ಮೈಸೂರಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆ : ಆಘಾತಕಾರಿ ವಿಷಯ ಬೆಳಕಿಗೆ

| N/A | Published : Jul 28 2025, 12:31 AM IST / Updated: Jul 28 2025, 05:35 AM IST

ಮೈಸೂರಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆ : ಆಘಾತಕಾರಿ ವಿಷಯ ಬೆಳಕಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು, ಮಂಗಳೂರು, ಬೆಳಗಾವಿ ಬಳಿಕ ಈಗ ಮೈಸೂರಲ್ಲೂ ಡ್ರಗ್ಸ್‌ ಜಾಲದ ನಂಟು ಬಯಲಾಗಿದ್ದು, ಮೈಸೂರಿನಲ್ಲೇ ಮಾದಕ ವಸ್ತು ತಯಾರಿಕಾ ಫ್ಯಾಕ್ಟರಿ ನಡೆಯುತ್ತಿದ್ದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

  ಮೈಸೂರು :  ಬೆಂಗಳೂರು, ಮಂಗಳೂರು, ಬೆಳಗಾವಿ ಬಳಿಕ ಈಗ ಮೈಸೂರಲ್ಲೂ ಡ್ರಗ್ಸ್‌ ಜಾಲದ ನಂಟು ಬಯಲಾಗಿದ್ದು, ಮೈಸೂರಿನಲ್ಲೇ ಮಾದಕ ವಸ್ತು ತಯಾರಿಕಾ ಫ್ಯಾಕ್ಟರಿ ನಡೆಯುತ್ತಿದ್ದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಖಚಿತ ಸುಳಿವಿನ ಮೇರೆಗೆ ಮಹಾರಾಷ್ಟ್ರ ಪೊಲೀಸರು ಮೈಸೂರು ಹೊರವಲಯದ ರಿಂಗ್ ರಸ್ತೆ ಬಳಿ ಭಾನುವಾರ ಎಂಡಿಎಂಎ ಮಾದಕ ವಸ್ತು ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ, 13 ಕೆ.ಜಿ.ಎಂಡಿಎಂಎ, 50 ಕೆ.ಜಿ. ದ್ರವರೂಪದ ಡ್ರಗ್ಸ್‌ ಪತ್ತೆಯಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸರಿಸುಮಾರು 100 ಕೋಟಿ ರು. ಎಂದು ಅಂದಾಜಿಸಲಾಗಿದೆ.

ವಿಶೇಷವೆಂದರೆ, ಇಲ್ಲಿನ ಡ್ರಗ್ಸ್‌ ತಯಾರಿಕಾ ಘಟಕದಿಂದ ಮಹಾರಾಷ್ಟ್ರಕ್ಕೆ ಡ್ರಗ್ಸ್‌ ಪೂರೈಸಲಾಗುತ್ತಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. ದಾಳಿ ವೇಳೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಯ ಇನ್ಸ್‌ ಪೆಕ್ಟರ್‌ ಲಕ್ಷ್ಮಿಕಾಂತ್ ತಳವಾರ್ ಅವರನ್ನು ಅಮಾನತುಗೊಳಿಸಲಾಗಿದೆ.

ಮಹಾ ಪೊಲೀಸರಿಂದ ದಾಳಿ:

ಮಹಾರಾಷ್ಟ್ರ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಡ್ರಗ್‌ ಪೆಡ್ಲರ್‌ವೊಬ್ಬ ಮೈಸೂರಿನಿಂದ ಡ್ರಗ್ಸ್‌ ಪೂರೈಸಲಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದ. ಮೈಸೂರಿನಲ್ಲಿ ಭಾರಿ ಪ್ರಮಾಣದ ಡ್ರಗ್ಸ್‌ ಸಂಗ್ರಹಿಸಿ, ಬೇರೆಡೆಗೆ ಸಾಗಿಸಲಾಗುತ್ತದೆ. ಎಂಡಿಎಂಎ ಮಾದಕವಸ್ತುವನ್ನು ಮಾತ್ರೆ ಅಥವಾ ಪೌಡರ್‌ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಹೇಳಿದ್ದ. ಈ ಹಿನ್ನೆಲೆಯಲ್ಲಿ ನಗರದ ನರಸಿಂಹರಾಜ ಪೊಲೀಸ್‌ ಠಾಣಾ ವ್ಯಾಪ್ತಿಗೆ ಬರುವ, ನಗರದ ವರ್ತುಲ ರಸ್ತೆಯ ಬೆಲವತ್ತ ಬಳಿಯ ಗ್ಯಾರೇಜ್‌ವೊಂದರ ಮೇಲೆ ಮಹಾರಾಷ್ಟ್ರ ಮಾದಕ ವಸ್ತು ನಿಗ್ರಹದಳದ ಪೊಲೀಸರು, ಸ್ಥಳೀಯ ಪೊಲೀಸರ ನಿರವಿನೊಂದಿಗೆ ಶನಿವಾರ ರಾತ್ರಿ ದಾಳಿ ನಡೆಸಿದ್ದಾರೆ.

