ನಾಳೆಯಿಂದ ಮೂರು ದಿನ ಒಣಮೆಣಸಿನಕಾಯಿ ಮೇಳ

| Published : Feb 01 2024, 02:00 AM IST

ಸಾರಾಂಶ

ಮೂರುಸಾವಿರ ಮಠದ ಹೈಸ್ಕೂಲ್‌ ಮೈದಾನದಲ್ಲಿ ನಡೆಯುವ ಮೇಳದಲ್ಲಿ 150ಕ್ಕೂ ಹೆಚ್ಚು ರೈತರು ಆಗಮನದ ನಿರೀಕ್ಷೆ ಎಂದು ವ್ಯವಸ್ಥಾಪಕ ನಿರ್ದೇಶಕರಾದ ಬಿ.ಆರ್.ಗಿರೀಶ ತಿಳಿಸಿದ್ದಾರೆ.

ಹುಬ್ಬಳ್ಳಿ: ಇಲ್ಲಿನ ಮೂರುಸಾವಿರ ಮಠದ ಹೈಸ್ಕೂಲ್‌ ಮೈದಾನದಲ್ಲಿ ಫೆ. 2ರಿಂದ 4ರ ವರೆಗೆ ಒಣಮೆಣಸಿನಕಾಯಿ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್‌. ಗಿರೀಶ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಬಾರು ಪದಾರ್ಥ ಅಭಿವೃದ್ಧಿ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹುಬ್ಬಳ್ಳಿ, ಅಮರ ಶಿವ ರೈತ ಉತ್ಪಾದಕ ಸಂಸ್ಥೆ ಸಂಶಿ ಹಾಗೂ ಉಳುವಾಯೋಗಿ ರೈತ ಉತ್ಪಾದಕ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ ಎಂದರು. ಇದು 12ನೆಯ ಮೆಣಸಿನಕಾಯಿ ಮೇಳವಾಗಿದೆ.

ಫೆ. 2ರಂದು ಬೆಳಗ್ಗೆ 11ಗಂಟೆಗೆ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಉದ್ಘಾಟಿಸುವರು. ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿರಲಿದ್ದಾರೆ. ತೋಟಗಾರಿಕೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಗೂ ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಎಸ್. ಮಲ್ಲಿಕಾರ್ಜುನ ಮಳಿಗೆಗಳನ್ನು ಉದ್ಘಾಟಿಸುವರು ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ವಿಧಾನಪರಿಷತ್‌ ಮುಖ್ಯ ಸಚೇತಕ ಸಲೀಂ ಅಹ್ಮದ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ವಿನಯ ಕುಲಕರ್ಣಿ, ವಾಯವ್ಯ ಸಾರಿಗೆ ನಿಗಮದ ಅಧ್ಯಕ್ಷ ಭರಮಗೌಡ (ರಾಜು) ಅಲಗೌಡ ಕಾಗೆ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಜೆ.ಎಂ.ಗಣೇಶ್ ವಿಶೇಷ ಅತಿಥಿಗಳಾಗಿ ಆಗಮಿಸುವರು. ಅಧ್ಯಕ್ಷತೆಯನ್ನು ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಬ್ಬಯ್ಯ ಪ್ರಸಾದ ವಹಿಸಲಿದ್ದಾರೆ ಎಂದು ತಿಳಿಸಿದರು.

ಉದ್ದೇಶವೇನು?

ಒಣ ಮೆಣಸಿನಕಾಯಿಯ ನೇರ ಮಾರಾಟ ಪ್ರೋತ್ಸಾಹ, ಬೆಳೆಗಾರರ ಮತ್ತು ಗ್ರಾಹಕರ ಸಂಪರ್ಕ ಕಲ್ಪಿಸುವಿಕೆ, ಇತ್ತೀಚಿನ ಸಂಶೋಧನಾ ಮಾಹಿತಿ ಬೆಳೆಗಾರರಿಗೆ ತಿಳಿಸುವುದೇ ಮೇಳದ ಉದ್ದೇಶ. ಕಳೆದ ಬಾರಿ 100 ರೈತರು ಮೇಳದಲ್ಲಿ ಭಾಗವಹಿಸಿದ್ದರು. ₹1.10 ಕೋಟಿ ವೆಚ್ಚದ 246 ಕ್ವಿಂಟಲ್ ಒಣ ಮೆಣಸಿನಕಾಯಿ ಮಾರಾಟವಾಗಿತ್ತು. ಆಸಕ್ತ ರೈತರು ನೋಂದಣಿಯನ್ನು ಮುಂಚಿತವಾಗಿ ತಾಲೂಕು ತೋಟಗಾರಿಕೆ ಕಚೇರಿ ಅಥವಾ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯಲ್ಲಿ ಪಹಣಿ ಪತ್ರಿಕೆ ಮತ್ತು ಆಧಾರ ಕಾರ್ಡ್‌ನೊಂದಿಗೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಲವೂ 150ಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ ಎಂದು ನಿರೀಕ್ಷೆ ಇದೆ. ಬ್ಯಾಡಗಿ ಡಬ್ಬಿ, ಕಡ್ಡಿ, ಗುಂಟೂರು ಸೇರಿದಂತೆ ವಿವಿಧ ತಳಿಗಳ ಮೆಣಸಿನಕಾಯಿ ಮಾರಾಟಕ್ಕೆ ಬರಲಿದೆ. ರಾಜ್ಯದಲ್ಲಿ 1.31 ಲಕ್ಷ ಹೆಕ್ಟೇರ್‌ಗೂ ಅಧಿಕ ಮೆಣಸಿನಕಾಯಿ ಬೆಳೆಯಲಾಗಿದೆ. ಮಳೆ ಅಭಾವದಿಂದಾಗಿ ಮೆಣಸಿನಕಾಯಿ ಬೆಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ ಎಂದರು. ಸಿದ್ಧರಾಮಯ್ಯ ಮು. ಬರಗಿಮಠ ಪತ್ರಿಕಾಗೋಷ್ಠಿಯಲ್ಲಿದ್ದರು.