ಯುವ ಸಮೂಹ ವ್ಯಸನಿಗಳ ಸಹವಾಸ ಹಾಗೂ ಮೋಜು ಮಸ್ತಿಗಾಗಿ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ.
ಕನ್ನಡಪ್ರಭ ವಾರ್ತೆ ಮೈಸೂರುಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ಮಹಾವಿದ್ಯಾಲಯದಿಂದ ನಗರದ ಹೆಬ್ಬಾಳದಲ್ಲಿರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಲ್ಲಿ ಸೋಮವಾರ ನಶಮುಕ್ತ ಭಾರತ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ವೇಳೆ ಮಹಾವಿದ್ಯಾಲಯದ ಉಪನ್ಯಾಸಕಿ ರಶ್ಮಿ ಮಾತನಾಡಿ, ರಾಷ್ಟ್ರದ ಭವಿಷ್ಯ ರೂಪಿಸಬೇಕಾಗಿರುವ ಯುವ ಸಮೂಹ ವ್ಯಸನಿಗಳ ಸಹವಾಸ ಹಾಗೂ ಮೋಜು ಮಸ್ತಿಗಾಗಿ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ. ವ್ಯಸನಗಳಿಗೆ ಬಲಿಯಾದವರು ಶಾರೀರಿಕ, ಮಾನಸಿಕ ನಿಯಂತ್ರಣ ಕಳೆದುಕೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಮಾದಕ ಪದಾರ್ಥಗಳ ಗೀಳು ಅಂಟಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಮಾದಕ ವ್ಯಸನದ ಸುಳಿಗೆ ಸಿಲುಕಿದರೆ, ಸುಲಭದಲ್ಲಿ ಹೊರಬರಲು ಸಾಧ್ಯವಿಲ್ಲ. ವ್ಯಸನಿಗಳಿಂದ ಆತನ ಕುಟುಂಬ ಹಾಗೂ ಸಮಾಜ ಕೂಡ ಸಮಸ್ಯೆ ಎದುರಿಸಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.ಕ್ಷಣಿಕ ಸುಖಕ್ಕೆ ಬದುಕನ್ನು ಬಲಿಕೊಡಬಾರದು. ದುಶ್ಚಟಗಳ ದುಷ್ಪರಿಣಾಮ ಅರಿತು ಎಚ್ಚರ ವಹಿಸಬೇಕು. ಮಾದಕ ವಸ್ತುಗಳ ಮೋಡಿಗೆ ಯುವ ಜನರು ಬಲಿಯಾಗದಂತೆ ಎಚ್ಚರ ವಹಿಸಲು ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ಮಹಾವಿದ್ಯಾಲಯದಿಂದ ಶಾಲಾ ಕಾಲೇಜು ಹಾಗೂ ವ್ಯಸನಮುಕ್ತ ಕೇಂದ್ರದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ವ್ಯಸನಕ್ಕೆ ದಾಸರಾದವರು ದುಶ್ಚಟಗಳನ್ನು ತ್ಯಜಿಸಬೇಕು. ವ್ಯಸನ ಮುಕ್ತ ಸಮಾಜಕ್ಕಾಗಿ ಎಲ್ಲರೂ ಸಂಘಟಿತರಾಗಿ ಕೈಜೋಡಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.ಮಹಾವಿದ್ಯಾಲಯದ ಉಪನ್ಯಾಸಕ ಜಗಿದೀಶ್ ಅವರು, ವಿಡಿಯೋ ತುಣುಕುಗಳನ್ನು ಭಿತ್ತರಿಸುವ ಮೂಲಕ ವ್ಯಸನದಿಂದಾಗುವ ದುಷ್ಪರಿಣಾಮಗ ಬಗ್ಗೆ ಮನವರಿ ಮಾಡಿಕೊಟ್ಟರು. ಮಾದಕ ವ್ಯಸನವು ವ್ಯಕ್ತಿಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿಸುವ ಒಂದು ಗಂಭೀರ ಮಾನಸಿಕ ಕಾಯಿಲೆಯಾಗಿದೆ. ಇದು ಮೆದುಳಿನ ಕಾರ್ಯವೈಖರಿಯನ್ನು ಬದಲಾಯಿಸಿ, ವ್ಯಕ್ತಿತ್ವದಲ್ಲಿ ದೋಷ, ಸಮಾಜ ವಿರೋಧಿ ನಡತೆ ಮತ್ತು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ಎಚ್ಚರಿಸಿದರು.ಇದೇ ವೇಳೆ ವ್ಯಸನಮುಕ್ತ ದೇಶಕಟ್ಟಲು ಪ್ರಮಾಣ ವಚನ ಸ್ವೀಕರಿಸಲಾಯಿತು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ಮಹಾವಿದ್ಯಾಲಯದ ಪ್ರಚಾರಕರಾದ ರಾಜಣ್ಣ, ರಾಮಚಂದ್ರ ಮೊದಲಾದವರು ಇದ್ದರು.