ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
‘ನಮ್ಮ ತೆರಿಗೆ ನಮ್ಮ ಹಕ್ಕು’ ಎಂಬ ಸಂಸದ ಡಿ.ಕೆ. ಸುರೇಶ್ ಅವರ ಹೋರಾಟಕ್ಕೆ ಜಯ ಸಿಕ್ಕಿದೆ. ಕರ್ನಾಟಕಕ್ಕೆ ಬರ ಪರಿಹಾರ ಹಣ ನೀಡಬೇಕು, ತೆರಿಗೆ ಪಾಲನ್ನು ನ್ಯಾಯಯುತವಾಗಿ ನೀಡಬೇಕು ಎಂದು ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕೇಂದ್ರ ಸರ್ಕಾರ ಮುಂದಿನ ಒಂದು ವಾರದಲ್ಲಿ ಬರ ಪರಿಹಾರ ನೀಡಲಾಗುವುದು ಎಂದು ನ್ಯಾಯಾಲಯದಲ್ಲಿ ಹೇಳಿದೆ. ಇದು ಡಿ.ಕೆ. ಸುರೇಶ್ ಅವರ ಹೋರಾಟದ ಫಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.ಹಾರೋಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಕರ್ನಾಟಕಕ್ಕೆ ಯಾವುದೇ ಹಣ ಬಾಕಿ ಇಲ್ಲ ಎಂದು ಹೇಳಿದ್ದರು. ಅವರ ಮಾತಿಗೆ ಕೋರ್ಟ್ ಈಗ ಉತ್ತರ ನೀಡಿದೆ ಎಂದರು.
ದಳದ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು?:ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ದೇವೇಗೌಡರು ಅಳಿಯನನ್ನು ಬಿಜೆಪಿಯಿಂದ ನಿಲ್ಲಿಸಿದ್ದಾರೆ. ಗೌಡರು, ಕುಮಾರಣ್ಣ ಇಷ್ಟು ದಿನ ಕಟ್ಟಿದ ಜನತಾ ದಳ ಏನಾಯ್ತು? ನಿಮ್ಮ ಅಳಿಯನನ್ನು ತೆನೆಹೊತ್ತ ರೈತ ಮಹಿಳೆ ಚಿಹ್ನೆಯಲ್ಲಿ ಯಾಕೆ ನಿಲ್ಲಿಸಲಿಲ್ಲ? ಕುಮಾರಣ್ಣ ನಿನಗೆ ಪಕ್ಷ, ಪಕ್ಷದ ಚಿಹ್ನೆ ಬೇಕಾಗಿಲ್ಲ ಎಂದು ಬಿಜೆಪಿಯಿಂದ ನಿಲ್ಲಿಸಿದ್ದೀರಿ. ಇಂತಹ ಪರಿಸ್ಥಿತಿಯಲ್ಲಿ, ದಳದ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ಗೌಡರ ಅಭಿವೃದ್ಧಿಗೆ ಸಾಕ್ಷಿ ಏನು:ದೇವೇಗೌಡರು ನಿಮಗಾಗಿ ಏನಾದರೂ ಕೆಲಸ ಮಾಡಿದ್ದಾರಾ? ೨೫-೩೦ ವರ್ಷಗಳಿಂದ ನನ್ನ ಕ್ಷೇತ್ರ ಎಂದು ಎದೆ ತಟ್ಟಿಕೊಳ್ಳುತ್ತಿದ್ದರಲ್ಲಾ, ನಿಮಗೆ ಏನಾದರೂ ಅವರು ಸಹಾಯ ಮಾಡಿದ್ದಾರಾ? ಅವರ ಸಾಕ್ಷಿಗುಡ್ಡೆ ಏನು? ನೀರಾವರಿ, ಕಾವೇರಿ ವಿಚಾರದಲ್ಲಿ ನೆರವಾದರಾ? ೩೦೦ ಕೋಟಿ ವೆಚ್ಚದಲ್ಲಿ ಈ ಭಾಗದ ಕೆರೆ ತುಂಬಿಸುವಂತೆ ಮಾಡಿದ್ದು ನಾವು. ಅರ್ಕಾವತಿ ನೀರು ಸ್ವಚ್ಛಗೊಳಿಸಿ ಈ ಕೆರೆಗಳನ್ನು ತುಂಬಿಸಿದ್ದು ಯಾರು? ಕುಮಾರಸ್ವಾಮಿನಾ? ಅನಿತಕ್ಕನಾ? ರೇವಣ್ಣನಾ? ಡಾ.ಮಂಜುನಾಥ್ ಮಾಡಿದ್ದಾರಾ? ಜನರು ಉಪಕಾರ ಸ್ಮರಣೆ ಮಾಡಬೇಕು ಎಂದರು.
