ಭಾರಿ ಮಳೆ ಕಾರಣ: ಬೆಳ್ತಂಗಡಿ ಬಸ್‌ ನಿಲ್ದಾಣ ಕಾಮಗಾರಿ ಸ್ಥಗಿತ!

| Published : Sep 24 2025, 01:02 AM IST

ಸಾರಾಂಶ

ಬೆಳ್ತಂಗಡಿ ತಾಲೂಕು ಕೇಂದ್ರದಲ್ಲಿ 2023ರಲ್ಲಿ ಆರಂಭವಾಗಿರುವ ಬಸ್ ನಿಲ್ದಾಣ ನಿರ್ಮಾಣದ 12 ಕೋಟಿ ರು. ಅನುದಾನದ ಪ್ರಥಮ ಹಂತದ ಕಾಮಗಾರಿಯಲ್ಲಿ ನೆಲಮಟ್ಟದ ಕೆಲಸಗಳು ಮಾತ್ರ ಪೂರ್ಣಗೊಂಡಿದ್ದು, ಉಳಿದಂತೆ ಬಸ್ ನಿಲ್ದಾಣದ ಕಾಮಗಾರಿ ಬಾಕಿಯಾಗಿವೆ.

ಬೆಳ್ತಂಗಡಿ: ತಾಲೂಕು ಕೇಂದ್ರದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಸ್ ನಿಲ್ದಾಣ ಕಾಮಗಾರಿ ಕಳೆದ ಹಲವು ತಿಂಗಳಿನಿಂದ ಸ್ಥಗಿತಗೊಂಡಿದೆ.2023ರಲ್ಲಿ ಆರಂಭವಾಗಿರುವ 12 ಕೋಟಿ ರು. ಅನುದಾನದ ಪ್ರಥಮ ಹಂತದ ಕಾಮಗಾರಿಯಲ್ಲಿ ನೆಲಮಟ್ಟದ ಕೆಲಸಗಳು ಮಾತ್ರ ಪೂರ್ಣಗೊಂಡಿದ್ದು, ಉಳಿದಂತೆ ಬಸ್ ನಿಲ್ದಾಣದ ಕಾಮಗಾರಿ ಬಾಕಿಯಾಗಿವೆ. ಭಾರಿ ಮಳೆ ಕಾಮಗಾರಿಗೆ ಅಡ್ಡಿ ನೀಡಿದೆ ಎಂದು ಹೇಳಲಾಗುತ್ತಿದೆ. ಕಾಮಗಾರಿಗೆ ತಂದಿರುವ ಕಬ್ಬಿಣ ತುಕ್ಕು ಹಿಡಿಯುತ್ತಿದೆ. ಬಸ್ ನಿಲ್ದಾಣ ನಿರ್ಮಾಣ ಪ್ರದೇಶ ಸಂಪೂರ್ಣ ಗದ್ದೆಯಂತಿದ್ದು, ಒಳಗಡೆ ಹೋದರೆ ಹೂತು ಹೋಗುವಂತಿದೆ. ಆರಂಭಿಕ ಹಂತದ ಕಾಮಗಾರಿಗಳನ್ನು ಅವೈಜ್ಞಾನಿಕವಾಗಿ ನಡೆಸಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.ಮಳೆಗಾಲದಲ್ಲಿ ಇಲ್ಲಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಮಣ್ಣು ಕುಸಿದು ಸಾಕಷ್ಟು ಅವಾಂತರ ಉಂಟಾಗಿದೆ. ಬಸ್ ನಿಲ್ದಾಣ ನಿರ್ಮಾಣವಾಗುತ್ತಿರುವ ಪೊಲೀಸ್ ಠಾಣೆಯ ಭಾಗದಲ್ಲೂ ಮಣ್ಣು ಕುಸಿದು ಠಾಣೆಯ ಆವರಣ ಗೋಡೆ ಕುಸಿಯುವ ಭೀತಿ ಎದುರಾಗಿದೆ.

