ಮೈಸೂರು-ಚಾಮರಾಜನಗರ ಬ್ಯಾಂಕ್‌ನಿಂದ ಕೆರೆಹಳ್ಳಿ ಕೃಷಿ ಸಂಘಕ್ಕೆ ಬಾಕಿ: ಜಮೆಗೆ ಗಡುವು

| Published : Aug 26 2024, 01:33 AM IST

ಮೈಸೂರು-ಚಾಮರಾಜನಗರ ಬ್ಯಾಂಕ್‌ನಿಂದ ಕೆರೆಹಳ್ಳಿ ಕೃಷಿ ಸಂಘಕ್ಕೆ ಬಾಕಿ: ಜಮೆಗೆ ಗಡುವು
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು - ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‌ನಲ್ಲಿ (ಎಂಡಿಸಿಸಿ) ನಡೆದಿರುವ ಹಗರಣದಲ್ಲಿ ಕೆರೆಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ರೈತರಿಗೆ ನೀಡಬೇಕಾಗಿರುವ ೩೨ ಲಕ್ಷ ರು. ಬಾಕಿ ನೀಡುವಂತೆ ಚಾಮರಾಜನಗರದಲ್ಲಿ ನಡೆದ ಕೆರೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಒತ್ತಾಯಿಸಲಾಯಿತು.

ಕೆರೆಹಳ್ಳಿ ಸಹಕಾರ ಸಂಘಕ್ಕೆ ₹೩೨ ಲಕ್ಷ ಉಳಿಕೆ । ಹಣ ನೀಡದಿದ್ದರೆ ಬ್ಯಾಂಕ್‌ಗೆ ಮುತ್ತಿಗೆ ಹಾಕಲು ಕೆರೆಹಳ್ಳಿ ಕೃಷಿ ಸಂಘದ ಸಭೆ ನಿರ್ಣಯ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮೈಸೂರು - ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‌ನಲ್ಲಿ (ಎಂಡಿಸಿಸಿ) ನಡೆದಿರುವ ಹಗರಣದಲ್ಲಿ ಕೆರೆಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ರೈತರಿಗೆ ನೀಡಬೇಕಾಗಿರುವ ೩೨ ಲಕ್ಷ ರು. ಬಾಕಿ ಇದ್ದು, ಈ ಹಣವನ್ನು ಆ.೨೬ರ ಗಡುವಿನೊಳಗೆ ಜಮೆ ಮಾಡದಿದ್ದರೆ ಬ್ಯಾಂಕ್‌ನ ಮುಂದೆ ಧರಣಿ ನಡೆಸಲು ಕೆರೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ತಾಲೂಕಿನ ಕೆರೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ಸಭೆ ಸಂಘದ ಅಧ್ಯಕ್ಷ ಕೆರೆಹಳ್ಳಿ ನವೀನ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಭಾಗವಹಿಸಿದ್ದ ಬ್ಯಾಂಕ್‌ನ ಮೇಲ್ವಿಚಾರಕ ಮಂಜು ವಿರುದ್ದ ಸಂಘದ ಸದಸ್ಯರು ಹಾಗೂ ಆಡಳಿತ ಮಂಡಳಿ ಸದಸ್ಯರು ಒಂದು ಹಂತದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೇ ನಮ್ಮ ಸಹಕಾರ ಸಂಘದ ರೈತರಿಗೆ ಬರಬೇಕಾಗಿರುವ ಹಣ ದುರಪಯೋಗವಾಗಲು ಎಂಡಿಸಿಸಿ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರಣರಾಗಿದ್ಧಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬ್ಯಾಂಕ್‌ನ ಎಂಡಿ ವಿನಯ್‌ಕುಮಾರ್ ೬೪ರ ತನಿಖೆ ನೆಪದಲ್ಲಿ ಕಳೆದ ಎಂಟು ತಿಂಗಳಿಂದ ಸಂಘದ ಠೇವಣಿ ಹಣ ೫ ಲಕ್ಷ ರು. ಹಾಗೂ ರೈತರ ಸಾಲ ಖಾತೆಗೆ ಜಮೆಯಾಗಬೇಕಾಗಿರುವ ೨೭ ಲಕ್ಷ ರು. ಅನ್ನು ನೀಡದೆ ತೊಂದರೆ ನೀಡುತ್ತಿದ್ದಾರೆ. ಈ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದ ಅಲ್ಲಿನ ನೌಕರ ವಾಪಸ್ ಹಣವನ್ನು ಬ್ಯಾಂಕ್‌ಗೆ ಪಾವತಿ ಮಾಡಿದ್ದಾರೆ. ಆದರೂ ಸಹ ಇನ್ನು ಸಂಘಕ್ಕೆ ಬರಬೇಕಾಗಿರುವ ಹಣವನ್ನು ಜಮೆ ಮಾಡಿಲ್ಲ ಎಂದು ಸಭೆಗೆ ಸಂಘದ ಅಧ್ಯಕ್ಷ ನವೀನ್, ಸಿಇಒ ರಾಜೇಂದ್ರಕುಮಾರ್ ಮಾಹಿತಿ ನೀಡಿದರು.

