ವಿದೇಶಗಳಿಂದ ರಾಜ್ಯಕ್ಕೆ ವಿಮಾನಗಳ ಮೂಲಕ ಕೋಟ್ಯಂತರ ರು. ಮೌಲ್ಯದ ಡ್ರಗ್ಸ್‌ ಹೊತ್ತು ತಂದರೆ, ಪರರಾಜ್ಯಗಳಿಂದ ಗಾಂಜಾ ಸೇರಿ ಇತರೆ ಮಾದಕ ದ್ರವ್ಯಗಳು ಕರ್ನಾಟಕದ ಒಳನುಸುಳಲು ರೈಲ್ವೆ ಮಾರ್ಗವೇ ರಹದಾರಿಯಾಗಿ ಬಳಕೆಯಾಗುತ್ತಿದೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಮಯೂರ್‌ ಹೆಗಡೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿದೇಶಗಳಿಂದ ರಾಜ್ಯಕ್ಕೆ ವಿಮಾನಗಳ ಮೂಲಕ ಕೋಟ್ಯಂತರ ರು. ಮೌಲ್ಯದ ಡ್ರಗ್ಸ್‌ ಹೊತ್ತು ತಂದರೆ, ಪರರಾಜ್ಯಗಳಿಂದ ಗಾಂಜಾ ಸೇರಿ ಇತರೆ ಮಾದಕ ದ್ರವ್ಯಗಳು ಕರ್ನಾಟಕದ ಒಳನುಸುಳಲು ರೈಲ್ವೆ ಮಾರ್ಗವೇ ರಹದಾರಿಯಾಗಿ ಬಳಕೆಯಾಗುತ್ತಿದೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಕಳೆದ ಮೂರು ವರ್ಷಗಳ ರೈಲ್ವೆ ಪೊಲೀಸರ ದಾಖಲೆಗಳು ಈ ಆತಂಕಕ್ಕೆ ಪೂರಕ ಅಂಕಿ-ಅಂಶ ಒದಗಿಸಿವೆ. ರಾಜ್ಯಕ್ಕೆ ಅಸ್ಸಾಂ, ತ್ರಿಪುರ, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ನೆರೆಯ ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳಿಂದ ರೈಲುಗಳಲ್ಲಿ ಟನ್‌ ಗಟ್ಟಲೇ ಗಾಂಜಾ ಹಾಗೂ ಇತರೆ ಡ್ರಗ್ಸ್ ಸಾಗಣೆ ನಡೆದಿದೆ.

ರಾಜ್ಯಕ್ಕೆ ಥಾಯ್ಲೆಂಡ್‌, ನೈಜೀರಿಯಾ, ಮಲೇಷಿಯಾ ಹಾಗೂ ಪಾಕಿಸ್ತಾನ ಸೇರಿ ಇತರೆ ದೇಶಗಳಿಂದ ವಿಮಾನಗಳ ಮೂಲಕ ಅಂತಾರಾಷ್ಟ್ರೀಯ ಮಾದಕ ವಸ್ತು ಮಾರಾಟ ಜಾಲವು ಡ್ರಗ್ಸ್ ಸಾಗಣೆ ಮಾಡುತ್ತಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಅದೇ ರೀತಿ ಅಂತರ್ ರಾಜ್ಯ ಡ್ರಗ್ಸ್ ಮಾಫಿಯಾ ರೈಲುಗಳನ್ನೇ ಸಾಗಣೆ ಮಾರ್ಗವಾಗಿ ನೆಚ್ಚಿಕೊಂಡಿದೆ.