೧೫ ಲಕ್ಷ ನಿಮ್ಮ ಖಾತೆಗೆ ಬಂತಾ?:ಬಿಜೆಪಿಯವರು ವಿದೇಶದಲ್ಲಿರುವ ಕಪ್ಪು ಹಣ ತಂದು ನಿಮ್ಮ ಖಾತೆಗೆ ೧೫ ಲಕ್ಷ ಹಣ ಹಾಕುವುದಾಗಿ ಹೇಳಿದ್ದರು. ನಿಮ್ಮಲ್ಲಿ ಯಾರಿಗಾದರೂ ೧೫ ಲಕ್ಷ ಬಂತಾ? ಇನ್ನು ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು, ಅದು ಆಯಿತಾ? ವರ್ಷಕ್ಕೆ ೨ ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಹಾರೋಹಳ್ಳಿಯ ಜನರಿಗೆ ನಿಮ್ಮ ಊರಲ್ಲಿ ಯಾರಿಗಾದರೂ ಕೆಲಸ ಸಿಕ್ಕಿತಾ? ಹೇಳಿದ ಯಾವ ಭರವಸೆ ಈಡೇರಿಸದೇ ಇದ್ದ ಮೇಲೆ ನೀವು ಯಾವ ನೈತಿಕತೆ ಇಟ್ಟುಕೊಂಡು ಬಂದು ಮತ ಕೇಳುತ್ತೀರಾ? ಎಂದು ಪ್ರಶ್ನಿಸಿದರು.
ಬಿಜೆಪಿಯರವರು ನನ್ನನ್ನು ಜೈಲಿಗೆ ಹಾಕಿದರು. ಸೋಲಿನ ಭೀತಿಯಿಂದ ಸುರೇಶ್ ಆಪ್ತರ ಮನೆಗಳ ಮೇಲೆ ಐಟಿ ದಾಳಿ ಮಾಡಿಸಿದ್ದಾರೆ. ನಿಮಗೆ ಯಾರಿಗಾದರೂ ನಾನು ತೊಂದರೆ ಮಾಡಿದ್ದೇನಾ? ಮೋಸ ಮಾಡಿದ್ದೇನಾ? ಮಾತೆತ್ತಿದರೆ ನನಗೆ ಕುಮಾರಣ್ಣ ಕಲ್ಲು ಒಡೆದೆ ಎನ್ನುತ್ತಾರೆ. ನನ್ನ ಜಮೀನಿನಲ್ಲಿ ನಾನು ಕಲ್ಲು ಒಡೆದರೆ ನಿನಗೇನಯ್ಯಾ ತೊಂದರೆ? ನಾನು ಯಾರ ಬಳಿಯಾದರೂ ಲಂಚ ಪಡೆದಿದ್ದೇನಾ? ನನ್ನ ಮೇಲೆ ಆಪಾದನೆ ಬಂದಿದೆಯಾ? ಎಂದು ಪ್ರಶ್ನಿಸಿದರು.ಬ್ಲಾಕ್ ಅಧ್ಯಕ್ಷ ಜೆಸಿಪಿ ಅಶೋಕ್, ಮುಖಂಡರಾದ ಮೋಹನ್ ಉಳ್ಳ, ಎಸ್.ಕೆ ಸುರೇಶ್, ಎಚ್.ಸಿ ಶೇಖರ್, ಎಚ್.ಕೆ ನಾಗರಾಜ್, ಬಮುಲ್ ಹರೀಶ್, ಸೋಮಶೇಖರ್, ಕೋಟೆ ಕುಮಾರ್, ಜಗದೀಶ, ಎಂ.ಎನ್ ನಾಗರಾಜ್, ಈಶ್ವರ್, ರಾಮಕೃಷ್ಣ, ನಾಗೇಶ್, ಕೆ ಸೋಮಶೇಖರ್, ಆರ್‌ಸಿ ನಾಗೇಶ್, ಕಾಳಮ್ಮ, ಸೌಭಾಗ್ಯ, ಸುಮಾ ಇತರರು ಇದ್ದರು.