ಮಾದಕ ವಸ್ತು ಮಾರಾಟ ಜಾಲ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಹೆಬ್ಬಾಳ ಠಾಣೆ ಪೊಲೀಸರು, ರಾಜಧಾನಿಗೆ ಚೂಡಿದಾರ ಉಡುಪು ಸಾಗಾಣಿಕೆ ನೆಪದಲ್ಲಿ ಡ್ರಗ್ಸ್ ತಂದು ಮಾರುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ 8 ಮಂದಿಯನ್ನು ಸೆರೆ ಹಿಡಿದು ₹35 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾದಕ ವಸ್ತು ಮಾರಾಟ ಜಾಲ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಹೆಬ್ಬಾಳ ಠಾಣೆ ಪೊಲೀಸರು, ರಾಜಧಾನಿಗೆ ಚೂಡಿದಾರ ಉಡುಪು ಸಾಗಾಣಿಕೆ ನೆಪದಲ್ಲಿ ಡ್ರಗ್ಸ್ ತಂದು ಮಾರುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ 8 ಮಂದಿಯನ್ನು ಸೆರೆ ಹಿಡಿದು ₹35 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿದ್ದಾರೆ.

ಇದು ಉಪವಿಭಾಗ ಮಟ್ಟವೊಂದರಲ್ಲಿ ವಶಪಡಿಸಿಕೊಳ್ಳಲಾದ ದೊಡ್ಡ ಪ್ರಮಾಣದ ಡ್ರಗ್ಸ್ ಇದಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ದೆಹಲಿಯ ರೀನಾ ಯಾದವ್ ಅಲಿಯಾಸ್ ಬಾಪಿ, ಧೀರಜ್, ಒಬೈನುಜು ರೀಟಾ ಒಕೆಕೆ ಅಲಿಯಾಸ್‌ ಸಾನಿಯಾ, ದೇಬಶಿಶ್ ಬ್ಯಾನರ್ಜಿ ಅಲಿಯಾಸ್ ದೆಬು, ಹರಿಯಾಣದ ಗುರುಗ್ರಾಮ್‌ ದಾನ್ಫ ಜೆರಾಲ್ಡ್‌ ಅಲಿಯಾಸ್ ಡೇವಿಡ್, ಮ್ಯಾಗ್ರೇತ್‌ ಲಿಜಿನಿಕೋ ಚಲೆ, ಅಬ್ದುಲ್ ಸಮ್ಮದ್‌ ಹಾಗೂ ಚೂಡಸಂದ್ರದ ಪಿ.ಮೊಹಮ್ಮದ್ ಮನ್ಸೂರ್‌ ಬಂಧಿತರಾಗಿದ್ದು, ಆರೋಪಿಗಳಿಂದ 17.50 ಕೋಟಿ ರು. ಮೌಲ್ಯದ 17.5 ಕೆಜಿ ಎಂಡಿಎಂಎ ಹಾಗೂ 2 ಕಾರುಗಳನ್ನು ಜಪ್ತಿ ಮಾಡಲಾಗಿದೆ. ಈ ಡ್ರಗ್ಸ್‌ನ ಮಾರುಕಟ್ಟೆ ಮೌಲ್ಯವು ಪ್ರಸುತ್ತ 35 ಕೋಟಿ ರು. ಇದೆ ಎಂದು ಸಿಂಗ್‌ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಇಬ್ಬರು ಡ್ರಗ್ಸ್ ಪೆಡ್ಲರ್‌ಗಳನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ತನಿಖೆ ವೇಳೆ ಮತ್ತೊಂದು ಡ್ರಗ್ಸ್ ಜಾಲದ ಸುಳಿವು ಸಿಕ್ಕಿತು. ಈ ಮಾಹಿತಿ ಆಧರಿಸಿ ಜಂಟಿ ಆಯುಕ್ತ (ಪಶ್ಚಿಮ) ವಂಶಿಕೃಷ್ಣ ಹಾಗೂ ಉತ್ತರ ವಿಭಾಗದ ಡಿಸಿಪಿ ಬಿ.ಎಸ್‌.ನೇಮಗೌಡ ಮಾರ್ಗದರ್ಶನದಲ್ಲಿ ಜೆ.ಸಿ.ನಗರದ ಉಪ ವಿಭಾಗದ ಎಸಿಪಿ ಕೆ.ಎಸ್.ತನ್ವೀರ್ ಸಾರಥ್ಯದಲ್ಲಿ ಇನ್ಸ್‌ಪೆಕ್ಟರ್ ಭೈರ, ಪಿಎಸ್‌ಐ ವಿನೋದ್ ಜಿರಗಾಲೆ, ಶಿವನಾಂದ್‌ ಹಾಗೂ ಕಿರಣ್ ಸೇರಿದಂತೆ 40 ಮಂದಿ ಪೊಲೀಸರ ತಂಡ ಕಾರ್ಯಾಚರಣೆಗಿಳಿಯಿತು. ದೆಹಲಿ ಹಾಗೂ ಬೆಂಗಳೂರಿನಲ್ಲಿ ಪೆಡ್ಲರ್‌ಗಳು ಹಾಗೂ ಪೂರೈಕೆದಾರರನ್ನು ತನಿಖಾ ತಂಡವು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಆಯುಕ್ತರು ಹೇಳಿದ್ದಾರೆ.

ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದಾಗ ಖಚಿತ ಮಾಹಿತಿ ಪಡೆದು ಉನ್ನತಿ ಲೇಔಟ್‌ನ ಮುಖ್ಯರಸ್ತೆಯಲ್ಲಿ ಅಪಾರ್ಟ್‌ಮೆಂಟ್ ಸಮೀಪ ಮೂವರನ್ನು ಪೊಲೀಸರು ಸೆರೆಹಿಡಿದರು. ಈ ಪೆಡ್ಲರ್‌ಗಳು ವಿಚಾರಣೆ ಬಾಯ್ಬಿಟ್ಟ ಮಾಹಿತಿ ಆಧರಿಸಿ ದೆಹಲಿಯಲ್ಲಿ ಪೂರೈಕೆದಾರರನ್ನು ಬಂಧಿಸಿ ಕರೆತಂದಿದ್ದಾರೆ. ಈ ಡ್ರಗ್ಸ್ ಪ್ರಕರಣದ ತನಿಖೆ ನಡೆದಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಕಾರ್ಯಾಚರಣೆ ಹೇಗೆ?:

ಈ ಡ್ರಗ್ಸ್ ಜಾಲವು ಮೂರು ಹಂತದಲ್ಲಿ ಕಾರ್ಯಾಚರಣೆ ನಡೆಸಿದೆ. ದೆಹಲಿಯಲ್ಲಿ ಡ್ರಗ್ಸ್ ದಾಸ್ತಾನು ಮಾಡಿ ಅಲ್ಲಿಂದ ನಗರಕ್ಕೆ ರೈಲು ಹಾಗೂ ಬಸ್ಸುಗಳಲ್ಲಿ ಸಾಗಿಸುತ್ತಿದ್ದರು. ಆನಂತರ ಇಲ್ಲಿನ ಪೆಡ್ಲರ್‌ಗಳ ಮೂಲಕ ಗ್ರಾಹಕರಿಗೆ ಡ್ರಗ್ಸ್ ಅನ್ನು ದಂಧೆಕೋರರು ಪೂರೈಸುತ್ತಿದ್ದರು. ಪ್ರತಿ ಹಂತದಲ್ಲಿ ವ್ಯವಸ್ಥಿತವಾಗಿ ಲೋಪವಾಗದಂತೆ ಕಾರ್ಯಾಚರಣೆ ನಡೆಸಿದೆ. ಅಂತೆಯೇ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ಸ್ ಮಾಫಿಯಾದಿಂದ ಎಂಡಿಎಂ ಖರೀದಿಸಿ ದೆಹಲಿಗೆ ಗ್ಯಾಂಗ್‌ಗೆ ಸೆನೆಗಲ್‌ ದೇಶದ ಡೇವಿಡ್ ಹಾಗೂ ತಾಂಜೇನಿಯಾದ ಮ್ಯಾಗ್ರೇತ್‌ ಪೂರೈಸುತ್ತಿದ್ದರು. ಬಳಿಕ ಆ ಡ್ರಗ್ಸ್ ಅನ್ನು ಬೆಂಗಳೂರಿಗೆ ರೈಲಿನಲ್ಲಿ ರೀನಾ ಹಾಗೂ ದೇಬು ಸಾಗಿಸುತ್ತಿದ್ದರು. ಇನ್ನುಳಿದವರು ನಗರದಲ್ಲಿ ಗ್ರಾಹಕರಿಗೆ ಸರಬರಾಜು ಮಾಡುತ್ತಿದ್ದರು. ಪ್ರತಿಯೊಬ್ಬರಿಗೂ ಆನ್‌ಲೈನ್ ಮೂಲಕ ಹಣ ಸಂದಾಯವಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚೂಡಿದಾರ ನೆಪದಲ್ಲಿ ಸಾಗಾಣಿಕೆ

