ಸಾರಾಂಶ
ಸರ್ಕಾರ ನೀಡಿದ ಸೂಚನೆಯಂತೆ ರೈತರ ಖಾತೆಗೆ ಬೆಳೆ ಪರಿಹಾರದ ಮೊತ್ತ ಹಾಕಲಾಗಿದ್ದು, ಕೆಲ ಬ್ಯಾಂಕ್‌ಗಳು ಪರಿಹಾರದ ಹಣವನ್ನು ರೈತರ ಸಾಲಕ್ಕೆ ಜಮೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಎಲ್ಲ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿ ಬರ ಪರಿಹಾರವನ್ನು ಬೆಳೆಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳುವಂತಿಲ್ಲ.
ನವಲಗುಂದ:
ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದರೂ ಎನ್‌ಡಿಆರ್‌ಎಫ್ ನಿಯಮಾನುಸಾರ ಪರಿಹಾರ ವಿತರಿಸುವಲ್ಲಿ ರೈತರಿಗೆ ತಾರತಮ್ಯ ಮಾಡಿದೆ ಎಂದು ರೈತ ಮುಖಂಡ ಶಂಕ್ರಪ್ಪ ಅಂಬಲಿ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಜರುಗಿದ ಬ್ಯಾಂಕ್ ಅಧಿಕಾರಿಗಳು ಹಾಗೂ ರೈತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ತಾಲೂಕಿನಲ್ಲಿ ಒಟ್ಟು 85 ಸಾವಿರ ಹೆಕ್ಟೇರ್ ಪ್ರದೇಶವಿದ್ದು, ಇದರಲ್ಲಿ ಕೇವಲ 40 ಸಾವಿರ ಹೆಕ್ಟೇರ್‌ಗೆ ಮಾತ್ರ ಪರಿಹಾರ ಬಂದಿದೆ. ಇನ್ನುಳಿದ 45 ಸಾವಿರ ಹೆಕ್ಟೇರ್ ಪ್ರದೇಶದ ರೈತರಿಗೆ ಪರಿಹಾರ ನೀಡದೇ ಕೈ ಬಿಡಲಾಗಿದೆ. ಬರಗಾಲ ಸಂದರ್ಭದಲ್ಲಿ ಅಧಿಕಾರಿಗಳು ಕಾಟಾಚಾರಕ್ಕೆ ಸಮೀಕ್ಷೆ ನಡೆಸುವ ಮೂಲಕ ರೈತರಿಗೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಸರ್ಕಾರ ಈ ಕುರಿತು ಮತ್ತೊಮ್ಮೆ ಪರಿಶೀಲನೆ ನಡೆಸಿ ಎಲ್ಲರಿಗೂ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ರೈತ ಸಂಘಟನೆಗಳ ಮುಖಂಡರಾದ ಯಲ್ಲಪ್ಪ ದಾಡಿಬಾವಿ, ಸುಭಾಸಚಂದ್ರಗೌಡ ಪಾಟೀಲ, ಸಿದ್ದಲಿಂಪ್ಪ ಹಳ್ಳದ, ಗೋವಿಂದರೆಡ್ಡಿ ಮೊರಬದ, ಶಿವಪ್ಪ ಸಂಗಳದ, ಇಮ್ಮಣ್ಣ ಚಾಹುಸೇನಿ, ಅಲ್ಲಾಭಕ್ಷ ಹಂಚಿನಾಳ ಸೇರಿದಂತೆ ಎಲ್ಲ ಬ್ಯಾಂಕ್‌ಗಳ ತಾಲೂಕು ಮಟ್ಟದ ಅಧಿಕಾರಿಗಳು, ಮತ್ತಿತರರು ಇದ್ದರು.ಸಾಲಕ್ಕೆ ಹೊಂದಿಸಿಕೊಳ್ಳುವಂತಿಲ್ಲ: ತಹಸೀಲ್ದಾರ್
ಸಭೆಯಲ್ಲಿ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಮಾತನಾಡಿ, ಸರ್ಕಾರ ನೀಡಿದ ಸೂಚನೆಯಂತೆ ರೈತರ ಖಾತೆಗೆ ಬೆಳೆ ಪರಿಹಾರದ ಮೊತ್ತ ಹಾಕಲಾಗಿದ್ದು, ಕೆಲ ಬ್ಯಾಂಕ್‌ಗಳು ಪರಿಹಾರದ ಹಣವನ್ನು ರೈತರ ಸಾಲಕ್ಕೆ ಜಮೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಎಲ್ಲ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿ ಬರ ಪರಿಹಾರವನ್ನು ಬೆಳೆಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳುವಂತಿಲ್ಲ ಎಂದು ಸೂಚಿಸಲಾಗಿದೆ. ಒಂದು ವೇಳೆ ಮಾಡಿಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದರು. ಅಲ್ಲದೇ, ಇನ್ನು ಪರಿಹಾರದಲ್ಲಾದ ಲೋಪದೋಷಗಳ ಕುರಿತಾಗಿ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.