ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕೈದಿಗಳ ಗುಂಪಿನ ಮಧ್ಯೆ ಘರ್ಷಣೆಯಾಗಿದ್ದ ಜಿಲ್ಲಾ ಉಪ ಕಾರಾಗೃಹದ ಗ್ರಂಥಾಲಯದಲ್ಲಿ ಗಾಂಜಾ ಹಾಗೂ ಮೊಬೈಲ್ ಚಾರ್ಜರ್ ಸೇರಿ ನಿಷೇಧಿತ ವಸ್ತುಗಳು ಪತ್ತೆಯಾದ ಬೆನ್ನಲ್ಲೇ ಜೈಲು ಅಧೀಕ್ಷಕರು, ಜೈಲರ್, ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ನಗರದ ಬಸವ ನಗರ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಜಿಲ್ಲಾ ಉಪ ಕಾರಾಗೃಹದ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಹಿಂದೆ ಕನ್ನಡಪ್ರಭ ವಿಶೇಷ ವರದಿಯೂ ಮಾಡಿತ್ತು. ಇದೀಗ ಗ್ರಂಥಾಲಯದ ಪುಸ್ತಕಗಳ ಮಧ್ಯೆ ಗಾಂಜಾ ಸೊಪ್ಪಿನ ಕವರ್, ಮೊಬೈಲ್ ಚಾರ್ಜಿಂಗ್ ಕೇಬಲ್ ಪತ್ತೆಯಾಗಿ ಜಿಲ್ಲಾ ಕಾರಾಗೃಹದಲ್ಲಿ ಎಲ್ಲವೂ ಸರಿ ಇಲ್ಲವೆಂಬ ಸುಳಿವು ನೀಡಿದೆ.
ನ್ಯಾಯಾಧೀಶರ ತನಿಖಾ ತಂಡದಿಂದ ಪರಿಶೀಲನೆಕಾರಾಗೃಹದಲ್ಲಿ ಜ.28ರಂದು ಘೋರ ಅಪರಾಧ ಎಸಗಿದ ಆರೋಪಿಗಳ ಗುಂಪುಗಳ ಮಧ್ಯೆ ಮಾತಿಗೆ ಮಾತು ಬೆಳೆದು, ಹೊಡೆದಾಟವೂ ನಡೆದಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸೇರಿ ಹಿರಿಯ ಅಧಿಕಾರಿಗಳು ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಅದರ ಬೆನ್ನಲ್ಲೇ ನಿಷೇಧಿತ ವಸ್ತುಗಳು ಪತ್ತೆಯಾಗಿರುವುದು ಕಾರಾಗೃಹ ಹಾಗೂ ಅಲ್ಲಿನ ಅಧಿಕಾರಿ, ಸಿಬ್ಬಂದಿ ಕಾರ್ಯವೈಖರಿ ಬಗ್ಗೆಯೇ ಸಾಕಷ್ಟು ಅನುಮಾನಗಳ ಹುಟ್ಟು ಹಾಕಿವೆ.
ಈ ಬಗ್ಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳ ನೇತೃತ್ವದ ತನಿಖಾ ತಂಡವು ಪರಿಶೀಲನೆ ನಡೆಸಿದೆ.ಜಿಲ್ಲಾ ಉಪ ಕಾರಾಗೃಹದ ಅಧೀಕ್ಷಕಿ ಭಾಗೀರಥಿ, ಜೈಲರ್ ಕೆ.ಎಸ್.ಮಾನ್ವಿ, ಸಿಬ್ಬಂದಿ ವಿರುದ್ಧ ಬಸವ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶಿವಮೊಗ್ಗದ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ಅನಿತ್ ಆರ್. ಬಸವ ನಗರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. ಐಪಿಸಿ ಮತ್ತು ಕರ್ನಾಟಕ ಕಾರಾಗೃಹ ತಿದ್ದುಪಡಿ ಅಧಿನಿಯಮ 2022 ಹಾಗೂ ಕಾಲಂ 42, ಎನ್‌ಡಿಪಿಎಸ್ ಕಾಯ್ದೆ 20(ಬಿ) ಅಡಿಯಲ್ಲಿ ಕೇಸ್ ದಾಖಲಾಗಿದೆ. ಗಾಂಜಾ ಮತ್ತಿನಲ್ಲಿ ತೇಲಾಟ; ತಪಾಸಣೆಯಲ್ಲಿ ದೃಢ