ಸಾಂಕ್ರಮಿಕ ರೋಗ ಭೀತಿ:ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಹೆಚ್ಚಿನ ಗಲೀಜು ಇದ್ದು, ಇಲ್ಲಿ ಅಲ್ಲಲ್ಲಿ ನೀರು ಸಂಗ್ರಹಗೊಂಡು ಸೊಳ್ಳೆ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಇದರ ಪಕ್ಕದಲ್ಲಿ ಹಳೆ ಬಸ್ ನಿಲ್ದಾಣ, ಅರಣ್ಯ ಇಲಾಖೆ, ಪೊಲೀಸ್ ಠಾಣೆ, ತಾಲೂಕು ಕಚೇರಿ, ಮಳಿಗೆಗಳಿದ್ದು, ಈ ಪರಿಸರ ಮೂಲಕ ಸಾವಿರಾರು ಜನ ಓಡಾಟ ನಡೆಸುತ್ತಾರೆ. ಇವರೆಲ್ಲರೂ ಸಾಂಕ್ರಾಮಿಕ ರೋಗಗಳ ಭೀತಿಯಿಂದಲೇ ಓಡಾಟ ನಡೆಸುವ ಅನಿವಾರ್ಯತೆ ಎದುರಾಗಿದೆ.

ಬಸ್ ನಿಲ್ದಾಣ ಕಾಮಗಾರಿಗಾಗಿ ವರ್ಷದ ಮೊದಲೇ ಹಳೆ ಬಸ್ ನಿಲ್ದಾಣದಲ್ಲಿದ್ದ ಹಲವು ಅಂಗಡಿಗಳನ್ನು ತೆರವುಗೊಳಿಸಲಾಗಿದ್ದರೂ ಆ ಭಾಗದ ಕಾಮಗಾರಿ ಇನ್ನೂ ಕೂಡ ಆರಂಭವಾಗಿಲ್ಲ.

ಖಾಸಗಿ ವಾಹನಗಳ ಸಮಸ್ಯೆ:

ದಿನಂಪ್ರತಿ ನೂರಾರು ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಆಸರೆಯಾಗಿರುವ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಭರಾಟೆ ಸಾಕಷ್ಟಿದೆ. ಖಾಸಗಿ ವಾಹನಗಳು, ಬಸ್ ನಿಲ್ದಾಣದ ಮೂಲಕವೇ ಓಡಾಟ ನಡೆಸುವುದು ಪ್ರಯಾಣಿಕರಿಗೆ ಅಪಾಯಕಾರಿ. ಬಸ್ ನಿಲ್ದಾಣ ಪ್ರದೇಶದಲ್ಲಿ ಖಾಸಗಿ ವಾಹನಗಳ ಪಾರ್ಕಿಂಗ್ ಕೂಡ ಕಂಡುಬರುತ್ತಿದೆ.

ಪ್ರಸ್ತುತ ಇರುವ ಬಸ್ ನಿಲ್ದಾಣದ ಪಕ್ಕದಲ್ಲಿ ಕಾಮಗಾರಿ ನಡೆಯುತ್ತಿದೆ. ಈ ಮೊದಲೇ ಅವ್ಯವಸ್ಥಿತವಾಗಿದ್ದ ಬೆಳ್ತಂಗಡಿ ಬಸ್ ನಿಲ್ದಾಣ ಈಗ ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ. ಪ್ರಯಾಣಿಕರಿಗೆ ಬಸ್ ನಿರೀಕ್ಷಿಸಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದ್ದರೂ, ಅದು ಇಕ್ಕಟ್ಟಿನ ಸ್ಥಳದಲ್ಲಿದ್ದು ಸ್ವಚ್ಛತೆಯಲ್ಲೂ ತೀರಾ ಹಿಂದುಳಿದಿದೆ. ಮಳೆ ವೇಳೆ ಇಲ್ಲಿ ಹಳ್ಳದಂತೆ ನೀರು ಹರಿಯುತ್ತದೆ......................

