ದುಬೈ ಪ್ರವಾಸಕ್ಕೆಂದು ತೆರಳಿದ್ದ ದಾವಣಗೆರೆ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳ 60ರಿಂದ 82 ವರ್ಷ ವಯೋಮಿತಿಯ ಸುಮಾರು 27 ಪುರುಷ, 23 ಮಹಿಳೆಯರು ಇದೀಗ ದುಬೈನ ಮೇಲೆ ಇರಾನ್ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಅತಂತ್ರರಾಗಿದ್ದಾರೆ.

ನಾಗರಾಜ ಎಸ್. ಬಡದಾಳ್

ಕನ್ನಡಪ್ರಭ ವಾರ್ತೆ ದಾವಣಗೆರೆ

ದುಬೈ ಪ್ರವಾಸಕ್ಕೆಂದು ತೆರಳಿದ್ದ ದಾವಣಗೆರೆ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳ 60ರಿಂದ 82 ವರ್ಷ ವಯೋಮಿತಿಯ ಸುಮಾರು 27 ಪುರುಷ, 23 ಮಹಿಳೆಯರು ಇದೀಗ ದುಬೈನ ಮೇಲೆ ಇರಾನ್ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಅತಂತ್ರರಾಗಿದ್ದಾರೆ.

ಜಿಲ್ಲೆಯ ಜಗಳೂರು ತಾ. ತೋರಣಘಟ್ಟ ಗ್ರಾಮದವರಾದ, ಜಗಳೂರು ವಾಸಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಜಿ.ಎ.ಚಂದ್ರಶೇಖರ ಸೇರಿದಂತೆ 15 ಜನರು ತೋರಣಘಟ್ಟೆ ಗ್ರಾಮದಿಂದ, ಬಳ್ಳಾರಿ ಹಾಗೂ ಇತರೆ ಜಿಲ್ಲೆಗಳಿಂದ 35 ಜನ ಸೇರಿದಂತೆ ಒಟ್ಟು 50 ಜನ ವಯೋವೃದ್ಧರು ಪತ್ನಿ ಸಮೇತರಾಗಿ ವಿದೇಶ ಪ್ರವಾಸಕ್ಕೆಂದು ಫೆ.23ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನದಿಂದ ದುಬೈಗೆ ತೆರಳಿದ್ದರು.

ಏರ್ ಅರೇಬಿಯಾ ಪ್ಲೈಟ್‌ನಲ್ಲಿ ಫೆ.23ರಂದು ತೆರಳಿದ್ದ ದಾವಣಗೆರೆ, ಬಳ್ಳಾರಿ ಜಿಲ್ಲೆಯ ಐವತ್ತು ಜನರ ಪ್ರಯಾಣಿಕರ ತಂಡವು ಫೆ.28ರಂದು ರಾತ್ರಿ 9.30ಕ್ಕೆ ಅದೇ ಏರ್ ಅರೇಬಿಯಾ ಫ್ಲೈಟ್‌ನಲ್ಲಿ ಭಾರತಕ್ಕೆ ವಾಪಸ್‌ ಆಗಬೇಕಿತ್ತು. ಇರಾನ್ ಮೇಲೆ ಅಮೇರಿಕಾ- ಇಸ್ರೇಲ್ ದಾಳಿ ಶುರುವಾಗುತ್ತಿದ್ದಂತೆ, ಇರಾನ್‌ನಿಂದ ದುಬೈನಲ್ಲಿರುವ ಅಮೇರಿಕಾ ನೆಲೆಗಳ ಮೇಲೆ ದಾಳಿಯಾಗುವುದು ಖಚಿತ ಆಗುತ್ತಿದ್ದಂತೆ ಪ್ರೊ. ಜಿ.ಎ.ಚಂದ್ರಶೇಖರ ಸೇರಿದಂತೆ 50 ಜನರು ದುಬೈ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ.

