ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸರ ಕಾರ್ಯಾಚರಣೆ ಮತ್ತಷ್ಟು ಬಿರುಸುಗೊಂಡಿದ್ದು, ವಿದೇಶಿ ಪ್ರಜೆ ಸೇರಿ ಮೂವರನ್ನು ಬಂಧಿಸಿ ಮತ್ತೆ 85 ಲಕ್ಷ ರು. ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಹಾಗೂ ಸ್ಥಳೀಯ ಪೊಲೀಸರು ಪ್ರತ್ಯೇಕವಾಗಿ ಜಪ್ತಿ ಮಾಡಿದ್ದಾರೆ.ಸೋಲದೇವನಹಳ್ಳಿ ಸಮೀಪದ ನಿವಾಸಿ ಕೌಸ್ಸಿ ಜ್ಯೂಲ್ಸ್, ಬೆಳ್ಳಂದೂರಿನ ಅಬ್ದುಲ್ ಬಷಹರ್, ಪಶ್ಚಿಮ ಬಂಗಾಳ ಮೂಲದ ಮಲೈಕುಜರ್ ಬಂಧಿತನಾಗಿದ್ದು, ಆರೋಪಿಗಳಿಂದ 515 ಗ್ರಾಂ ಎಂಡಿಎಂಎ ಹಾಗೂ 14.7 ಕೆಜಿ ಗಾಂಜಾ ಸೇರಿದಂತೆ ಒಟ್ಟು 85.5 ಲಕ್ಷ ರು ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ.
ಹಲವು ದಿನಗಳಿಂದ ಈ ಮೂವರು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದರುವ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ, ಮಾರತ್ತಹಳ್ಳಿ ಹಾಗೂ ಸಂಪಿಗೆಹಳ್ಳಿ ಠಾಣೆ ಪೊಲೀಸರು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿದ್ದಾರೆ.7 ವರ್ಷಗಳ ಹಿಂದೆ ಭಾರತಕ್ಕೆ ಬಿಜಿನೆಸ್ ವೀಸಾದಡಿ ಐವರಿಕೋಸ್ಟಾದ ಜ್ಯೂಲ್ಸ್ ಬಂದಿದ್ದು, ಮೊದಲು ಉತ್ತರ ಭಾರತದಲ್ಲಿ ಆತ ನೆಲೆಸಿದ್ದ. ಅಲ್ಲಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ಸಿಕ್ಕಿಬಿದ್ದು ಆತ ಜೈಲು ಸೇರಿದ್ದ. ಬಳಿಕ ಜಾಮೀನು ಪಡೆದು ಹೊರ ಬಂದ ಆತ, 2 ತಿಂಗಳ ಹಿಂದೆ ನಗರಕ್ಕೆ ಬಂದು ಇಲ್ಲಿ ಡ್ರಗ್ಸ್ ಮಾರಾಟ ಶುರು ಮಾಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ವಿದೇಶಿ ಪೆಡ್ಲರ್‌ನನ್ನು ಬಂಧಿಸಲಾಯಿತು. ಆರೋಪಿಯಿಂದ 515 ಗ್ರಾಂ ಎಂಡಿಎಂಎ ಸೇರಿ 77 ಲಕ್ಷ ರು ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ.
ಆಟೋ ಚಾಲಕ ಸೆರೆಗಾಂಜಾ ಮಾರಾಟದಲ್ಲಿ ನಿರತನಾಗಿದ್ದ ಆಟೋ ಚಾಲಕ ಅಬ್ದುಲ್ ಬಷಹರ್ ಮಾರತ್ತಹಳ್ಳಿ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಹೊರ ರಾಜ್ಯದಿಂದ ಕಡಿಮೆ ಬೆಲೆಗೆ ಗಾಂಜಾ ತಂದು ಆತ ನಗರಲ್ಲಿ ದುಬಾರಿ ಬೆಲೆಗೆ ಮಾರುತ್ತಿದ್ದ. ಈತನಿಂದ 7.5 ಲಕ್ಷ ರು ಮೌಲ್ಯದ 10.370 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಅದೇ ರೀತಿ ಮತ್ತೊಂದು ಕಾರ್ಯಾಚರಣೆಯಲ್ಲಿ ಪಶ್ಚಿಮ ಬಂಗಾಲದ ಮಲೈಕುಜರ್‌ನನ್ನು ಸಂಪಿಗೆಹಳ್ಳಿ ಪೊಲೀಸರು ಸೆರೆ ಹಿಡಿದಿದ್ದಾರೆ. ನಗರದಲ್ಲಿ ಕೂಲಿ ಕೆಲಸ ಮಾಡಿದ್ದ ಆರೋಪಿ, ಒಡಿಶಾ ಕಡೆಯಿಂದ ಗಾಂಜಾ ತಂದು ನಗರದಲ್ಲಿ ಬಿಕರಿ ಮಾಡುತ್ತಿದ್ದ. ಈತನಿಂದ ₹2 ಲಕ್ಷ ಮೌಲ್ಯದ 4 ಕೇಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
-ಕೋಟ್-ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಹಿನ್ನಲೆ ಡ್ರಗ್ಸ್ ಪ್ರಕರಣದ ಹಳೇ ಆರೋಪಿಗಳನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗುತ್ತಿದೆ. ಡ್ರಗ್ಸ್ ಮಾರಾಟದಲ್ಲಿ ಮತ್ತೆ ಅವರು ಪಾಲ್ಗೊಂಡಿದ್ದರೆ ಕಾನೂನು ಕ್ರಮ ಜರುಗಿಸಲಾಗುತ್ತಿದೆ.
-ಬಿ.ದಯಾನಂದ್, ಪೊಲೀಸ್ ಆಯುಕ್ತರು, ಬೆಂಗಳೂರು