ಸಾವಿರಾರು ಪ್ರಯಾಣಿಕರಿಗೆ ಆಶ್ರಯ

ಶಾಸಕ ಹರೀಶ್ ಪೂಂಜ, ಕಳೆದ ಅವಧಿಯಲ್ಲಿ ಬೆಳ್ತಂಗಡಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುದಾನ ತರಲು ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಬೆಳ್ತಂಗಡಿಗೆ ಸುಸಜ್ಜಿತ ಬಸ್ ನಿಲ್ದಾಣ ಅಗತ್ಯವಾಗಿದ್ದು, ಕಾಮಗಾರಿ ಆರಂಭದ ವೇಳೆ ಇದು ಬೇಗನೆ ಪೂರ್ಣಗೊಳ್ಳುವ ನಿರೀಕ್ಷೆ ಇತ್ತು. ಆದರೆ ಬಳಿಕ ಕಾಮಗಾರಿ ಕುಂಟುತ್ತಾ ಸಾಗಿ ಇದೀಗ ಸಂಪೂರ್ಣ ನನೆಗುದಿಗೆಬಿದ್ದಿದೆ. ಬೆಳ್ತಂಗಡಿ ಬಸ್ ನಿಲ್ದಾಣ, ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗದ ಧರ್ಮಸ್ಥಳ ಡಿಪೋಗೆ ಒಳಪಟ್ಟ ನಿಲ್ದಾಣವಾಗಿದೆ. ರಾಜ್ಯದ ನಾನಾ ಭಾಗಗಳಿಗೆ ಇಲ್ಲಿಂದ ಬಸ್‌ಗಳು ಓಡಾಡುತ್ತವೆ. ಸಾವಿರಾರು ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಬೆಳ್ತಂಗಡಿ ಬಸ್ ನಿಲ್ದಾಣ ಪ್ರಮುಖ ಆಶ್ರಯವಾಗಿದೆ. ಆದರೆ ಈಗಿರುವ ಬಸ್ ನಿಲ್ದಾಣದಲ್ಲಿ ಯಾವುದೇ ವ್ಯವಸ್ಥೆಗಳಿಲ್ಲ.

..................ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣಸುಮಾರು 1.20 ಎಕರೆ ಸ್ಥಳದಲ್ಲಿ 12 ಕೋಟಿ ರು. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಲಿದೆ. ಪಾರ್ಕಿಂಗ್ ವ್ಯವಸ್ಥೆ, ವಾಣಿಜ್ಯ ಮಳಿಗೆ, ವಿಶ್ರಾಂತಿ ಕೊಠಡಿ, ಪೊಲೀಸ್ ರಕ್ಷಣಾ ವ್ಯವಸ್ಥೆ, ಫೈರ್ ಸೇಫ್ಟಿ, ಶೌಚಾಲಯ ಸೇರಿದಂತೆ ಸಕಲ ವ್ಯವಸ್ಥೆಗಳನ್ನು ಒಳಗೊಂಡ ನೂತನ ಬಸ್ ನಿಲ್ದಾಣ ಇಲ್ಲಿ ನಿರ್ಮಿಸಲು ರೂಪುರೇಷೆ ಸಿದ್ಧಪಡಿಸಲಾಗಿದ್ದರೂ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲವಿಪರೀತ ಮಳೆ ಇದ್ದ ಕಾರಣ ಕಾಮಗಾರಿ ನಿಲ್ಲಿಸಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಮತ್ತೆ ಕೆಲಸ ಆರಂಭವಾಗಲಿದೆ. ಇದಕ್ಕೆ ಬೇಕಾಗುವ ಅನುದಾನ ಬಿಡುಗಡೆಗೊಂಡಿದೆ.

। ಶರತ್, ಎಂಜಿನಿಯರ್, ಕೆಎಸ್ಸಾರ್ಟಿಸಿ ಎಂಜಿನಿಯರಿಂಗ್ ವಿಭಾಗ, ಪುತ್ತೂರು