ಅಷ್ಟರಲ್ಲಿ ದುಬೈ ವಿಮಾನ ನಿಲ್ದಾಣವನ್ನು ಬಂದ್ ಮಾಡುತ್ತಿರುವುದಾಗಿ, ಯಾವುದೇ ವಿಮಾನ ಸಂಚಾರ ಇಲ್ಲವೆಂಬ ಸಂದೇಶವು ಟ್ರಾವೆಲ್ಸ್ ಏಜೆನ್ಸಿ ಪ್ರತಿನಿಧಿಗೆ ಬಂದಿದೆ. ಇಂದಿನಿಂದ 3 ದಿನಗಳ ಕಾಲ ಏರ್‌ ಪೋರ್ಟನ್ನು ಸಂಪೂರ್ಣ ಬಂದ್ ಮಾಡಿದ್ದು, 3 ದಿನಗಳ ಕಾಲ ಪರಿಸ್ಥಿತಿ ನೋಡಿಕೊಂಡು, ವಿಮಾನ ನಿಲ್ದಾಣ ತೆರೆಯುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿವರೆಗೆ ವಿಮಾನ ನಿಲ್ದಾಣಕ್ಕೆ ಬಾರದಂತೆ ಸೂಚನೆ ಸಿಕ್ಕಿದೆ.

ಟ್ರಾವೆಲ್ ಏಜೆಂಟ್ ಹಾಗೂ ದಾವಣಗೆರೆ, ಬಳ್ಳಾರಿ ಪ್ರಯಾಣಿಕರ ಮನವಿ ಮಾಡಿದರೂ ವಿಮಾನ ನಿಲ್ದಾಣಕ್ಕೆ ಪ್ರವೇಶ ನೀಡುವುದಿಲ್ಲ. ಒಂದುವೇಳೆ ಬೋರ್ಡಿಂಗ್ ಪಾಸ್ ಪಡೆದಿದ್ದರೆ ನಿಮ್ಮ ಜವಾಬ್ದಾರಿ ನಾವು ನೋಡಿಕೊಳ್ಳುತ್ತಿದ್ದೆವು ಎಂದು ವಿಮಾನ ನಿಲ್ದಾಣದವರು ಹೇಳಿದ್ದಾರೆ. ವಿಧಿ ಇಲ್ಲದೇ 50 ಪ್ರಯಾಣಿಕರನ್ನು ದುಬೈನ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದರೆ, ಪರಿಸ್ಥಿತಿಯ ದುರ್ಲಾಭ ಹಾಗೂ ಅಸಹಾಯಕತೆಯನ್ನು ಅಲ್ಲಿ ದುರ್ಬಳಕೆ ಮಾಡಿಕೊಳ್ಳುವ ಕೆಲಸವಾಗುತ್ತಿದೆ. ಪ್ರತಿ ಕೊಠಡಿಯಲ್ಲಿ ಮೂವರಿಗೆ ಮಾತ್ರ ಅ‍ವಕಾಶ. 12 ಗಂಟೆ ಇರಲು ಪ್ರತಿಯೊಬ್ಬರೂ ತಲಾ ₹10 ಸಾವಿರದಂತೆ ನೀಡಬೇಕೆಂದು ಹೇಳಿದ್ದಾರೆ. ಆಗ ಪ್ರವಾಸಿಗರಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ.

