ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ ಇಂಡಿ, ಚಡಚಣ, ಸಿಂದಗಿ, ಆಲಮೇಲ ತಾಲೂಕುಗಳು ನೀರಾವರಿ ವಂಚಿತ ಪ್ರದೇಶಗಳಾಗಿದ್ದು, ಈ ಹಿಂದೆ ಕುಡಿಯುವ ನೀರಿಗಾಗಿ ಟ್ಯಾಂಕರ್ ಮೂಲಕ ನೀರು ಪೊರೈಸುವ ಪರಿಸ್ಥಿತಿ ಇತ್ತು. ಇಂದು ಅಲ್ಪಮಟ್ಟಿಗೆ ಆಲಮಟ್ಟಿ ಅಣೆಕಟ್ಟಿಯಿಂದ ಕಾಲುವೆ ನೀರು ಬರುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಇಂಡಿ
ಇಂಡಿ, ಚಡಚಣ, ಸಿಂದಗಿ, ಆಲಮೇಲ ತಾಲೂಕುಗಳು ನೀರಾವರಿ ವಂಚಿತ ಪ್ರದೇಶಗಳಾಗಿದ್ದು, ಈ ಹಿಂದೆ ಕುಡಿಯುವ ನೀರಿಗಾಗಿ ಟ್ಯಾಂಕರ್ ಮೂಲಕ ನೀರು ಪೊರೈಸುವ ಪರಿಸ್ಥಿತಿ ಇತ್ತು. ಇಂದು ಅಲ್ಪಮಟ್ಟಿಗೆ ಆಲಮಟ್ಟಿ ಅಣೆಕಟ್ಟಿಯಿಂದ ಕಾಲುವೆ ನೀರು ಬರುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ತಾಲೂಕಿನ ಬಸನಾಳ ಹತ್ತಿರ ರಾಷ್ಟ್ರೀಯ ಹೆದ್ದಾರಿ-51ರ ತಿಡಗುಂದಿ ಮುಖ್ಯ ಕಾಲುವೆ ವ್ಯಾಪ್ತಿಯ 19 ಕೆರೆಗಳಿಗೆ ಪ್ರಾಯೋಗಿಕ ನೀರು ತುಂಬಿಸುವ ಜಾಕವೆಲ್ ವೀಕ್ಷಿಸಿ ಮಾತನಾಡಿದರು. ಹೊರ್ತಿ ಭಾಗ ಅತ್ಯಂತ ಎತ್ತರ ಪ್ರದೇಶದಲ್ಲಿದ್ದು, ಈ ಭಾಗದಲ್ಲಿ ನೀರಾವರಿಗಾಗಿ ಅನೇಕ ಯೋಜನೆಗಳು ಮಾಡಿದರೂ ಎತ್ತರ ಪ್ರದೇಶ ಎಂದು ಸಬೂಬು ಹೇಳಿ ಕೈಬಿಡಲಾಗಿತ್ತು. ಆದರೆ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಸಕ್ತಿಯ ಹಾಗೂ ಈ ಭಾಗದ ರೈತರ ಬಹುದಿನಗಳ ಬೇಡಿಕೆ ಈಡೇರಿಸಲು ಹಿಂದಿನ ಮತ್ತು ಇಂದಿನ ಸರ್ಕಾರಗಳು ನೀರಾವರಿ ಯೋಜನೆಗಾಗಿ ಶ್ರಮಿಸಿವೆ. ಆಲಮಟ್ಟಿ ಅಣೆಕಟ್ಟಿನ ನೀರಾವರಿ ಯೋಜನೆಗಾಗಿ ಅನೇಕ ರೈತಾಪಿ ವರ್ಗ ತಮ್ಮ ಮನೆಗಳನ್ನು ಜಮೀನುಗಳನ್ನು ಕಳೆದುಕೊಂಡಿದ್ದಾರೆ. ತ್ಯಾಗ ಗುಣ ಇದ್ದಾಗ ಮಾತ್ರ ಇಂತಹ ಯೋಜನೆಗಳು ಸಫಲವಾಗಲು ಸಾಧ್ಯ. ಇಂತಹ ಹೃದಯವಂತರಿಗೆ ಯಾವ ಪದಗಳಿಂದ ಹೊಗಳಿದರೂ ಸಾಲದು ಎಂದು ಹೇಳಿದರು.