ಯಾವ್ಯಾವ ರೈಲುಗಳು?:

ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಹಾಗೂ ಬೆಳಗಾವಿ ಸೇರಿ ರಾಜ್ಯದ ಪ್ರಮುಖ ನಗರಗಳಿಗೆ ಹೊರ ರಾಜ್ಯಗಳಿಂದ ಸಂಪರ್ಕಿಸುವ ರೈಲುಗಳನ್ನೇ ತಮ್ಮ ಕುಕೃತ್ಯಕ್ಕೆ ಡ್ರಗ್ಸ್ ಮಾಫಿಯಾ ಬಳಸಿಕೊಳ್ಳುತ್ತಿದೆ. ಈ ಮಾತಿಗೆ ಶಾಲಿಮಾರ್-ವಾಸ್ಕೋ-ಡ-ಗಾಮಾ, ಶಾಲೀಮಾರ್-ಯಶವಂತಪುರ ಎಕ್ಸ್‌ಪ್ರೆಸ್, ಪ್ರಶಾಂತಿ ಎಕ್ಸ್‌ಪ್ರೆಸ್, ಶೇಷಾದ್ರಿ ಎಕ್ಸ್‌ಪ್ರೆಸ್, ಅಮರಾವತಿ ಎಕ್ಸ್‌ಪ್ರೆಸ್, ಎಸ್‌ಎಂವಿಟಿ ಎಕ್ಸ್‌ಪ್ರೆಸ್‌, ಕಾಕಿನಾಡ ಎಕ್ಸ್‌ಪ್ರೆಸ್‌ ಸೇರಿ ಇತರೆ ರೈಲುಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಗಾಂಜಾ ಪತ್ತೆಯಾಗಿರುವುದೇ ಈ ಮಾತಿಗೆ ಪುರಾವೆಯಾಗಿದೆ.

ರೈಲುಗಳ ಮೂಲಕ ನುಸುಳುವ ಗಾಂಜಾ ಗುಂತಕಲ್, ಬಳ್ಳಾರಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಬೆಂಗಳೂರು ಮಾರ್ಗದಲ್ಲಿ ಸ್ಥಳೀಯರ ಪೆಡ್ಲರ್‌ಗಳಿಗೆ ಪೂರೈಕೆಯಾಗುತ್ತವೆ. ಬೆಂಗಳೂರಿಗೆ ಬಂದು ಗಾಂಜಾ ಖರೀದಿಸುವ ಮಂಗಳೂರು ಪೆಡ್ಲರ್‌ಗಳು ನಂತರ ಸ್ಥಳೀಯವಾಗಿ ವಹಿವಾಟು ನಡೆಸುತ್ತಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಆಪರೇಷನ್ ನಾರ್ಕೋ:

ರೈಲ್ವೆ ಭದ್ರತಾ ಪಡೆ (ಆರ್‌ಪಿಎಫ್‌) ರಾಜ್ಯದಲ್ಲಿ ‘ಆಪರೇಷನ್‌ ನಾರ್ಕೋ’ ಹೆಸರಿನಡಿ ನಿರಂತರ ದಾಳಿ ನಡೆಸುತ್ತಿದೆ. ಜತೆಗೆ ರಾಜ್ಯ ರೈಲ್ವೆ ಪೊಲೀಸರೂ(ಜಿಆರ್‌ಪಿ) ಡ್ರಗ್ಸ್‌ ಪತ್ತೆಯಲ್ಲಿ ತೊಡಗಿದ್ದಾರೆ. ಇದಲ್ಲದೆ ಮಾಹಿತಿ ಮೇರೆಗೆ ಸಿಸಿಬಿ (ಮಾದಕ ದ್ರವ್ಯ ನಿಗ್ರಹ ದಳ), ಅಬಕಾರಿ ಅಧಿಕಾರಿಗಳು ಕೂಡ ದಾಳಿ ನಡೆಸಿ, ರೈಲು, ರೈಲ್ವೆ ನಿಲ್ದಾಣಗಳಲ್ಲಿ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.