ಪ್ರವಾಸದ ಮೊದಲ ದಿನ ಶಾರ್ಜಾ, 3 ದಿನ ದುಬೈ, ಒಂದು ದಿನ ಅಬುದಾಬಿಯಲ್ಲಿ ಕಳೆದಿದ್ದ ಕನ್ನಡಿಗರು ಮಕ್ಕಳು, ಮೊಮ್ಮಕ್ಕಳಿಗೆ ಶಾಪಿಂಗ್, ಬಟ್ಟೆ, ಶೂ ಖರೀದಿ, ಡ್ರೈಫ್ರೂಟ್ಸ್, ಚಾಕೋಲೇಟ್ ಅಂತೆಲ್ಲಾ ಖರೀದಿಸಿ ಇದ್ದಬದ್ದ ಹಣವನ್ನೆಲ್ಲಾ ಖರ್ಚು ಮಾಡಿಕೊಂಡಿದ್ದರು. ಬೆಂಗಳೂರು ತಲುಪಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಉಳಿಸಿಕೊಂಡಿದ್ದರು. ಆದರೆ, ಇರಾನ್‌ ದೇಶವು ದುಬೈ ಮೇಲೆ ದಾಳಿ ಮಾಡಿದ್ದರಿಂದ ಒಲ್ಲದ ಮನಸ್ಸಿನಿಂದ, ಅನಿವಾರ್ಯವಾಗಿ ದುಬೈನಲ್ಲಿ ಬಲವಂತದ ಅತಿಥಿಯಾಗಿ ದಿನ ಕಳೆಯಬೇಕಾಗಿ ಬಂದಿದೆ. ಪರ್ಸ್‌ನಲ್ಲಿ ಹಣ ಇಲ್ಲದ್ದು, ದಿನಕ್ಕೆ ಒಬ್ಬರು ₹10 ಸಾವಿರದಂತೆ ನೀಡಬೇಕಾಗಿದ ದುಸ್ಥಿತಿಯಿಂದ ಎಲ್ಲರೂ ಕಂಗಾಲಾಗಿದ್ದಾರೆ.

ಏರ್ ಅರೇಬಿಯಾ ಬೋರ್ಡಿಂಗ್ ಪಾಸ್ ಹೊಂದಿಲ್ಲವೆಂಬ ಕಾರಣಕ್ಕೆ ಯಾವುದೇ ಜವಾಬ್ದಾರಿ ಹೊರಲು ಸಿದ್ಧವಿಲ್ಲ. ಬೋರ್ಡಿಂಗ್ ಪಾಸ್ ತಗೊಂಡಿದ್ದರೆ ನಾವು ಜವಾಬ್ದಾರಿ ಅಂದಿದ್ದಾರೆ. ಈಗ ಮತ್ತೆ ವಾಪಸ್‌ ಬಂದು, ಕೆಲ ರೂಂಗಳಲ್ಲಿ ಹೊಂದಾಣಿಕೆ ಮಾಡಿಕೊಂಡು, ವಾಸಿಸುತ್ತಿದ್ದೇವೆ. ಪ್ರತಿ ವ್ಯಕ್ತಿಗೆ 12 ತಾಸಿಗೆ ₹10 ಸಾವಿರದಂತೆ ನಿಗದಿಪಡಿಸಿದ್ದಾರೆ. 1 ರೂಂನಲ್ಲಿ ಮೂವರಿಗೆ ಮಾತ್ರ ಅವಕಾಶ. 12 ಗಂಟೆಗೆ ಚೆಕ್ ಔಟ್ ಮಾಡಬೇಕೆಂದು ಸೂಚಿಸಿದ್ದಾರೆ. ಆದರೆ, ನಾವು ಯಾರೂ ಸಹ ಅಷ್ಟೊಂದು ಹಣ ಇಟ್ಟುಕೊಂಡಿಲ್ಲ. ಬಹುತೇಕ ಹಣ ಖರ್ಚು ಮಾಡಿಕೊಂಡಿದ್ದೇವೆ ಎಂದು ಪ್ರವಾಸಿಗಳಾದ ತೋರಣಘಟ್ಟದ ಪ್ರೊ. ಜಿ.ಎ. ಚಂದ್ರಶೇಖರ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.