ದೆಹಲಿಯಿಂದ ಬೆಂಗಳೂರಿಗೆ ಚೂಡಿದಾರ ಉಡುಪು ಸಾಗಿಸುವ ನೆಪದಲ್ಲಿ ಡ್ರಗ್ಸ್ ಸಾಗಾಣಿಕೆಯಾಗಿದೆ. ಚೂಡಿದಾರದೊಳಗೆ ಮೂರು ಕೆಜಿಯಷ್ಟು ಡ್ರಗ್ಸ್ ತುಂಬುತ್ತಿದ್ದರು. ಅಲ್ಲದೆ ಇಸ್ತ್ರಿ ಟೇಬಲ್‌ ಬಾಕ್ಸ್‌ನಲ್ಲಿ ಸಹ ಡ್ರಗ್ಸ್ ಅನ್ನು ಆರೋಪಿಗಳು ಸಾಗಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನಿಖಾ ತಂಡಕ್ಕೆ ₹2 ಲಕ್ಷ ಬಹುಮಾನ

ಡ್ರಗ್ಸ್ ದಂಧೆಕೋರರ ವಿರುದ್ಧ ಬೃಹತ್‌ ಬೇಟೆಯಾಡಿದ ತನಿಖಾ ತಂಡಕ್ಕೆ ₹2 ಲಕ್ಷ ನಗದು ಬಹುಮಾನವನ್ನು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಘೋಷಿಸಿದರು. ಹೊರ ರಾಜ್ಯಗಳಲ್ಲಿ ಹಗಲಿರುಳು ಶ್ರಮಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಆಯುಕ್ತರು ಶ್ಲಾಘಿಸಿದರು.

ಡ್ರಗ್ಸ್ ಮಾರಾಟ ಜಾಲದ ವಿರುದ್ಧ ಕಾರ್ಯಾಚರಣೆ ಮತ್ತಷ್ಟು ಬಿರುಸುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗಾಗಿ ಉಪ ವಿಭಾಗ ಮಟ್ಟದಲ್ಲಿ ಸಹ ಬೃಹತ್ ಮಾರಾಟ ಜಾಲವು ಪತ್ತೆಯಾಗಿದೆ. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಮತ್ತಷ್ಟು ಪೂರೈಕೆದಾರರು ಹಾಗೂ ಪೆಡ್ಲರ್‌ಗಳ ಬಂಧನವಾಗಲಿದೆ.

-ಸೀಮಂತ್ ಕುಮಾರ್ ಸಿಂಗ್, ಪೊಲೀಸ್ ಆಯುಕ್ತ, ಬೆಂಗಳೂರು ನಗರ

ಕೆಐಎನಲ್ಲಿಯೂ 3.8 ಕೋಟಿ ಡ್ರಗ್ಸ್

ವಿದೇಶದಿಂದ ಕಳ್ಳ ಸಾಗಾಣಿಕೆಗೆ ಯತ್ನಿಸಿದ್ದಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 3.82 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕೆಐಎಗೆ ಮಂಗಳವಾರ ಬಂದಿಳಿದ ಬ್ಯಾಕಾಂಕ್ ಪ್ರವಾಸಿಗನನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು, ಆತನಿಂದ 3.82 ಕೋಟಿ ರು ಮೌಲ್ಯದ 10.92 ಕೆಜಿ ಹೈಡ್ರೋ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.