಿ, ಮೂಡಲಗಿ, ಯರಗಟ್ಟಿ, ಬಾಗಲಕೋಟೆ ಜಿಲ್ಲೆ- ಬಾದಾಮಿ, ಹುನಗುಂದ, ಮುಧೋಳ, ರಬಕವಿ ಬನಹಟ್ಟಿ, ತೇರದಾಳ, ವಿಜಯಪುರ ಜಿಲ್ಲೆ- ಮುದ್ದೇಬಿಹಾಳ, ಸಿಂಧಗಿ, ದೇವರ ಹಿಪ್ಪರಗಿ, ಆಲಮೇಲ. ಗದಗ ಜಿಲ್ಲೆ- ನರಗುಂದ, ಶಿರಹಟ್ಟಿ, ಲಕ್ಷ್ಮೇಶ್ವರ, ಹಾವೇರಿ ಜಿಲ್ಲೆ-ಬ್ಯಾಡಗಿ, ಹಾನಗಲ್, ಹಾವೇರಿ, ರಾಣೇಬೆನ್ನೂರು, ಸವಣೂರು, ಶಿಗ್ಗಾಂವಿ, ಹಾಸನ ಜಿಲ್ಲೆ-ಆಲೂರು ಮತ್ತು ಬೇಲೂರು, ಉಡುಪಿ ಜಿಲ್ಲೆ- ಬ್ರಹ್ಮಾವರ, ಯಾದಗಿರಿ ಜಿಲ್ಲೆ-ಶೋರಾಪುರ, ಯಾದಗಿರಿ, ಗುರುಮಿಠಕಲ್, ವಡಗೇರಾ, ಹುಣಸಗಿ, ವಿಜಯನಗರ ಜಿಲ್ಲೆ-ಕೊಟ್ಟೂರು, ಕೂಡ್ಲಿಗಿ.