ಚಳ್ಳಕೆರೆ ನಗರದ ನಗರಸಭೆ ಕಾರ್ಯಾಲಯದಲ್ಲಿ 2026-27ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ನಗರಸಭೆಯ ಆಡಳಿತಾಧಿಕಾರಿಗಳಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಈಗಾಗಲೇ ಅಧಿಕಾರ ವಹಿಸಿಕೊಂಡಿದ್ದು, ಅವರ ಅಧಿಕಾರವಧಿಯ 2026-27ನೇ ಆಯವ್ಯಯದ ಪೂರ್ವಭಾವಿ ಸಭೆಯನ್ನು ನಗರಸಭೆಯ ಸಭಾಂಗಣದಲ್ಲಿ ಕರೆಯಲಾಗಿದ್ದು, ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಪೌರಾಯುಕ್ತ ಎಚ್.ಜಿ.ಜಗರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಉತ್ತರ ನೀಡಿದರು.ಪ್ರಾರಂಭದಲ್ಲಿ ನಗರಸಭೆ ನಾಮಿನಿ ಸದಸ್ಯ ಆರ್.ವೀರಭದ್ರಪ್ಪ, ಅನ್ವರ್‌ಮಾಸ್ಟರ್ ವಾರ್ಡ್ ವ್ಯಾಪ್ತಿಯ ವಿಠಲನಗರದ ಬಹುತೇಕ ಪ್ರದೇಶ ನನ್ನಿವಾಳ ಗ್ರಾಪಂ ವ್ಯಾಪ್ತಿಗೆ ಸೇರಿದ್ದು ನಗರಸಭೆಯಿಂದ ಸೌಲಭ್ಯ ಪಡೆದು ಅಲ್ಲಿನ ಯಾವುದೇ ಆದಾಯ ನಗರಸಭೆಗೆ ಬರುತ್ತಿಲ್ಲ, ಆದ್ದರಿಂದ ಅವುಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆಮಾಡುವಂತೆ ಒತ್ತಾಯಿಸಿದರು.ನಗರಸಭೆಯಲ್ಲಿ ಎಸ್‌ಸಿ/ಎಸ್‌ಟಿ ಅನುದಾನದವನ್ನು ವಿದ್ಯಾರ್ಥಿಗಳು ಹಾಗೂ ಕಾಲೋನಿಗಳ ಅಭಿವೃದ್ಧಿಗೆ ಬಳಸುವಂತೆ ಮನವಿ ಮಾಡಿದರು.
ಉದ್ಯಮಿ ಡಿ.ಜಿ.ಪ್ರಕಾಶ್ ಮಾತನಾಡಿ, ನಗರಸಭೆಯ ಒಟ್ಟು ಆದಾಯದಲ್ಲಿ ನಗರಸಭೆ ಅಭಿವೃದ್ಧಿ ಕೈಗೊಳ್ಳಬೇಕಿದೆ. ಆದರೆ ಅವಶ್ಯವಿರುವ ಕಡೆಬಿಟ್ಟು ಬೇರೆಕಡೆ ಹಣವನ್ನು ಉಪಯೋಗಿಸಲಾಗುತ್ತಿದೆ. ಯಾವ, ಯಾವ ಬಾಬ್ತು ಬರುತ್ತಿದೆ, ಖರ್ಚು ಎಷ್ಟು ಆಗುತ್ತಿದೆ ಎಂದು ಮಾಹಿತಿ ನೀಡುತ್ತಿಲ್ಲ, ನಗರಸಭೆ ಬಹುತೇಕ ವಾರ್ಡ್‌ಗಳು ಅಭಿವೃದ್ಧಿ ಕಾಣದೆ ಬಡವಾಗುತ್ತಿವೆ ಈ ಬಗ್ಗೆ ಗಮನಹರಿಸಿ ಎಂದರು.ಕೆಆರ್‌ಎಸ್ ಪಕ್ಷದ ಮುಖಂಡ ನಗರಂಗೆರೆ ಮಹೇಶ್ ಮಾತನಾಡಿ, ನಗರಂಗೆರೆ ಗ್ರಾಮಕ್ಕೆ ಚಳ್ಳಕೆರೆ ನಗರದ ಕೊಳಚೆ ನೀರು ಕೆರೆಗೆ ಸೇರ್ಪಡೆಯಾಗುತ್ತಿದೆ. ನೀರನ್ನು ಶುದ್ದೀಕರಣಗೊಳಿಸುವ ಕಾರ್ಯವಾಗಬೇಕು, ಇದರಿಂದ ಗ್ರಾಮದ ಜನತೆ ಅನಾರೋಗ್ಯಕ್ಕೆ ತುತ್ತಾಗುವ ಸಂಭವಿದೆ ಎಂದು ಆರೋಪಿಸಿದರು. ನಗರದೆಲ್ಲೆಡೆ ಸಿಸಿ ಕ್ಯಾಮೆರಾ ಅಳವಡಿಸುವಂತೆ ಮನವಿ ಮಾಡಿದರು.