ಈ ವೇಳೆ, ಗ್ಯಾರೇಜ್‌ನಲ್ಲಿ 13 ಕೆ.ಜಿ. ಎಂಡಿಎಂಎ, ತಯಾರಿಕಾ ಪ್ರಕ್ರಿಯೆಯಲ್ಲಿರುವ 50 ಕೆ.ಜಿ.ದ್ರವರೂಪದ ಡ್ರಗ್ಸ್‌ ಸಿಕ್ಕಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸರಿ ಸುಮಾರು 100 ಕೋಟಿ ರು.ಎಂದು ಅಂದಾಜಿಸಲಾಗಿದೆ. ಈ ವೇಳೆ, ನಾಲ್ವರನ್ನು ಬಂಧಿಸಲಾಗಿದ್ದು, ಈ ಪೈಕಿ ಇಬ್ಬರು ಸ್ಥಳೀಯರು ಹಾಗೂ ಇಬ್ಬರು ಮಹಾರಾಷ್ಟ್ರದವರು. ಪ್ರಕರಣದ ತನಿಖೆ ಮುಂದುವರಿದಿದೆ.

ಇನ್ಸ್‌ಪೆಕ್ಟರ್‌ ಅಮಾನತು:

ದಾಳಿ ಬೆನ್ನಲ್ಲೇ ನಗರದ ನರಸಿಂಹರಾಜ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಲಕ್ಷ್ಮಿಕಾಂತ್ ತಳವಾರ್ ಅವರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ. ಸದರಿ ಸ್ಥಳಕ್ಕೆ ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇನ್ಸ್‌ಪೆಕ್ಟರ್‌ ಶಬ್ಬೀರ್ ಹುಸೇನ್ ಅವರನ್ನು ಪ್ರಭಾರ ಆಗಿ ನೇಮಕ ಮಾಡಲಾಗಿದೆ. 

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಮಾದಕ ವಸ್ತು ಪೂರೈಕೆದಾರನೊಬ್ಬನನ್ನು ಬಂಧಿಸಿದ್ದ ಮಹಾರಾಷ್ಟ್ರ ಪೊಲೀಸರು

ವಿಚಾರಣೆ ವೇಳೆ ತಾನು ಮೈಸೂರಿನಿಂದ ಡ್ರಗ್ಸ್‌ ತಂದು ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ಆತನ ಮಾಹಿತಿ

ಈ ಹಿನ್ನೆಲೆಯಲ್ಲಿ ಮೈಸೂರಿನ ಹೊರ ವರ್ತಲ ರಸ್ತೆಯ ಕಟ್ಟಡವೊಂದರ ಮೇಲೆ ಮಹಾರಾಷ್ಟ್ರ ಪೊಲೀಸರ ದಾಳಿ

ದಾಳಿ ವೇಳೆ 13 ಕೆ.ಜಿ.ಎಂಡಿಎಂಎ, 50 ಕೆ.ಜಿ. ದ್ರವರೂಪದ ಡ್ರಗ್ಸ್‌ ಪತ್ತೆ. ಪ್ರಕರಣ ಸಂಬಂಧ ನಾಲ್ವರು ಬಂಧನ

ವಶಪಡಿಸಿಕೊಂಡ ಮಾದಕ ವಸ್ತುವಿನ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು 100 ಕೋಟಿ ರು.

Read more Articles on