ದುಬೈನಲ್ಲಿ ನಾವು ಸಿಲುಕಿದ್ದು, ಇಲ್ಲಿ ನಡೆದ ದಾಳಿ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿ, ನಮ್ಮ ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ತೀವ್ರ ಆತಂಕಕ್ಕೀಡಾಗಿದ್ದಾರೆ. ಯಾವಾಗ ವಿಮಾನ ಸಂಚಾರ ಆರಂಭವಾಗುತ್ತದೋ, ಯಾವಾಗ ಏರ್ ಟಿಕೆಟ್ ಸಿಗುತ್ತದೋ ಗೊತ್ತಿಲ್ಲ. ದುಬೈ ಏರ್‌ ಪೋರ್ಟ್ ಯಾವಾಗ ಓಪನ್ ಮಾಡುತ್ತಾರೆಂಬುದೂ ಇಲ್ಲಿ ಗೊತ್ತಾಗುತ್ತಿಲ್ಲ. 60 ವರ್ಷದಿಂದ 82 ವರ್ಷದವರೆಗಿನವರು ಇದ್ದೇವೆ. 28 ಪುರುಷರು, 22 ಮಹಿಳೆಯರಿದ್ದು, ಬಹುತೇಕ ಎಲ್ಲರೂ ಶುಗರ್, ಬಿಪಿ ಇತರೆ ಆರೋಗ್ಯ ಸಮಸ್ಯೆ ಹೊಂದಿದ್ದು, ಇಲ್ಲಿನ ಬೆಳವಣಿಗೆ ಮತ್ತಷ್ಟು ಅನಾರೋಗ್ಯ, ಭಯ ತಂದೊಡ್ಡುತ್ತಿದೆ. ಇರುವವರಲ್ಲಿ ಸುಮಾರು 15 ಜನ ಸಸ್ಯಹಾರಿಗಳೂ ಇದ್ದಾರೆ. ನಮ್ಮ ಗೋಳನ್ನು ಕೇಳುವವರು ಸಹ ಇಲ್ಲಿ ಯಾರೂ ಇಲ್ಲದಂತಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಸರ್ಕಾರವೇ ನಮ್ಮನ್ನು ಕಾಪಾಡಬೇಕು: ಪ್ರೊ. ಚಂದ್ರಶೇಖರ

ಕೇಂದ್ರ, ರಾಜ್ಯ ಸರ್ಕಾರಗಳು ದುಬೈನಲ್ಲಿ ಸಿಲುಕಿರುವ ನಮ್ಮನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆಸಿಕೊಳ್ಳುವ ಕೆಲಸ ಮಾಡಬೇಕು. ನಾವು ಫೆ.23ರಂದು ಏರ್ ಅರೇಬಿಯಾದಲ್ಲಿ ದುಬೈ ಪ್ರವಾಸಕ್ಕೆ ಬಂದಿದ್ದು, ಅದೇ ಫ್ಲೈಟ್‌ನಲ್ಲಿ ರಿಟರ್ನ್ ಟಿಕೆಟ್ ಸಹ ಫೆ.28ರ ರಾತ್ರಿ 9.30ಕ್ಕೆ ಮಾಡಿಸಿದ್ದೆವು. ಅಷ್ಟರಲ್ಲಿ ಇಷ್ಟೆಲ್ಲಾ ಆಗಿದೆ. ಜೀವನದಲ್ಲೇ ಅತ್ಯಂತ ಭಯಾನಕ ಪರಿಸ್ಥಿತಿಯಲ್ಲಿ ಇಳಿ ವಯಸ್ಸಿನ ನಾವು ಇದ್ದೇವೆ. ದುಬೈನಲ್ಲಿ ಅಪಾರ್ಟ್ ಮೆಂಟ್ ಮಾದರಿಯ ಕಟ್ಟಡದಲ್ಲಿ ಒಂದೊಂದು ಕೊಠಡಿಯಲ್ಲಿ 3 ಜನರಂತೆ ಇದ್ದೇವೆ. ಕೇಂದ್ರ ಸರ್ಕಾರ ನಮ್ಮಂತಹವರ ನೆರವಿಗೆ ಧಾವಿಸಬೇಕೆಂದು ಎಲ್ಲರ ಪರವಾಗಿ ಮನವಿ ಮಾಡುತ್ತೇನೆ ಎಂದು ಜಗಳೂರು ತಾಲೂಕಿನ ತೋರಣಘಟ್ಟದ ನಿವೃತ್ತ ಪ್ರಾಧ್ಯಾಪಕ ಪ್ರೊ. ಜಿ.ಎ.ಚಂದ್ರಶೇಖರ ತಿಳಿಸಿದ್ದಾರೆ.