ಯುವಕರು ಸ್ಪರ್ಧಾತ್ಮಕ ಯುಗದಲ್ಲಿ ಸಾಮಾಜಿಕವಾಗಿ ಗೌರವಯುತ ಬದುಕು ಕಟ್ಟಿಕೊಳ್ಳುವುದರ ಕಡೆಗೆ ಗಮನಹರಿಸುತ್ತ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸ್ವ- ಇಚ್ಛೆಯಿಂದ ಮಾದಕ ದ್ರವ್ಯ ಸೇವನೆ ಮತ್ತು ಡಿಜಿಟಲ್ ವಂಚನೆಗಳಿಂದ ದೂರವಿದ್ದರೆ ಮಾತ್ರ ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ಸಾಧ್ಯ.
ಗದಗ: ಯುವಕರು ಸ್ನೇಹಿತರ ಒತ್ತಾಯ, ಕುತೂಹಲ, ಏಕಾಂತ, ಮಾನಸಿಕ ಒತ್ತಡ, ಸುಖೋನ್ಮಾದ, ಆತಂಕ ನಿವಾರಣೆ, ಪಾಲಕರ ನಿರ್ಲಕ್ಷ್ಯ ಮುಂತಾದ ಕಾರಣಗಳಿಂದ ಮಾದಕ ದ್ರವ್ಯಗಳ ಸೇವನೆಯ ದುರಭ್ಯಾಸಗಳಿಗೆ ಒಳಗಾಗಿ ಡಿಜಿಟಲ್ ವಂಚನೆಯಂಥ ಅಪರಾಧಗಳಲ್ಲಿ ತೊಡಗಿಕೊಳ್ಳುತ್ತಿರುವುದು ಇಂದಿನ ಸಮಾಜದಲ್ಲಿ ಗಂಭೀರ ಮತ್ತು ಭಯಾನಕ ಸಮಸ್ಯೆಯಾಗಿದೆ. ಇದು ವ್ಯಕ್ತಿ, ಕುಟುಂಬ, ದೇಶದ ಅಭಿವೃದ್ಧಿಗೆ ಮಾರಕವಾಗುತ್ತಿರುವುದೆಂದು ಸಮಾಜಶಾಸ್ತ್ರ ಪ್ರಾಧ್ಯಾಪಕ ಬುಳ್ಳಪ್ಪ ತಿಳಿಸಿದರು.
ತಾಲೂಕಿನ ಹುಲಕೋಟಿ ಗ್ರಾಮದ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕ ಹೊಸಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿರುವ 2025- 26ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾದಕದ್ರವ್ಯ ಮತ್ತು ಡಿಜಿಟಲ್ ವಂಚನೆ ತಡೆಗಟ್ಟುವಲ್ಲಿ ಯುವಕರ ಪಾತ್ರ ಕುರಿತು ಉಪನ್ಯಾಸ ನೀಡಿದರು.ಯುವಕರು ಸ್ಪರ್ಧಾತ್ಮಕ ಯುಗದಲ್ಲಿ ಸಾಮಾಜಿಕವಾಗಿ ಗೌರವಯುತ ಬದುಕು ಕಟ್ಟಿಕೊಳ್ಳುವುದರ ಕಡೆಗೆ ಗಮನಹರಿಸುತ್ತ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸ್ವ- ಇಚ್ಛೆಯಿಂದ ಮಾದಕ ದ್ರವ್ಯ ಸೇವನೆ ಮತ್ತು ಡಿಜಿಟಲ್ ವಂಚನೆಗಳಿಂದ ದೂರವಿದ್ದರೆ ಮಾತ್ರ ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ಸಾಧ್ಯವೆಂದರು.
ಜಾನಪದ ಕಲಾವಿದ ವೀರಣ್ಣ ಅಂಗಡಿ ಮಾತನಾಡಿ, ಮಾದಕ ದ್ರವ್ಯಗಳ ಸೇವನೆಗೆ ಒಳಗಾದವರಿಂದಲೇ ಡಿಜಿಟಲ್ ವಂಚನೆಗಳು ಮತ್ತು ಭಯದ ವಾತಾವರಣ ಹೆಚ್ಚಾಗುತ್ತಿದ್ದು, ಇವುಗಳಿಂದಾಗುವ ಕೌಟುಂಬಿಕ, ಸಾಮಾಜಿಕ ದುಷ್ಪರಿಣಾಮಗಳನ್ನು ಜಾನಪದ ಹಾಡುಗಳ ಮೂಲಕ ಜಾಗೃತಿ ಮೂಡಿಸಿದರು.ಪ್ರಗತಿಪರ ರೈತ ಎನ್. ವೆಂಕಟರಾವ ಮಾತನಾಡಿ, ಬಹುತೇಕ ಪಾಲಕರು ತಮ್ಮ ಮಕ್ಕಳು ಮೌಲ್ಯಾಧಾರಿತ ಉನ್ನತ ಶಿಕ್ಷಣದಿಂದ ವೈಯಕ್ತಿಕ ಬದುಕನ್ನು ರೂಪಿಸಿಕೊಳ್ಳುವುದರ ಜತೆಗೆ ಕುಟುಂಬ, ಗ್ರಾಮ, ರಾಜ್ಯ, ರಾಷ್ಟ್ರಕ್ಕೆ ಉಪಯುಕ್ತರಾದರೆ ತಮ್ಮ ಶ್ರಮ ಸಾರ್ಥಕವೆಂದು ಭಾವಿಸಿರುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿಬಿರಾಧಿಕಾರಿ ಪ್ರೊ. ಅಪ್ಪಣ್ಣ ಹಂಜೆ ಮಾತನಾಡಿ, ನಿರಂತರ ಓದು, ಬರವಣಿಗೆ ಮತ್ತು ಒಳ್ಳೆಯ ಹವ್ಯಾಸಗಳಿಂದ ಸಾರ್ವಕಾಲಿಕ ಗೌರವ ಸಂಪಾದನೆಗೆ ಪಾತ್ರರಾಗಬಹುದೆಂದರು.ಸಹ ಶಿಬಿರಾಧಿಕಾರಿ ವಿಜಯಕುಮಾರ ಸ್ವಾಗತಿಸಿ, ಪರಿಚಯಿಸಿದರು. ಸ್ವಯಂ ಸೇವಕರು ಕಾರ್ಯಕ್ರಮ ನಡೆಸಿಕೊಟ್ಟರು.