ಅಧೀನ ಕಾರ್ಯದರ್ಶಿ ಪಾರ್ಥ ಪಾಲ್ ಹಾಗೂ ಅಧೀನ ಕಾರ್ಯದರ್ಶಿ ರಾಕೇಶ್ ಕುಮಾರ್ ಸದಸ್ಯರಾಗಿರುವ ನಿರ್ದೇಶಕರಾದ ಡಾ. ಮನ್ ಸಿಂಗ್ ನೇತೃತ್ವದ ತಂಡವು ಅ. 5ರಂದು ಕೊಪ್ಪಳ ಜಿಲ್ಲೆಗೆ ಆಗಮಿಸಿ ಜಿಲ್ಲೆಯಲ್ಲಿ ಖಾರೀಫ್ ಬರದ ತೀವ್ರತೆ ಮತ್ತು ಹಾನಿಯ ಕುರಿತು ಪರಿಶೀಲಿಸಲಿದೆ.

ಕೊಪ್ಪಳ: ರಾಜ್ಯದಲ್ಲಿ ಉಂಟಾಗಿರುವ ಖಾರೀಫ್ ಬರದ ಪರಿಸ್ಥಿತಿಯನ್ನು ಪ್ರತ್ಯಕ್ಷವಾಗಿ ಪರಿಶೀಲಿಸಲು ಮತ್ತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ ಉನ್ನತ ಮಟ್ಟದ ಅಧಿಕಾರಿಗಳ ತಂಡವು (ಐಎಂಸಿಟಿ) ಅ. 5ರಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಲಿದೆ.

ಅಧೀನ ಕಾರ್ಯದರ್ಶಿ ಪಾರ್ಥ ಪಾಲ್ ಹಾಗೂ ಅಧೀನ ಕಾರ್ಯದರ್ಶಿ ರಾಕೇಶ್ ಕುಮಾರ್ ಸದಸ್ಯರಾಗಿರುವ ನಿರ್ದೇಶಕರಾದ ಡಾ. ಮನ್ ಸಿಂಗ್ ನೇತೃತ್ವದ ತಂಡವು ಅ. 5ರಂದು ಕೊಪ್ಪಳ ಜಿಲ್ಲೆಗೆ ಆಗಮಿಸಿ ಜಿಲ್ಲೆಯಲ್ಲಿ ಖಾರೀಫ್ ಬರದ ತೀವ್ರತೆ ಮತ್ತು ಹಾನಿಯ ಕುರಿತು ಪರಿಶೀಲಿಸಲಿದೆ.

ರಾಜ್ಯಕ್ಕೆ ಮೂರು ತಂಡಗಳ ಆಗಮನ: ಅಧಿಕಾರಿಗಳ ತಂಡಗಳನ್ನು ಒಟ್ಟು ಮೂರು ವಿಭಾಗಗಳಾಗಿ ತಂಡ 1, ತಂಡ 2 ಮತ್ತು ತಂಡ 3 ಎಂದು ವಿಂಗಡಿಸಲಾಗಿದ್ದು, ಈ ತಂಡಗಳು ಅ. 6ರ ವರೆಗೆ ಬರಪೀಡಿತ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪರಿಸ್ಥಿತಿ ಅವಲೋಕಿಸಲಿವೆ.

ನಿರ್ದೇಶಕರಾದ ಡಾ. ಮನ್ ಸಿಂಗ್ ಅವರ ನೇತೃತ್ವದ ತಂಡವು ಕೊಪ್ಪಳ ಜಿಲ್ಲೆಯ ಜತೆಗೆ ಯಾದಗಿರಿ, ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯ ಕುರಿತು ಅಧ್ಯಯನ ನಡೆಸಲಿದೆ.

ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಮತ್ತೊಂದು ತಂಡದಲ್ಲಿ ಉಪ ನಿರ್ದೇಶಕ ಚೇತ್ ರಾಮ್ ಮೀನಾ (ತಂಡದ ಸಂಯೋಜಕರು), ವಿಶೇಷ ಅಧಿಕಾರಿ (ಐಎಸ್‌ಡಿ) ಕರ್ನಲ್ ಅಮರೀಂದರ್ ಸಿಂಗ್ ಮತ್ತು ನಿರ್ದೇಶಕ ಡಾ. ಜೆ. ಹರ್ಷ ಸದಸ್ಯರಾಗಿದ್ದಾರೆ. ಈ ತಂಡವು ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ಪರಿಶೀಲನೆ ನಡೆಸಲಿದೆ.

ಸಹಾಯಕ ಆಯುಕ್ತ ಡಾ. ಸುದಮ್ ಬಾಗ್ ನೇತೃತ್ವದ ಇನ್ನೊಂದು ತಂಡದಲ್ಲಿ ಸಹಾಯಕ ಸಲಹೆಗಾರ ಆಶಿಶ್ ಪಾಂಡೆ, ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮತ್ತು ಉಪ ನಿರ್ದೇಶಕ ಕರಣ್ ಚೌಧರಿ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ತಂಡವು ಹಾಸನ, ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಿದೆ. ಭೇಟಿಯ ನಂತರ ಕೇಂದ್ರ ತಂಡವು ರಾಜ್ಯದ ಬೆಳೆ ಹಾನಿ ಮತ್ತು ರೈತರ ಸಂಕಷ್ಟದ ಕುರಿತು ಸಮಗ್ರ ವರದಿ ಸಲ್ಲಿಸಲಿದೆ.