3 ವರ್ಷಗಳಲ್ಲಿ 3.82 ಟನ್‌ ಗಾಂಜಾ:

ನೈಋತ್ಯ ರೈಲ್ವೆಯ ಬೆಂಗಳೂರು, ಮೈಸೂರು, ಹುಬ್ಬಳ್ಳಿ ವಿಭಾಗದಲ್ಲಿ 3 ವರ್ಷದಲ್ಲಿ ಆರ್‌ಪಿಎಫ್‌ ಹಾಗೂ ಜಿಆರ್‌ಪಿ ಸೇರಿ ₹ 34 ಕೋಟಿಗೂ ಅಧಿಕ ಮೌಲ್ಯದ 3.82 ಟನ್‌ ಗಾಂಜಾ ವಶಕ್ಕೆ ಪಡೆದಿವೆ. ಈ ಪೈಕಿ ಆರ್‌ಪಿಎಫ್‌ 212 ಪ್ರಕರಣ ಭೇದಿಸಿ ₹ 16.24 ಕೋಟಿ ಮೌಲ್ಯದ ಸುಮಾರು 19.35 ಕ್ವಿಂಟಲ್‌ ಗಾಂಜಾ ವಶಪಡಿಸಿಕೊಂಡು 136 ಆರೋಪಿಗಳನ್ನು ಬಂಧಿಸಿದೆ. ಇದೇ ಅವಧಿಯಲ್ಲಿ ರಾಜ್ಯ ರೈಲ್ವೆ ಪೊಲೀಸರು ಕೂಡ ₹16.28 ಕೋಟಿ ಮೌಲ್ಯದ 19.49 ಕ್ವಿಂಟಲ್‌ ಗಾಂಜಾ ವಶಕ್ಕೆಪಡೆದಿದೆ.

ದಿಂಬು, ಬೆಡ್‌ಶೀಟಲ್ಲಿ ಸಾಗಣೆ:

ಘಟನೆ1: ಅಗರ್ತಲಾದಿಂದ ಎಸ್ಎಂವಿಟಿ ಎಕ್ಸ್‌ಪ್ರೆಸ್‌ ರೈಲಲ್ಲಿ ಬಂದಿದ್ದ ದೀಪನ್‌ ದಾಸ್ ರೈಲಿನ ದಿಂಬು ಹಾಗೂ ಬೆಡ್‌ಶೀಟ್‌ ಒಳಗೆ ಗಾಂಜಾ ಇಟ್ಟು ತಂದಾಗ ಸಿಕ್ಕಿಬಿದ್ದಿದ್ದ.

ಘಟನೆ2: ರೈಲು ಕೆಎಸ್‌ಆರ್‌ ನಿಲ್ದಾಣದ ಬಳಿ ಬರುತ್ತಲೇ ಪೆಡ್ಲರ್‌ಗಳು ಬಿನ್ನಿಮಿಲ್‌ ಹತ್ತಿರ ತಾವು ತಂದಿದ್ದ ಗಾಂಜಾ ಬಾಕ್ಸ್‌ ಎಸೆದಿದ್ದರು. ಪೂರ್ವ ಮಾಹಿತಿಯಿದ್ದ ಸಿಸಿಬಿ ಪೊಲೀಸರು ಆರೋಪಿಗಳನ್ನು ಮಾಲುಸಮೇತ ಬಂಧಿಸಿದ್ದರು.

ಘಟನೆ;3 ಚೋಟಾ ಮುಂಬೈ ಹುಬ್ಬಳ್ಳಿಗೆ ಒಡಿಶಾದಿಂದ 20 ಕೆ.ಜಿ. ಗಾಂಜಾ ತಂದಿದ್ದವ ಎಸ್‌ಎಸ್‌ಎಸ್‌ ನಿಲ್ದಾಣದ 4ನೇ ಪ್ಲಾಟ್‌ಫಾರ್ಮ್‌ನಲ್ಲಿ ಸಿಕ್ಕಿಬಿದ್ದಿದ್ದ. ಈ ಘಟನೆಗಳಲ್ಲೆಲ್ಲ ಜತೆಗಿದ್ದವರು ನಾಪತ್ತೆ ಆಗಿದ್ದಾರೆ.