ಈ ಭಾಗವನ್ನು ನೀರಾವರಿ ಯೋಜನೆಗಳಿಂದ ಇನ್ನಷ್ಟು ಅಭಿವೃದ್ದಿ ಪಡಿಸಬೇಕಾಗಿದೆ. ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯಿಂದ ರೈತರ ಬದುಕು ಸಮೃದ್ದಿಯಾಗುತ್ತದೆ. ಇಂಡಿ ಮತಕ್ಷೇತ್ರ ಸರ್ವವಿಧದಲ್ಲಿ ಸುಧಾರಣೆಯಾಗಿದೆ. ಲಿಂಬೆ ಅಭಿವೃದ್ಧಿ ಮಂಡಳಿ, ಕೃಷಿ ವಿಜ್ಞಾನ ಕೇಂದ್ರ, ಅನೇಕ ಶಿಕ್ಷಣ ಸಂಸ್ಥೆಗಳು, ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ವಿತರಣಾ ಘಟಕಗಳು, ಮುಖ್ಯರಸ್ತೆಯಂತಹ ಸಾವಿರಾರು ಯೋಜನೆಗಳು ಸರಕಾರಿಂದ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಾಗೂ ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರರ ಸಹಕಾರದಿಂದ ಅನುದಾನ ತಂದು ಅಭಿವೃದ್ದಿಪಡಿಸಿರುವೆ ಎಂದು ಮಾಹಿತಿ ನೀಡಿದರು.ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ಚಡಚಣ, ಇಂಡಿ ತಾಲೂಕುಗಳು ಈ ಹಿಂದೆ ಕುಡಿಯಲು ನೀರಿಲ್ಲದೇ ಪರದಾಡುವಂತಾಗಿತ್ತು. ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರದಿಂದ ಇಂದು ನೀರಾವರಿ ಯೋಜನೆಗಳು ತ್ವರಿತ ಗತಿಯಲ್ಲಿ ಸಾಗುತ್ತಿದೆ. ಕೆರೆ ತುಂಬುವ ಯೋಜನೆ ಬಗ್ಗೆ ರೈತರು ಆತಂಕಪಡುವ ಅಗತ್ಯವಿಲ್ಲ. ಎಲ್ಲಾ ಕೆರೆಗಳನ್ನು ತುಂಬಿಸಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಮಹಾದೇವ ಗಡ್ಡದ, ಶ್ರೀಮಂತ ಇಂಡಿ, ಇಲಿಯಾಸ ಬೋರಾಮಣಿ, ಪ್ರಶಾಂತ ಕಾಳೆ, ಭೀಮುಸಾಹುಕಾರ ಬಸನಾಳ, ಜಾವೀದ ಮೋಮಿನ್, ಶೇಖರ ನಾಯಕ, ಧರ್ಮರಾಜ ವಾಲೀಕಾರ, ಹುಚ್ಚಪ್ಪ ತಳವಾರ , ಡಾ.ರವಿದಾಸ ಜಾಧವ, ಜಟ್ಟೆಪ್ಪ ರವಳಿ, ಗುರಣ್ಣಗೌಡ ಪಾಟೀಲ, ಕೆಬಿಜೆಎನ್ ಮುಖ್ಯ ಅಭಿಯಂತರ ಡಿ.ಬಸವರಾಜ, ಅಧಿಕಾರಿ ಗೋವಿಂದ ರಾಠೋಡ, ಕಾರ್ಯ ನಿರ್ವಾಹಕ ಅಭಿಯಂತರ ಅಶೋಕರೆಡ್ಡಿ ಪಾಟೀಲ, ಎಇಇ ರಿಯಾಜ ಬಾಗಲಕೋಟ, ಮಹೇಶ.ಎಂ, ಕಿಸಾನ್ ಸಂಘದ ಅಧ್ಯಕ್ಷ ಭೀಮಸೇನ ಕೊಕರೆ, ಗುತ್ತಿಗೆದಾರ ಕೃಷ್ಣರಾಜ ರೆಡ್ಡಿ, ಮಲ್ಲನಗೌಡ ಪಾಟೀಲ, ಹಣಮಂತ ಖಡೇಖಡೆ, ಕಾಂತು ಗೊಡೇಕರ್ ಮುಂತಾದವರು ಇದ್ದರು.ಕೋಟ್
ಮನುಷ್ಯನಿಗೆ ಬದ್ದತೆ ಇರಬೇಕು, ನಾವೆಲ್ಲಾ ನ್ಯಾಯ, ನೀತಿ, ಧರ್ಮದ ತಳಹದಿಯ ಮೇಲೆ ರಾಜಕಾರಣ ಮಾಡಿದವರು. ಒಬ್ಬ ವ್ಯಕ್ತಿಯ ಮನಸ್ಸು ನೋಯಿಸದೆ ರಾಜಕೀಯ ಮಾಡುತ್ತಿದ್ದೇನೆ. ರಾಜಕಾರಣ ಬರುತ್ತದೆ, ಹೋಗುತ್ತದೆ. ಚುನಾವಣೆ ಕೇವಲ ಒಂದು ತಿಂಗಳು ಮಾತ್ರ. ನಂತರದ ದಿನಗಳಲ್ಲಿ ಸಾರ್ವಜನಿಕರ ಸೇವೆ ಮಾಡುವುದು ಜನಪ್ರತಿನಿಧಿಯ ಆದ್ಯ ಕರ್ತವ್ಯ.ಯಶವಂತರಾಯಗೌಡ ಪಾಟೀಲ, ಇಂಡಿ ಶಾಸಕ