ಸಾರಾಂಶ
ಕನ್ನಡಪ್ರಭ ವಾರ್ತೆ ಆನೇಕಲ್
ಕುಡುಕ ಪತಿಯೋರ್ವ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ತನ್ನ ಪತ್ನಿಯ ಮೇಲೆ ಆ್ಯಸಿಡ್ ಸುರಿದು ಗಾಯಗೊಳಿಸಿದ ಘಟನೆ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಗೌರೇನಹಳ್ಳಿಯಲ್ಲಿ ನಡೆದಿದೆ.
ನಾಜಿಯಾಬೇಗಂ ಆ್ಯಸಿಡ್ ದಾಳಿಯಿಂದಾಗಿ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖಕ್ಕೆ ಆ್ಯಸಿಡ್ ಹಾಕಿದ ಕುಡುಕ ಗಂಡ ಚಾಂದ್ ಪಾಷಾನನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈತ ಇತ್ತೀಚೆಗೆ ಕುಡಿತದ ಚಟಕ್ಕೆ ಬಿದ್ದು ಸಂಸಾರಕ್ಕೆ ಬೇಕಾದ ವಸ್ತುಗಳನ್ನು ತರುತ್ತಿರಲಿಲ್ಲ. ನಿಂದನೆ, ಹೊಡೆತಗಳಿಂದ ಬೇಸತ್ತ ಮಹಿಳೆ ಈ ಬಗ್ಗೆ ಪತಿಯನ್ನು ಪ್ರಶ್ನಿಸಿದ್ದಾರೆ.
ಇದರಿಂದ ಕೋಪಗೊಂಡ ಪತಿ, ಮನೆಯಲ್ಲಿ ಹೆಂಡತಿ ಮಲಗಿದ್ದ ವೇಳೆ ಮುಖಕ್ಕೆ ಆ್ಯಸಿಡ್ ಎರಚಿದ್ದಾನೆ. ಸುಟ್ಟ ಗಾಯ ಹಾಗೂ ಉರಿಯಿಂದ ಆಕೆ ಕಿರುಚಿಕೊಂಡಾಗ ನೆರೆ ಮನೆಯವರು ನೆರವಿಗೆ ಧಾವಿಸಿದ್ದಾರೆ.
ಕೂಡಲೇ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದು, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಕೆಂಪೇಗೌಡ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದರು.
ಮದ್ಯದ ಬಾಟಲ್‌ನಲ್ಲಿ ಆ್ಯಸಿಡ್ ತಂದಿದ್ದ ಪತಿ: ವಿಚಾರಣೆ ವೇಳೆ ಹಿಂದಿನ ದಿನ ಮದ್ಯ ಸೇವಿಸಿ ಖಾಲಿ ಬಾಟಲ್‌ನಲ್ಲಿ ಟಾಯ್ಲೆಟ್ ಕ್ಲೀನ್ ಮಾಡುವ ಆ್ಯಸಿಡ್ ತಂದಿದ್ದಾಗಿ ಚಾಂದ್ ಪಾಷಾ ತಿಳಿಸಿದ್ದಾನೆ.
ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದರು ಎಂದು ಆನೇಕಲ್ ಪೊಲೀಸರು ತಿಳಿಸಿದ್ದಾರೆ.