ಮೊಳಕಾಲ್ಮುರಲ್ಲಿ ಬರ: ಕುಡಿವ ನೀರಿಗೆ ಹಾಹಾಕಾರ

| Published : Mar 30 2024, 12:48 AM IST

ಸಾರಾಂಶ

ಭೀಕರ ಬರ ಮತ್ತು ಬೇಸಿಗೆ ಧಗೆಯಿಂದ ಅಂತರ್ಜಲ ಕುಸಿತ ಕಂಡು ಹಳ್ಳಿಗಳಲ್ಲಿ ಕೊಳವೆ ಬಾವಿಗಳು ಒಂದೊಂದಾಗಿ ಬತ್ತುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ತಾಲೂಕಿನ 25 ಹಳ್ಳಿಗಳು ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸಲಿವೆ.

ಬಿಜಿಕೆರೆ ಬಸವರಾಜ

ಮೊಳಕಾಲ್ಮುರು: ಭೀಕರ ಬರ ಮತ್ತು ಬೇಸಿಗೆ ಧಗೆಯಿಂದ ಅಂತರ್ಜಲ ಕುಸಿತ ಕಂಡು ಹಳ್ಳಿಗಳಲ್ಲಿ ಕೊಳವೆ ಬಾವಿಗಳು ಒಂದೊಂದಾಗಿ ಬತ್ತುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ತಾಲೂಕಿನ 25 ಹಳ್ಳಿಗಳು ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸಲಿವೆ.

ಹೌದು ಅಧಿಕಾರಿಗಳ ಮಾಹಿತಿ ಪ್ರಕಾರ ತಾಲೂಕಿನ ಕಸಬಾ ಹಾಗೂ ದೇವಸಮುದ್ರ ಹೋಬಳಿಯ 25ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗುತ್ತಿದ್ದು, ಏಪ್ರಿಲ್ ಎರಡನೇ ವಾರದಿಂದಲೇ ತಾಲೂಕು ತೀವ್ರ ಸ್ವರೂಪದ ಕುಡಿಯುವ ನೀರಿನ ಸಮಸ್ಯೆಗೆ ಒಳಗಾಗಲಿದೆ. ಪ್ರಸಕ್ತ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ದಿನೇದಿನೆ ಕಡಿಮೆಯಾಗುತ್ತಿದೆ. ಬಹುತೇಕ ಹಳ್ಳಿಗಳ ಬೋರ್‌ವೆಲ್‌ಗಳಲ್ಲಿ ಬಿಟ್ಟು ಬಿಟ್ಟು ನೀರು ಬರುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾದ ಮುನ್ಸೂಚನೆ ಗೋಚರವಾಗುತ್ತಿದೆ.

ಕಸಬಾ ಹೋಬಳಿಯ ಕೋನಸಾಗರ, ರಾಯಾಪುರ, ತುಮಕೂರ್ಲಹಳ್ಳಿ, ಚಿಕ್ಕೋಬನಹಳ್ಳಿ, ಗುಂಡ್ಲೂರು, ಸಿದ್ದಯ್ಯನ ಕೋಟೆ, ನೇರ್ಲಹಳ್ಳಿ, ಬಿಜಿಕೆರೆ, ಸೂರಮ್ಮನಹಳ್ಳಿ, ಮೊಗಲಹಳ್ಳಿ, ಕೊಂಡ್ಲಹಳ್ಳಿ, ತಳವಾರಹಳ್ಳಿ, ಪೂಜಾರಹಟ್ಟಿ, ಚಿಕ್ಕನಹಳ್ಳಿ, ಚಿಕ್ಕುಂತಿ, ರಾಮಸಾಗರ ದೇವಸಮುದ್ರ ಹೋಬಳಿಯ ಬಸಾಪುರ, ಮಲ್ಲೇಹರವು, ರಾಜಾಪುರ, ಬೊಮ್ಮಕ್ಕನಹಳ್ಳಿ, ವೀರಾಪುರ, ಬೊಮ್ಮದೇವರ ಹಳ್ಳಿ ನೀರಿನ ತೀವ್ರ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ.

ಕೆಲ ಹಳ್ಳಿಗಳಲ್ಲಿ ಮೂರ್ನಾಲ್ಕು ದಿನಕ್ಕೊಮ್ಮೆ ನೀರು ನೋಡುವಂಥ ಸ್ಥಿತಿ ಇದೆ. ಇನ್ನು ಕೆಲ ಹಳ್ಳಿಗಳಲ್ಲಿ ವಾರಕ್ಕೊಮ್ಮೆ ನೀರು ನೋಡುವಂಥ ಸ್ಥಿತಿಯೂ ಬಂದೊದಿಗಿದೆ. ಮುಂದಿನ 15 ದಿನಗಳ ನಂತರ ಸ್ಥಿತಿ ಬಿಗಡಾಯಿಸಬಹುದು. ತುರ್ತು ಪರಿಹಾರಕ್ಕಾಗಿ ಟ್ಯಾಂಕರ್ ನೀರು ಸರಬರಾಜಿಗೆ ಅಧಿಕಾರಿಗಳು ಕ್ರಮವಹಿಸಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಸಹ ಪೂರ್ಣಗೊಳಿಸಿದ್ದಾರೆ.

ಬಿಸಿಲಿನ ಜಳಕ್ಕೆ ನಾಗರೀಕರು ತತ್ತರಿಸುತ್ತಿದ್ದಾರೆ. ಹಗಲಿನ ಬಹುತೇಕ ಅವಧಿಯಲ್ಲಿ ಜನರು ಹೊರ ಬಾರಲಾಗದಷ್ಟು ಧಗೆ ಹೆಚ್ಚುತ್ತಿದೆ. ಇಂತಹ ಸಂಕಷ್ಟದ ನಡುವೆ ಕುಡಿಯುವ ನೀರಿನ ಸಮಸ್ಯೆ, ಜನರಿಗೆ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ.

ಬಿಜಿಕೆರೆಯಲ್ಲಿ ಭೀಕರ ಬವಣೆ: ತೀರಾ ಬರದಿಂದಾಗಿ ತಾಲೂಕಿನ ಬಿಜಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರಮ್ಮನ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ನಾಲ್ಕು ಕೊಳವೆ ಬಾವಿಗಳ ಪೈಕಿ ಎರಡರಲ್ಲಿ ನೀರು ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಇನ್ನಷ್ಟು ಬಿಗಡಾಯಿಸಬಹುದು. ಜತೆಗೆ ಗ್ರಾಮಕ್ಕೆ ಅಂಟಿಕೊಂಡಿರುವ ಹೊಸೂರಿನಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ಜನರು ಕುಡಿಯುವ ನೀರಿಗಾಗಿ ದೂರದ ಕೃಷಿ ಜಮೀನುಗಳ ಕಡೆ ಮುಖ ಮಾಡುವಂತಾಗಿದೆ. ಹೀಗಿದ್ದರೂ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇತ್ತ ಸುಳಿಯುತ್ತಿಲ್ಲ ಎನ್ನುವುದು ಅಲ್ಲಿನ ನಿವಾಸಿಗಳ ಆರೋಪವಾಗಿದೆ.