ರಾಜ್ಯವನ್ನು ಡ್ರಗ್ಸ್ ಮಾಫಿಯಾ ಸಂಪೂರ್ಣವಾಗಿ ಸುತ್ತುವರೆದಿದ್ದರೂ ಈ ಸರ್ಕಾರ ಅದನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ಕಾಪು: ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ಭಾರೀ ಡ್ರಗ್ಸ್ ಮಾಫಿಯಾವನ್ನು ಪತ್ತೆಹಚ್ಚಿರುವುದು ರಾಜ್ಯ ಸರ್ಕಾರದ ವೈಫಲ್ಯವನ್ನು ಬಹಿರಂಗಪಡಿಸಿದೆ ಎಂದು ಬಿಜೆಪಿ ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯವನ್ನು ಡ್ರಗ್ಸ್ ಮಾಫಿಯಾ ಸಂಪೂರ್ಣವಾಗಿ ಸುತ್ತುವರೆದಿದ್ದರೂ ಈ ಸರ್ಕಾರ ಅದನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಈ ಬಾರಿ ಹೊಸ ವರ್ಷಾಚರಣೆ ಬದಲಾಗಿ ಡ್ರಗ್ಸ್ ಸೆಲೆಬ್ರೇಶನ್ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದ ಅಶೋಕ್, ಮಹಾರಾಷ್ಟ್ರ ಪೊಲೀಸರು ಬೆಂಗಳೂರಿಗೆ ಬಂದು ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಈ ದಾಳಿಗೆ ನಾವು ಮಹಾರಾಷ್ಟ್ರ ಪೊಲೀಸರಿಗೆ ಸಹಕಾರ ನೀಡಿದ್ದೇವೆ ಎನ್ನುತ್ತಾರೆ ಗೃಹಸಚಿವರಿಗೆ ಕಾಮನ್ ಸೆನ್ಸ್ ಇಲ್ಲ, ನಮ್ಮ ರಾಜ್ಯದಲ್ಲಿ ಇಂತಹ ಮಾಫಿಯಾ ನಡೆಯುತಿದ್ದರೂ ನಮ್ಮ ಪೊಲೀಸರಿಗೆ ಇದು ಗೊತ್ತಾಗಲಿಲ್ಲ, ಎಂದರೇ ಇದಕ್ಕಿಂತ ದೊಡ್ಡ ಅವಮಾನ ಏನಿದೆ ? ಗುಪ್ತಚರ ವ್ಯವಸ್ಥೆ ಸತ್ತು ಹೋಗಿದೆಯೇ ? ಎಂದು ಪ್ರಶ್ನಿಸಿದರು.

ಮಂಗಳೂರು ಮತ್ತು ಬೆಂಗಳೂರು ಜೈಲುಗಳು ಡ್ರಗ್ ಪೆಡ್ಲರ್‌ಗಳಿಂದ ತುಂಬಿದ್ದು, ಜೈಲುಗಳು ಫೈವ್ ಸ್ಟಾರ್’ ಸೌಲಭ್ಯಗಳ ಕೇಂದ್ರಗಳಾಗಿವೆ. ಜೈಲುಗಳಲ್ಲಿ ಡ್ರಗ್ಸ್, ಅಫೀಮು, ಮದ್ಯ ಎಲ್ಲವೂ ಸಿಗುತ್ತಿದೆ. ಜೈಲಿನಲ್ಲಿ ಪ್ರತಿದಿನ ಒಬ್ಬ ಕಾನ್‌ಸ್ಟೆಬಲ್‌ ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾನೆ, ಅದಕ್ಕೂ ಪೊಲೀಸರ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ ಎಂಬ ಆರೋಪ ಮಾಡಿದರು.

ರಾಜ್ಯದಲ್ಲಿ ಗೃಹ ಸಚಿವರು ಕಾಣೆಯಾಗಿದ್ದಾರೆ. ಏನು ಕೇಳಿದರೂ ನೋಡೋಣ, ವರದಿ ಬಂದಿಲ್ಲ ಎನ್ನುವುದೇ ಅವರ ಉತ್ತರ ಎಂದು ಟೀಕಿಸಿದ ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿ ಜಗಳದಲ್ಲಿ ಮುಳುಗಿದ್ದಾರೆ. ಇವರು ಸಿಎಂ ಆಗುತ್ತಾರೆ, ಅವರು ಸಿಎಂ ಆಗುತ್ತಾರೆ ಎನ್ನುವ ಸರ್ಕಾರ ಇದು ಗಿಣಿ ಶಾಸ್ತ್ರದಂತಾಗಿದೆ ಎಂದು ಟೀಕಿಸಿದರು.