ನಿವೃತ್ತ ಪಿಇ ನಿರ್ದೇಶಕ ಸಿ.ವಿ.ರಮೇಶ್ ಮಾತನಾಡಿ, ನಗರದ ಎಲ್ಲಾ ಪ್ರಮುಖ ರಸ್ತೆಗಳ ಅಂಗಡಿಮುಂದೆ ನಗರಸಭೆ ಅನುಮತಿ ಪಡೆಯದೆ ಬ್ಯಾನರ್, ಕಟೌಟ್‌ಗಳನ್ನು ಕಟ್ಟಲಾಗುತ್ತಿದೆ. ನನ್ನದೇ ಕಾಂಪ್ಲೆಕ್ಸ್ ಹೊಂದಿದ್ದು ಪ್ರತಿವರ್ಷ ನಗರಸಭೆಗೆ ಸುಮಾರು 80 ಸಾವಿರ ಕಂದಾಯವನ್ನು ಪಾವತಿಸುತ್ತಿದ್ದೇವೆ. ಆದರೆ, ಕಾಂಪ್ಲೆಕ್ಸ್‌ನಲ್ಲಿರುವ ಬಾಡಿಗೆದಾರರು ಬ್ಯಾನರ್ ಕಟೌಟ್ ಕಟ್ಟುವುದುರಿಂದ ಅಡಚಣೆಯಾಗುತ್ತಿದ್ದು ಗ್ರಾಹಕರು ಬರುತ್ತಿಲ್ಲವೆನ್ನುತ್ತಾರೆ. ಗ್ರಾಹಕರು ಬರದೆ ವ್ಯಾಪಾರ ಕುಂಠಿತವಾಗಿದೆ. ಆದ್ದರಿಂದ ನಗರಸಭೆ ನಿಗದಿತ ಜಾಗದಲ್ಲೇ ಅವುಗಳನ್ನು ಕಟ್ಟಲು ವ್ಯವಸ್ಥೆ ಮಾಡಬೇಕು, ಅವರಿಂದ ಶುಲ್ಕವನ್ನು ಕಟ್ಟಿಸಿಕೊಳ್ಳುವಂತೆ ಸಲಹೆ ನೀಡಿದರು.ಸಿಐಟಿಯು ಮುಖಂಡ ಟಿ.ತಿಪ್ಪೇಸ್ವಾಮಿ ರಿ.ಸರ್ವೇ ನಂ: 283ರಲ್ಲಿ ಈ ಹಿಂದೆ ಪಾರ್ಕ್‌ಗೆ ನಿವೇಶನ ನಿಗದಿಪಡಿಸಿದ್ದು ಸದರಿ ನಿವೇಶನವನ್ನು ನಗರಸಭೆ ಆಡಳಿತ ಇ-ಖಾತೆ ಮಾಡಿಕೊಟ್ಟಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿಬಣ) ಸಂಘಟನಾ ಕಾರ್ಯದರ್ಶಿ ಮುರುಳಿ ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಪ್ರತಿವರ್ಷವೂ ಹಣ್ಣ, ಹೂ ಮಾರಾಟ ಮಾಡುವವರು ಎಲ್ಲಾ ರಸ್ತೆಗಳನ್ನು ಅಕ್ರಮಿಸಿಕೊಳ್ಳುತ್ತಾರೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು ನಗರಸಭೆ, ಕಾಲೇಜು ಮೈದಾನಕ್ಕೆ ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಯನ್ನು ಬದಲಾಯಿಸುವಂತೆ ಮನವಿ ಮಾಡಿದರು.ನಗರಸಭೆ ಮಾಜಿ ಸದಸ್ಯ ಜಿ.ಟಿ.