ಸವಾಲು:

ಗಾಂಜಾ ತಂದವರು ಬಟ್ಟೆ, ಟ್ರಾಲಿ ಬ್ಯಾಗನ್ನು ಬೋಗಿಯಲ್ಲಿಟ್ಟು ತಾವು ಬೇರೆ ಬೋಗಿಯಲ್ಲಿರುತ್ತಾರೆ. ತಪಾಸಣೆ ವೇಳೆ ಮಾದಕವಸ್ತು ಸಿಗುತ್ತದೆಯೇ ವಿನಃ ಹೆಚ್ಚಿನ ವೇಳೆ ಆರೋಪಿಗಳು ಪರಾರಿ ಆಗುತ್ತಾರೆ. ಹುಬ್ಬಳ್ಳಿಯ ಎಸ್‌ಎಸ್‌ಎಸ್‌, ಬೆಂಗಳೂರಿನ ಕೆಎಸ್‌ಆರ್‌, ಮೈಸೂರಿನಂಥ ದೊಡ್ಡ ನಿಲ್ದಾಣಗಳಿಗೆ ಬರುವ ಮುನ್ನವೇ ಪೆಡ್ಲರ್‌ಗಳು ಹೆಚ್ಚಿನ ಭದ್ರತೆ ಇರದ ಸಣ್ಣಪುಟ್ಟ ರೈಲು ನಿಲ್ದಾಣದಲ್ಲಿ ಮಾಲುಸಮೇತ ಇಳಿದು ಪರಾರಿಯಾಗುತ್ತಿದ್ದಾರೆ. ಅಲ್ಲದೆ, ರೈಲು ನಿಧಾನವಾಗಿ ಓಡುವಾಗ ಇಳಿದುಬಿಡುತ್ತಾರೆ. ಪ್ಲಾಟ್‌ಫಾರ್ಮ್‌ನ ಯಾವುದೋ ಮೂಲೆಯ ಡ್ರಗ್ಸ್‌ ಇಟ್ಟು ಹೋಗುತ್ತಾರೆ. ಜತೆಗೆ ಇವರ ವ್ಯವಹಾರ ಕೋಡ್‌ವರ್ಡ್‌, ಮೊಬೈಲ್‌ ಕರೆ ಮೂಲಕ ನಡೆಯುವುದು ಪತ್ತೆಗೆ ಸವಾಲಾಗಿದೆ.

ಬೆಂಗಳೂರಲ್ಲೇ ಅಧಿಕ:

ಈ ವರ್ಷ ನೈಋತ್ಯ ರೈಲ್ವೆ ವಲಯದಲ್ಲಿ 56 ಗಾಂಜಾ ಪ್ರಕರಣ ದಾಖಲಾಗಿದೆ. ಮೈಸೂರಲ್ಲಿ 30 ಲಕ್ಷ ಮೌಲ್ಯದ 53 ಕೆ.ಜಿ. ಗಾಂಜಾ ವಶಕ್ಕೆ ಪಡೆದು ಐವರ ಬಂಧನವಾಗಿದೆ, 18 ಕೇಸ್‌ ದಾಖಲಾಗಿದೆ. ಹುಬ್ಬಳ್ಳಿಯಲ್ಲಿ ₹1.51 ಕೋಟಿ ಮೌಲ್ಯದ 194 ಕೆ.ಜಿ. ಗಾಂಜಾ ವಶಕ್ಕೆ ಪಡೆದು, ಮೂವರನ್ನು ಬಂಧಿಸಲಾಗಿದೆ. ಈ ಸಂಬಂಧ 23 ಕೇಸ್‌ ದಾಖಲಾಗಿದೆ. ಬೆಂಗಳೂರಲ್ಲಿ 83 ಪ್ರಕರಣ ದಾಖಲಿಸಲಾಗಿದ್ದು, 4.88 ಕೋಟಿ ಮೌಲ್ಯದ 666 ಕೆ.ಜಿ. ಗಾಂಜಾ ವಶಕ್ಕೆ ಪಡೆದು 48 ಮಂದಿಯನ್ನು ಬಂಧಿಸಲಾಗಿದೆ. ಬೆಂಗಳೂರು ವಿಭಾಗದಲ್ಲೇ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ವಿದ್ಯಾರ್ಥಿಗಳಿರುವುದು, ಅದ್ಧೂರಿ ನೈಟ್‌ ಪಾರ್ಟಿಗಳು ನಡೆಯುವುದೇ ಕಾರಣ.

