ಮಳೆ ನೀರು ನುಗ್ಗಿದ 63 ಮನೆಗಳಿಗೆಪಾಲಿಕೆಯಿಂದ ಪರಿಹಾರ: ತುಷಾರ್‌

| Published : Oct 08 2024, 01:12 AM IST

ಸಾರಾಂಶ

ನಗರದಲ್ಲಿ ಕಳೆದ ಶನಿವಾರ ಸುರಿದ ಭಾರೀ ಮಳೆಗೆ ಮಹಾಲಕ್ಷ್ಮೀ ಲೇಔಟ್‌ನ 63 ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಆ ಮನೆಗಳಿಗೆ ತಲಾ 10 ಸಾವಿರ ರು. ಪರಿಹಾರ ನೀಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಕಳೆದ ಶನಿವಾರ ಸುರಿದ ಭಾರೀ ಮಳೆಗೆ ಮಹಾಲಕ್ಷ್ಮೀ ಲೇಔಟ್‌ನ 63 ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಆ ಮನೆಗಳಿಗೆ ತಲಾ 10 ಸಾವಿರ ರು. ಪರಿಹಾರ ನೀಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ಮಹದೇವಪುರ ಮತ್ತು ಬೊಮ್ಮನಹಳ್ಳಿ ಹೊರತುಪಡಿಸಿ ಉಳಿದ ವಲಯಗಳಲ್ಲಿ ಭಾರೀ ಮಳೆಯಾಗಿದೆ. ಹಂಪಿನಗರ ಬಡಾವಣೆಯಲ್ಲಿ 108.5 ಮೀ.ಮೀ ಮಳೆಯಾಗಿದೆ. ಅದರ ಜೊತೆಗೆ ನಂದಿನಿ ಲೇಔಟ್‌, ಮಹಾಲಕ್ಷ್ಮೀ ಲೇಔಟ್‌, ಯಲಹಂಕ ಸೇರಿ ಮತ್ತಿತರ ಬಡಾವಣೆಗಳಲ್ಲೂ ಭಾರೀ ಮಳೆಯಾಗಿದೆ. ಅದರಲ್ಲೂ ಯಲಹಂಕ ಕೆರೆ ಕೋಡಿಯಿಂದ ನೀರು ಹೆಚ್ಚಾಗಿ ಹರಿದ ಪರಿಣಾಮ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನ ಕಾಂಪೌಂಡ್‌ ಗೋಡೆ ಕುಸಿದು ಅಪಾರ್ಟ್‌ಮೆಂಟ್‌ಗೆ ನೀರು ನುಗ್ಗಿದ್ದು, ಅದನ್ನು ಹೊರಗೆ ಹಾಕಲಾಗುತ್ತಿದೆ.

ಹಾಗೆಯೇ, ಮಹಾಲಕ್ಷ್ಮೀ ಲೇಔಟ್‌ನ 63 ಮನೆಗಳಿಗೆ ನೀರು ನುಗ್ಗಿದ್ದು, ಇದೀಗ ನೀರು ತೆರವು ಮಾಡಲಾಗುತ್ತಿದೆ. ಈ ಮನೆಗಳಿಗೆ ಬಿಬಿಎಂಪಿಯಿಂದ ತಲಾ 10 ಸಾವಿರ ರೂ. ಪರಿಹಾರ ನೀಡಲಾಗುವುದು. ಆ ಕುರಿತು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

800ಕ್ಕೂ ಹೆಚ್ಚಿನ ಗುಂಡಿಗಳು ಬಾಕಿಮಳೆಯ ಕಾರಣದಿಂದಾಗಿ ರಸ್ತೆ ಗುಂಡಿ ಮುಚ್ಚುವ ಕಾರ್ಯದಲ್ಲಿ ಕೊಂಚ ಹಿನ್ನಡೆಯಾಗಿತ್ತು. ಇನ್ನೂ 800ಕ್ಕೂ ಹೆಚ್ಚಿನ ರಸ್ತೆಗುಂಡಿಗಳನ್ನು ಮುಚ್ಚುವುದು ಬಾಕಿಯಿದೆ. ಅವುಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ. ಹಾಗೆಯೇ, ಸುಮಾರು 20 ಮರಗಳು ಹಾಗೂ 30ಕ್ಕೂ ಹೆಚ್ಚಿನ ರೆಂಬೆಗಳು ಬಿದ್ದಿದ್ದು, ಅವುಗಳನ್ನು ತೆರವು ಮಾಡಲಾಗಿದೆ ಎಂದು ತುಷಾರ್‌ ಗಿರಿನಾಥ್‌ ಮಾಹಿತಿ ನೀಡಿದರು.