ಕರ್ನಾಟಕಕ್ಕೆ 500ರ - 600 ಕೋಟಿ ರು. ಮೌಲ್ಯದ ಡ್ರಗ್ಸ್ ಬಂದಿದೆ. ಡ್ರಗ್ಸ್ ಹಂಚಿಕೆಯಲ್ಲಿ ಪೊಲೀಸರೂ ಶಾಮಿಲಾಗಿದ್ದಾರೆ. ಈ ಸರ್ಕಾರಕ್ಕೆ ಇದನ್ನು ನಿಯಂತ್ರಿಸುವ ಧಮ್, ತಾಕತ್ತು ಇಲ್ಲ ಎಂದು ಕಿಡಿಕಾರಿದರು.

ಸರ್ಕಾರವನ್ನು ವೇಣಗೋಪಾಲ್ ನಡೆಸುತಿದ್ದಾರೆ

ಬೆಂಗಳೂರು ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ವಾಸಿಸುತಿದ್ದ ಮುಸ್ಲಿಮರನ್ನು ತೆರವು ಮಾಡಿದರೇ, ಅದನ್ನು ಪ್ರಶ್ನಿಸುವುದಕ್ಕೆ ಕೇರಳ ಸರ್ಕಾರಕ್ಕೆ ಯಾವ ಅಧಿಕಾರ ಇದೆ, ತೆರವಾದವರಿಗೆ ಪುನರ್ವಸತಿ ಕಲ್ಪಿಸಿ ಎಂದು ಕಾಂಗ್ರೆಸ್ ನ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ, ಹಾಗಿದ್ರೆ ಸರ್ಕಾರವನ್ನು ವೇಣುಗೋಪಾಲ್ ನಡೆಸುತಿದ್ದಾರೆಯೇ ಎಂದು ಆಶೋಕ್ ಪ್ರಶ್ನಿಸಿದರು. ಈ ಪ್ರಕರಣದ ಬಗ್ಗೆ ಕೇರಳದ ಜನಪ್ರತಿನಿಧಿಗಳ ನಿಯೋಗ ಬೆಂಗಳೂರಿಗೆ ಬರುವುದಕ್ಕೆ ಹೇಗೆ ಅವಕಾಶ ನೀಡಿದಿರಿ ? ಮಹಾರಾಷ್ಟ್ರದ ಕನ್ಹೇರಿ ಸ್ವಾಮೀಜಿ ಕರ್ನಾಟಕಕ್ಕೆ ಬರುವುದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತೀರಿ, ಈ ನಿಯೋಗ ಬರುವುದಕ್ಕೆ ಯಾಕೆ ತಡೆಯಲಿಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದರು. ಕೋಗಿಲುನಲ್ಲಿ ಅಕ್ರಮವಾಗಿ ವಾಸವಾಗಿದ್ದವರು ನಮ್ಮ ರಾಜ್ಯದವರಲ್ಲ ಎಂದು ಸ್ವತಃ ಸಿಎಂ ಹೇಳಿದ್ದಾರೆ, ಅವರ ಬಗ್ಗೆ ಕೇರಳಕ್ಕೆ ಅಷ್ಟು ಕಾಳಜಿ ಇದ್ದರೇ ಅವರನ್ನು ಕರೆದುಕೊಂಡು ಹೋಗಿ ಬಂಗ್ಲೆ ಕಟ್ಟಿ ಕೊಡಲಿ ಎಂದು ಸವಾಲು ಹಾಕಿದರು. ಕೇರಳದಲ್ಲಿ ಆನೆ ತುಳಿತಕ್ಕೊಳಗಾದವರಿಗೆ ಹಣ ಕೊಟ್ಟಿದ್ದೀರಿ, ಈಗ ನಮ್ಮ ನೆಲವನ್ನೂ ಕೇರಳ‍ಕ್ಕೆ ಕೊಡುವುದಕ್ಕೆ ಹೊರಟಿದ್ದೀರಿ, ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ ? ರಾಹುಲ್ ಪ್ರಿಯಾಂಕರನ್ನು ಮೆಚ್ಚಿಸಲು ಹೀಗೆ ಮಾಡುತಿದ್ದೀರಾ ? ಕೇರಳ ಮುಂದೆ ರಾಜ್ಯ ತಲೆ ತಗ್ಗಿಸಿ ನಿಂತಿದೆ, ಇಡೀ ದೇಶದ ಮುಂದೆ ರಾಜ್ಯದ ಮಾನ ಹರಾಜಾಗಿದೆ, ಸಿಎಂ ಡಿಸಿಎಂ ರಾಜ್ಯದ ಜನತೆ ಕ್ಷಮೆ ಕೇಳಿ ಎಂದು ಆಗ್ರಹಿಸಿದರು.