ಬ್ಯಾಂಕ್‌ನ ಮೇಲ್ವಿಚಾರಕರ ಮಂಜು ಅವರು ನೇರವಾಗಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ವಿನಯ್‌ಕುಮಾರ್ ಅವರಿಗೆ ಮೊಬೈಲ್ ಕರೆ ಮಾಡಿ ಸರ್ವ ಸದಸ್ಯರ ತೀರ್ಮಾನವನ್ನು ತಿಳಿಸಿದರು. ಇದಕ್ಕೆ ಒಪ್ಪಿದ ಅವರು ಆ. ೨೬ ರೊಳಗೆ ಕೆರೆಹಳ್ಳಿ ಸಹಕಾರ ಸಂಘದ ಹಣವನ್ನು ಖಾತೆಗೆ ಜಮಾ ಮಾಡಲು ಒಪ್ಪಿದರು. ಬಳಿಕ ಸಭೆ ಮುಂದುವರಿಯಿತು.

ಸಂಘಕ್ಕೆ ೨.೭೦ ಲಕ್ಷ ರು. ನಿವ್ವಳ ಲಾಭ:

ಸಂಘದ ಅಧ್ಯಕ್ಷ ಕೆರೆಹಳ್ಳಿ ನವೀನ್ ಮಾತನಾಡಿ, ಸಹಕಾರ ಸಂಘ ಉತ್ತಮವಾಗಿ ವಹಿವಾಟು ನಡೆಸಿ, ೨೦೨೩-೨೪ನೇ ಸಾಲಿನಲ್ಲಿ ೨.೭೦ ಲಕ್ಷ ರು. ನಿವ್ವಳ ಲಾಭ ಗಳಿಸಿದೆ. ಸಂಘದಿಂದ ೫೪೦ ಮಂದಿ ರೈತರಿಗೆ ೮.೭೧ ಕೋಟಿ ರು. ಸಾಲ ನೀಡಲಾಗಿದೆ. ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆದುಕೊಂಡ ರೈತರು ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿ, ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಸಂಘವನ್ನು ಮಾದರಿಯಾಗಿ ಪರಿವರ್ತನೆ ಮಾಡಲು ಎಲ್ಲರ ಸಹಕಾರಬೇಕು. ಸಂಘವು ಸ್ವಂತ ಕಟ್ಟಡವನ್ನು ಹೊಂದಿ, ಕಂಫ್ಯೂಟರ್ ಅಳವಡಿಸಿಕೊಂಡಿದೆ ಎಂದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಜೇಂದ್ರ ಕುಮಾರ್ ಸಂಘದ ಅಡಿಟ್ ವರದಿಯನ್ನು ಮಂಡಿಸಿ, ಅನುಮೋದನೆ ಪಡೆದುಕೊಂಡರು.

ಸಂಘದ ಉಪಾಧ್ಯಕ್ಷ ಎಂ.ಪುಟ್ಟಸಿದ್ದಯ್ಯ, ನಿರ್ದೇಶಕರಾದ ಬಿ.ಎಸ್.ರೇವಣ್ಣ, ಎಂ.ವಿ.ನಾಗರಾಜು, ರಾಜಕುಮಾರ್, ಕೆಂಪರಾಜು, ಮಹದೇವಸ್ವಾಮಿ, ಬೀರೇಗೌಡ, ಲತಾ, ಗುರುಸಿದ್ದನಾಯಕ, ಬ್ಯಾಂಕ್‌ನ ಮೇಲ್ವಿಚಾರಕ ಟಿ.ಮಂಜು ಹಾಗೂ ಸಂಘದ ಸರ್ವ ಸದಸ್ಯರು ಭಾಗವಹಿಸಿದ್ದರು.