ಬರ, ಬಿಸಿಲ ಝಳಕ್ಕೆ ಒಣಗಿದ ಕಬ್ಬು, ತೆಂಗು, ಅಡಕೆ

| Published : May 09 2024, 01:00 AM IST

ಸಾರಾಂಶ

ನೀರಿಲ್ಲದೇ ಒಣಗಿರುವ ಕಬ್ಬಿನ ಬೆಳೆ, ತೆಂಗು, ಅಡಕೆ ಸೇರಿದಂತೆ ವಿವಿಧ ತೋಟದ ಬೆಳೆಗಳು ದಾವಣಗೆರೆ ತಾಲೂಕಿನ ಕುಕ್ಕವಾಡ ಗ್ರಾಮದ ವ್ಯಾಪ್ತಿಯಲ್ಲಿ ಸಂಪೂರ್ಣ ಒಣಗುತ್ತಿವೆ. ಸರ್ಕಾರ ತಕ್ಷಣ ಸಮೀಕ್ಷೆ ಕೈಗೊಂಡು, ಬೆಳೆ ಪರಿಹಾರ ನೀಡುವಂತೆ ಬಿಜೆಪಿ ಜಿಲ್ಲಾ ವಕ್ತಾರ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

- ಬೆಳೆಹಾನಿ ಸಮೀಕ್ಷೆ ಕೈಗೊಂಡು, ಶೀಘ್ರ ಪರಿಹಾರ ಒದಗಿಸಬೇಕು: ಬಿ.ಎಂ.ಸತೀಶ ಒತ್ತಾಯ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ನೀರಿಲ್ಲದೇ ಒಣಗಿರುವ ಕಬ್ಬಿನ ಬೆಳೆ, ತೆಂಗು, ಅಡಕೆ ಸೇರಿದಂತೆ ವಿವಿಧ ತೋಟದ ಬೆಳೆಗಳು ತಾಲೂಕಿನ ಕುಕ್ಕವಾಡ ಗ್ರಾಮದ ವ್ಯಾಪ್ತಿಯಲ್ಲಿ ಸಂಪೂರ್ಣ ಒಣಗುತ್ತಿವೆ. ಸರ್ಕಾರ ತಕ್ಷಣ ಸಮೀಕ್ಷೆ ಕೈಗೊಂಡು, ಬೆಳೆ ಪರಿಹಾರ ನೀಡುವಂತೆ ಬಿಜೆಪಿ ಜಿಲ್ಲಾ ವಕ್ತಾರ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ತಾಲೂಕಿನ ಕುಕ್ಕವಾಡ ಗ್ರಾಮದ ದಾವಣಗೆರೆ ಸಕ್ಕರೆ ಕಂಪನಿ ವ್ಯಾಪ್ತಿಯಲ್ಲಿ ನೂರಾರು ಎಕರೆಯಲ್ಲಿ ಬೆಳೆದಿರುವ ಕಬ್ಬು, ಅಡಕೆ, ತೆಂಗಿನ ತೋಟಗಳು ಬಿರುಬೇಸಿಗೆಯಿಂದ ನೀರಿಲ್ಲದೇ, ಸಂಪೂರ್ಣ ಒಣಗಿವೆ. ಈ ಪ್ರದೇಶಕ್ಕೆ ಗ್ರಾಮದ ಮುಖಂಡರು, ಜನಪ್ರತಿನಿಧಿಗಳೊಂದಿಗೆ ಭೇಟಿ ನೀಡಿ, ಮಾತನಾಡಿದ ಅ‍ವರು, ಬರದಿಂದ ರೈತರಿಗೆ ತೀವ್ರ ಆರ್ಥಿಕ ಸಂಕಷ್ಟ ಬಂದೊದಗಿದೆ. ಜೀವನ ನಡೆಸುವುದೇ ಕಷ್ಟವಾಗಿದೆ ಎಂದರು.

ಕುಕ್ಕುವಾಡ ಗ್ರಾಮದ ವ್ಯಾಪ್ತಿಯಲ್ಲಿ ಒಣಗಿರುವ ಕಬ್ಬು, ಅಡಕೆ, ತೆಂಗಿನ ತೋಟಗಳ ಸಮೀಕ್ಷೆಯನ್ನು ಕೈಗೊಳ್ಳಬೇಕು. ಭದ್ರಾ ಕಾಡಾ ಸಮಿತಿಯ ಅವೈಜ್ಞಾನಿಕ ವೇಳಾ ಪಟ್ಟಿಯಿಂದಾಗಿ ಭದ್ರಾ ನೀರು ದಾವಣಗೆರೆ ಅಚ್ಚುಕಟ್ಟು ಪ್ರದೇಶಕ್ಕೆ ಹರಿಯದಿರುವುದು ಒಂದು ಕಡೆಯಾದರೆ, ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಕಷ್ಟವಾಗಿ, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎಂದು ದೂರಿದರು.

ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಸಿಲಿನ ಝಳಕ್ಕೆ ತತ್ತರಿಸಿರುವ ರೈತರು ಈಗ ಒಣಗಿರುವ ತಮ್ಮ ತೋಟದ ಬೆಳೆಗಳನ್ನು ಕಂಡು ರೋದಿಸುವಂತಾಗಿದೆ. ಮಳೆ ಬರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೋಡಿ ನೋಡಿಯೇ ರೈತರು ಹೈರಾಣಾಗಿದ್ದಾರೆ. ಮಳೆಯೂ ಇಲ್ಲ, ಇತ್ತ ಭದ್ರಾ ನೀರು ಸರಿಯಾಗಿ ಬರಲಿಲ್ಲ. ಅಂತರ್ಜಲ ಮಟ್ಟವೂ ಸಂಪೂರ್ಣ ಕುಸಿದುಹೋಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೊಳವೆ ಬಾವಿಗಳೂ ಸಂಪೂರ್ಣ ನೀರು ಇಲ್ಲದೇ, ಬತ್ತಿಹೋಗಿವೆ. ಹಾಗಾಗಿ, ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಬೆಳೆಗಳಿಗೆ, ತೋಟಕ್ಕೆ ನೀರುಣಿಸಲು ಆಗದಂತಹ ಪರಿಸ್ಥಿತಿಗೆ ತಲುಪಿದ್ದಾರೆ. ನೀರಿಲ್ಲದೇ ಬೆಳೆಗಳು ಸಂಪೂರ್ಣ ಒಣಗುತ್ತಿವೆ. ಭೀಕರ ಬರದಿಂದಾಗಿ ರೈತರೂ ಕಂಗೆಟ್ಟಿದ್ದಾರೆ. ರೈತರ ಇಂತಹ ಹೀನಾಯ ಪರಿಸ್ಥಿತಿಯನ್ನು ಸರ್ಕಾರ ತನ್ನ ಕಣ್ಣುಗಳನ್ನು ತೆರೆದು ನೋಡಿ, ರೈತರಿಗೆ ನೆರವಿನ ಹಸ್ತ ನೀಡಲಿ ಎಂದು ಆಗ್ರಹಿಸಿದರು.

ಈ ಸಂದರ್ಭ ಕನಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷೆ ಜಲಜಾಕ್ಷಮ್ಮ ಸ್ವಾಮಿಲಿಂಗಪ್ಪ, ಕೊಳೇನಹಳ್ಳಿ ಕೆ ಶರಣಪ್ಪ, ಎಸ್.ಸಿ.ಸಿದ್ದಪ್ಪ, ಮಂಜುನಾಥ ಗುತ್ನಾಳ, ದೊಡ್ಡ ಮನೆ ಹಾಲಸಿದ್ದಪ್ಪ, ಬಿ.ನಾಗೇಂದ್ರಪ್ಪ, ಕನಗೊಂಡನಹಳ್ಳಿ, ಕೆ.ಎನ್.ಮಂಜುನಾಥ ಸೇರಿದಂತೆ ರೈತರು, ತೋಟಗಾರಿಕೆ ಬೆಳೆಗಾರರು, ರೈತ ಕುಟುಂಬದವರು ಇದ್ದರು.

- - -

ಕೋಟ್‌ ರೈತರ ಜಮೀನುಗಳಿಗೆ ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ತೋಟಗಾರಿಕೆ ಅಧಿಕಾರಿಗಳು, ಕೃಷಿ ಅಧಿಕಾರಿಗಳು ಭೇಟಿ ನೀ ಡಿ, ಒಣಗಿರುವ ಮತ್ತು ಒಣಗುತ್ತಿರುವ ಬೆಳೆಗಳ ಸಮೀಕ್ಷೆ ನಡೆಸಿ, ಪರಿಹಾರ ನೀಡಬೇಕು. ಇನ್ನಾದರೂ ಸರ್ಕಾರವು ರೈತರ ನೆರವಿಗೆ ಧಾವಿಸಬೇಕು

- ಬಿ.ಎಂ.ಸತೀಶ ಕೊಳೇನಹಳ್ಳಿ, ಬಿಜೆಪಿ ಮುಖಂಡ

- - - -8ಕೆಡಿವಿಜಿ13, 14:

ದಾವಣಗೆರೆ ತಾಲೂಕು ಕುಕ್ಕವಾಡ ಸುತ್ತಮುತ್ತ ಕಬ್ಬು, ಅಡಕೆ, ತೆಂಗಿನ ತೋಟಗಳು ಸಂಪೂರ್ಣ ಒಣಗಿರುವುದನ್ನು ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಇತರರು ಪರಿಶೀಲಿಸಿದರು. -8ಕೆಡಿವಿಜಿ15, 16:

ದಾವಣಗೆರೆ ತಾಲೂಕಿನ ಕುಕ್ಕವಾಡ ಸುತ್ತಮುತ್ತ ಅಡಕೆ, ತೆಂಗಿನ ತೋಟಗಳು ಸಂಪೂರ್ಣ ಒಣಗಿರುವುದು.