-------------------

-ಬಾಕ್ಸ್‌-

ರೈಲ್ವೆ ಪೊಲೀಸ್‌ ಕಾರ್ಯಾಚರಣೆಯಿಂದ ಮಾದಕ ದ್ರವ್ಯ ವಶ

ವರ್ಷ ಗಾಂಜಾ (ಕೆಜಿ)ಮೊತ್ತ (₹)

2023702.0585.65 ಕೋಟಿ

2024617.8016.15 ಕೋಟಿ

2025 (ನ.30)628.390 4.48 ಕೋಟಿ

----

ಆರ್‌ಪಿಎಫ್‌ ಕಾರ್ಯಾಚರಣೆಯಿಂದ ಮಾದಕ ದ್ರವ್ಯ ವಶ

ವರ್ಷ ಪ್ರಕರಣಗಾಂಜಾ (ಕೆಜಿ)ಮೊತ್ತ (₹) ಬಂಧನ

202357772.0657.19 ಕೋಟಿ62

202431249.6192.35 ಕೋಟಿ18

2025(ನ.30)12914.2556.70 ಕೋಟಿ56

----

-ಕೋಟ್‌-

ರೈಲು, ರೈಲ್ವೆ ನಿಲ್ದಾಣದಲ್ಲಿ ಮಾದಕದ್ರವ್ಯ ಪತ್ತೆಕಾರ್ಯ ಹೆಚ್ಚಿಸಬೇಕು. ಆಧುನಿಕ ಯಂತ್ರೋಪಕರಣ, ಇದಕ್ಕೆ ಹೆಚ್ಚಿನ ಸಿಬ್ಬಂದಿ ನಿಯೋಜನೆ ಅಗತ್ಯ.

-ಕೃಷ್ಣಪ್ರಸಾದ್‌, ರೈಲ್ವೆ ಹೋರಾಟಗಾರ

-ಕೋಟ್‌-

ಈಶಾನ್ಯ, ಉತ್ತರ ಭಾರತದ ಕಡೆಯಿಂದ ರಾಜ್ಯಕ್ಕೆ ಮಾದಕದ್ರವ್ಯ ರೈಲಿನಲ್ಲಿ ಬರುತ್ತದೆ. ಪತ್ತೆಕಾರ್ಯದಲ್ಲಿ ಆರ್‌ಪಿಎಫ್‌, ಜಿಆರ್‌ಪಿ ಉತ್ತಮವಾಗಿ ಕೆಲಸ ಮಾಡುತ್ತಿವೆ. ಕಳೆದ ವರ್ಷಕ್ಕಿಂತ ಹೆಚ್ಚಿನ ಕಾರ್ಯಾಚರಣೆ ಆಗಿದ್ದು, ಕಾಯಂ ಸಿಬ್ಬಂದಿ ನೇಮಕ ಹೆಚ್ಚಳ ಸೇರಿ ರೈಲ್ವೆ ಇಲಾಖೆ ಇನ್ನಷ್ಟು ಭದ್ರತಾ ಕ್ರಮ ಕೈಗೊಳ್ಳಲಿದೆ.

-ಡಾ। ಮಂಜುನಾಥ ಕನಮಡಿ, ನೈಋತ್ಯ ರೈಲ್ವೆ ಸಿಪಿಆರ್‌ಒ