ಗೋವಿಂದರಾಜು, ಕಳೆದ 2025-26 ಸಾಲಿನಲ್ಲಿ ನಗರಸಭೆಗೆ ಸರ್ಕಾರದಿಂದ ಸುಮಾರು 4 ಕೋಟಿ ರು. ಅಭಿವೃದ್ಧಿಗಾಗಿ ಬರುತ್ತಿತ್ತು. ನಗರಸಭೆಯಿಂದ ಪಾವತಿಯಾದ ಶುಲ್ಕದಿಂದಲೇ ಈ ಹಣ ಸರ್ಕಾರದಿಂದ ನಗರಸಭೆಗೆ ವರ್ಗಾವಣೆಯಾಗುತ್ತಿತ್ತು. ಆದರೆ, ಕಳೆದ ವರ್ಷ ಈ ಸರ್ಕಾರದಿಂದ ಕೇವಲ 16 ಲಕ್ಷ ರು. ಮಾತ್ರ ಬಂದಿದ್ದು ಸುಮಾರು 3.84 ಕೋಟಿ ಹಣ ಬಂದಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಮನವಿ ನೀಡುವಂತೆ ತಿಳಿಸಿದರು.
ಹಿರಿಯ ರೋಟೇರಿಯನ್ ಎಸ್.ಜಯಪ್ರಕಾಶ್, ರೋಟರಿ ಕ್ಲಬ್ ಅಧ್ಯಕ್ಷ ಕೆ.ಎಂ.ಪ್ರಕಾಶ್ ಮಾತನಾಡಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂದೆ ನಗರಸಭೆ ಮಳಿಗೆ ನಿರ್ಮಿಸಿ ವರ್ಷಗಳೆ ಕಳೆದಿವೆ. ಆದರೂ ಇದುವರೆಗೂ ಮಳಿಗೆಗಳ ಹರಾಜು ಪ್ರಕ್ರಿಯೆ ಸಕರಾತ್ಮಕವಾಗಿ ನಡೆಯದೆ ಮಳಿಗೆಗಳು ಖಾಲಿ ಉಳಿದಿವೆ. ಇದರಿಂದ ನಗರಸಭೆಗೆ ಆರ್ಥಿಕ ನಷ್ಟವಾಗಿದೆ. ಕೆಎಸ್‌ಆರ್‌ಟಿಸಿ ಸುತ್ತಮುತ್ತಲು ಗೂಂಡಗAಡಿಗಳು ಆರಂಭವಾಗಿದ್ದು ಇದರಿಂದ ವಾಹನ ಸಂಚಾರ, ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ಪೌರಾಯುಕ್ತ ಎಚ್.ಜಿ.ಜಗರೆಡ್ಡಿ ಆಯವ್ಯಯಕ್ಕೆ ಸಂಬಂಧಪಟ್ಟಂತೆ ತಾವು ನೀಡಿದ ಎಲ್ಲಾ ಸಲಹೆ ಸೂಚನೆಗಳನ್ನು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ನೀಡುವ ಭರವಸೆ ನೀಡಿದರು. ನೈರ್ಮಲ್ಯ ಎಂಜಿನಿಯರ್ ನರೇಂದ್ರಬಾಬು, ಸಮನ್ವಯಾಧಿಕಾರಿ ಭೂತಯ್ಯ, ಮಾಜಿ ನಗರಸಭಾ ಸದಸ್ಯರಾದ ರಮೇಶ್‌ಗೌಡ, ಸಿ.ಶ್ರೀನಿವಾಸ್, ಎಂ.ಜೆ.ರಾಘವೇಂದ್ರ, ರುದ್ರನಾಯಕ, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿಬಣ)ದ ತಾಲೂಕು ಅಧ್ಯಕ್ಷ ಪಿ.ಮಂಜುನಾಥ, ಮಾರುತಿ, ಗುರುನಾಥಭಟ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.