ಮಾದಕ ವಸ್ತು ವ್ಯಸನದಿಂದ ಕುಟುಂಬಕ್ಕೂ ಸಂಕಷ್ಟ

| Published : Jan 08 2024, 01:45 AM IST

ಸಾರಾಂಶ

ಯುವಕರು, ವಯಸ್ಕರು ಹೆಚ್ಚಿನ ಪ್ರಮಾಣದಲ್ಲಿ ಮಾದಕ ವ್ಯಸನಕ್ಕೆ ಒಳಗಾಗುತ್ತಿದ್ದು, ಸುಂದರ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ನೀವು ಇದರಿಂದ ದೂರವಿರುವ ಜತೆಗೆ ನಿಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ, ನೆರೆಹೊರೆಯವರಿಗೆ ಕೂಡಾ ಮಾದಕ ವಸ್ತು ಸೇವನೆ ಮಾಡದಂತೆ ಜಾಗೃತಿ ಮೂಡಿಸಬೇಕು

ಕಾರವಾರ: ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗುವುದರಿಂದ ನಿಮ್ಮ ಜತೆಗೆ ನಿಮ್ಮ ಕುಟುಂಬದವರೂ ಸಂಕಷ್ಟಕ್ಕೆ ಒಳಗಾಗುತ್ತಾರೆ. ಮಾನಸಿಕ, ಆರ್ಥಿಕ, ಸಾಮಾಜಿಕವಾಗಿ ನೀವು, ನಿಮ್ಮ ಕುಟುಂಬದವರು ಕುಗ್ಗುವಂತೆ ಮಾಡುತ್ತದೆ ಎಂದು ಕಾರವಾರ ಉಪ ವಿಭಾಗಾಧಿಕಾರಿ ಕನಿಷ್ಕ್ ಹೇಳಿದರು.

ನಗರದ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ಪೊಲೀಸ್ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ವಾಕ್ ಆ್ಯಂಡ್ ರನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾದಕ ವಸ್ತು ಸೇವನೆ ಅತ್ಯಂತ ಅಪಾಯಕಾರಿಯಾಗಿದೆ. ಹೀಗಾಗಿ ಯಾರೂ ಈ ವ್ಯಸನಕ್ಕೆ ಒಳಗಾಗಬೇಡಿ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠ ಎನ್. ವಿಷ್ಣುವರ್ಧನ ಮಾತನಾಡಿ, ಯುವಕರು, ವಯಸ್ಕರು ಹೆಚ್ಚಿನ ಪ್ರಮಾಣದಲ್ಲಿ ಮಾದಕ ವ್ಯಸನಕ್ಕೆ ಒಳಗಾಗುತ್ತಿದ್ದು, ಸುಂದರ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ನೀವು ಇದರಿಂದ ದೂರವಿರುವ ಜತೆಗೆ ನಿಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ, ನೆರೆಹೊರೆಯವರಿಗೆ ಕೂಡಾ ಮಾದಕ ವಸ್ತು ಸೇವನೆ ಮಾಡದಂತೆ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಟಾಗೋರ ಕಡಲ ತೀರದಿಂದ ಆರಂಭಿಸಿ ಸುಭಾಸ್ ಸರ್ಕಲ್, ಕೋಡಿಬಾಗ ರಸ್ತೆ ಮೂಲಕ ಪುನಃ ಕಡಲ ತೀರಕ್ಕೆ ಜಾಥಾ ಬಂದು ಸೇರಿತು. ಅಬಕಾರಿ, ಅರಣ್ಯ, ರೈಲ್ವೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.