ಬಿಜೆಪಿ–ಜೆಡಿಎಸ್ ಮೈತ್ರಿ ಹಾಲುಜೇನಿನಂತಿದೆ

ಬಿಜೆಪಿ ಮತ್ತು ಜೆಡಿಎಸ್ ಸಂಬಂಧ ಹಾಲು-ಜೇನು ತರ ಇದೆ, ಇದಕ್ಕೆಯಾರು ಹುಳಿ ಹಿಂಡೋದು ಬೇಡ ಎಂದು ಹೇಳಿದ ಅಶೋಕ್, ನಾವು ಎನ್‌ಡಿಎ ಪಾಲುದಾರರು. ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ. ಮುಂದಿನ ಚುನಾವಣೆಗಳಲ್ಲೂ ಜೆಡಿಎಸ್ ಜೊತೆ ಹೊಂದಾಣಿಕೆ ಮುಂದುವರಿಯಲಿದೆ ಎಂದರು.

ವಿಧಾನಸಭಾ ಚುನಾವಣೆ ಯಾವತ್ತೂ ಬೇಕಾದರೂ ಬರಬಹುದು, ನಾವು ಸರ್ಕಾರ ಬೀಳಿಸಲು ಹೋಗಲ್ಲ, ಅದರಲ್ಲಿ ನಮಗೆ ಆಸಕ್ತಿ ಇಲ್ಲ, ಸರ್ಕಾರ ತಾನಾಗಿಯೇ ಬಿದ್ದು, ತೆಲಂಗಾಣ ಬಿಹಾರ ಮಾದರಿಯಲ್ಲೇ ಬಹುಮತದೊಂದಿಗೆ ಬಿಜೆಪಿ ಜೆಡಿಎಸ್ ಮೈತ್ರಿ 170 ಸೀಟು ಗೆಲ್ಲಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಸ್ವತಂತ್ರ್ಯವಾಗಿ ಸ್ಪರ್ಧಿಸುವ ಬಗ್ಗೆ ದೇವೇಗೌಡರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ, ಆದರೇ ನಮ್ಮ ಪಕ್ಷದ ವರಿಷ್ಟರು ಅವರೊಂದಿಗೆ ಕೂತು ಮಾತನಾಡಿ ನಿರ್ಧಾರಕ್ಕೆ ಬರುತ್ತಾರೆ ಎಂದು ಸಮಜಾಯಿಶಿ ನೀಡಿದರು. ವಿಜಯೇಂದ್ರ ರಾಜ್ಯಾಧ್ಯಕ್ಷರ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಅವರು ವರಿಷ್ಠರಿಂದ ನಾಮನಿರ್ದೇಶನಗೊಂಡಿದ್ದಾರೆ. ಅವರನ್ನು ಮುಂದುವರಿಸಬೇಕೋ ಬೇಡವೋ ಎಂಬುದನ್ನು ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನಿಸುತ್ತಾರೆ. ನಮ್ಮ ಪಕ್ಷದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆ ಇದೆ. ಅಭಿಪ್ರಾಯ ಭೇದ ಸಹಜ, ಆದರೆ ಕೇಂದ್ರ ನಾಯಕರ ತೀರ್ಮಾನವೇ ಅಂತಿಮ ಎಂದು ಆರ್. ಅಶೋಕ್ ಹೇಳಿದರು.