ಜಿಲ್ಲಾ ಉಪ ಕಾರಾಗೃಹದಲ್ಲಿ ಫೆ.28ರಂದು ಎರಡು ಗುಂಪುಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಹೊಡೆದಾಡಿದ್ದ ಕೈದಿಗಳು ಗಾಂಜಾ ಮತ್ತಿನಲ್ಲಿದ್ದರು ಎಂಬ ಆಘಾತಕಾರಿ ವಿಚಾರವು ಬಯಲಾಗಿದೆ. ಎರಡು ಕೈದಿಗಳ ಗುಂಪಿನ ಮಧ್ಯೆ ಮಾತಿನ ಚಕಮಕಿ, ಹೊಡೆದಾಟದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಉಪ ಕಾರಾಗೃಹ ಕೈದಿಗಳ ಸುಧಾರಿಸುವ ತಾಣವಾಗದೇ ಕಾನೂನು ಬಾಹಿರ ಚಟುವಟಿಕೆಗಳ ಅಡ್ಡೆಯಾಗಿತ್ತಾ ಎಂಬ ಪ್ರಶ್ನೆಗಳಿಗೆ ಕಾರಣವಾಗಿದೆ. ಕೈದಿಗಳು ಗಾಂಜಾ ಸೇವನೆ ಮಾಡಿದ್ದರೋ, ಇಲ್ಲವೋ ಎಂಬ ಬಗ್ಗೆ ಡಿಎಲ್‌ಎಲ್ ತಂಡವು ತಪಾಸಣೆ ಕೈಗೊಂಡಿದೆ. ಮೇಲ್ನೋಟಕ್ಕೆ ಕೆಲವರು ಗಾಂಜಾ ಸೇವಿಸಿರುವುದು ಕಂಡು ಬಂದಿದೆ. ಗ್ರಂಥಾಲಯದ ಪುಸ್ತಕದಲ್ಲಿ ಕಾಗದಗಳ ಕತ್ತರಿಸಿ, ಅದರಲ್ಲಿ ಗಾಂಜಾ ಇಟ್ಟು ಮಾರಾಟ ಮಾಡಿರುವುದು ಕಂಡು ಬಂದಿದೆ. ನಿಷೇಧಿತ ವಸ್ತುಗಳು ಪತ್ತೆಯಾದರೂ ಜೈಲು ಅಧೀಕ್ಷಕರು, ಸಿಬ್ಬಂದಿ ವಿರುದ್ಧ ಯಾವುದೇ ಕ್ರಮ ಇನ್ನೂ ಕೈಗೊಳ್ಳದಿರುವುದು ಸಾಕಷ್ಟು ಪ್ರಶ್ನೆಗೆ ಕಾರಣವಾಗಿದೆ. ಅಲ್ಲದೇ, ಜ.28ರಂದು ಬಡಿದಾಡಿದ ಕೈದಿಗಳು ಹಂದಿ ಅಣ್ಣಿ ಕೇಸ್ ನ ಆರೋಪಿಗಳು ಹಾಗೂ ಹೊಳಲ್ಕೆರೆ ಶೂಟೌಟ್ ಪ್ರಕರಣದ ಆರೋಪಿಗಳ ಮಧ್ಯೆ ಗಲಾಟೆಯಾಗಿತ್ತು. ಈ ಪೈಕಿ ಹೊಳಲ್ಕೆರೆ ಶೂಟೌಟ್ ಪ್ರಕರಣ ವಿಚಾರಣಾಧೀನ ಕೈದಿಗಳಿಗೆ ಪೆಟ್ಟಾಗಿತ್ತು.ನ್ಯಾಯಾಧೀಶರಿಗೆ ಖಾಸಗಿ ದೂರು:
ಸಂಜೀತ್ ಸಿಂಗ್, ಬೋಲೆ ಎಂಬಿಬ್ಬರು ವಿಚಾರಣಾಧೀನ ಕೈದಿಗಳಿಗೆ ಗಾಯವಾಗಿದ್ದಲ್ಲದೇ, ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಈ ಘಟನೆಗೆ ಸಂಬಂಧಿಸಿ 13 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇಷ್ಟೆಲ್ಲಾ ಆದ ಬಳಿಕ ಸಾರ್ವಜನಿಕರೊಬ್ಬರು ಜಿಲ್ಲಾ ಉಪ ಕಾರಾಗೃಹದ ಅಕ್ರಮ, ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ನ್ಯಾಯಾಧೀಶರಿಗೆ ಖಾಸಗಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣಾಧೀನ ಕೈದಿಗಳ ರಕ್ತ ಪರೀಕ್ಷೆ ವೇಳೆ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.