ಸಾರಾಂಶ
ಕನ್ನಡಪ್ರಭ ವಾರ್ತೆ, ಭದ್ರಾವತಿ
ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದ್ದು, ಶಾಸಕರು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆಂದು ಜಾತ್ಯತೀತ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿಗೌಡ ಆರೋಪಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2 ತಿಂಗಳಿನಿಂದ ಶಾಸಕರು ಕ್ಷೇತ್ರದಲ್ಲಿ ಕಾಣುತ್ತಿಲ್ಲ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಅವರ ಕುಟುಂಬದವರು ಪಾಲ್ಗೊಂಡು ಉದ್ಘಾಟಿಸುತ್ತಿದ್ದಾರೆ. ಶಾಸಕರು ಮಾಡಬೇಕಾಗಿರುವ ಎಲ್ಲ ಕೆಲಸಗಳನ್ನು ಅವರ ಸಹೋದರರು, ಮಕ್ಕಳು ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಕ್ಷೇತ್ರದಲ್ಲಿ ಒಸಿ, ಇಸ್ಪೀಟ್ ಸೇರಿದಂತೆ ಅಕ್ರಮ ಚಟುವಟಿಕೆಗಳು ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕುವವರು ಯಾರು ಇಲ್ಲದಂತಾಗಿದೆ. ಅಧಿಕಾರಿಗಳು, ಶಾಸಕರ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದಾರೆ. ತಮ್ಮ ಜವಾಬ್ದಾರಿಗಳನ್ನು ಮರೆತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆಂದು ಆರೋಪಿಸಿ ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಸರ್ಕಾರಿ ಕಚೇರಿಗಳಲ್ಲಿ ನಡೆಯಬೇಕಾದ ಕೆಲಸ ಕಾರ್ಯಗಳು ಶಾಸಕರ ಮನೆಯಲ್ಲಿ ನಡೆಯುತ್ತಿರುವುದು ವಿಪರ್ಯಾಸ. ಶಾಸಕರ ಕುಟುಂಬದವರು ಎಲ್ಲವನ್ನು ನಿಭಾಯಿಸುವುದಾದರೆ ಶಾಸಕರ ಅಗತ್ಯವೇನು? ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿ ಎಂದು ಆಗ್ರಹಿಸಿದರು.
ಎಂಪಿಎಂ ಕಾರ್ಖಾನೆ ಆರಂಭಿಸುವುದಾಗಿ ಶಾಸಕರು ಭರವಸೆ ನೀಡಿದ್ದರು. ಅವರದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಇನ್ನೂ ಆರಂಭಗೊಂಡಿಲ್ಲ. ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿವೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಶಾಸಕರಿಗೆ ಕಾಳಜಿ ಇಲ್ಲ. ಆಸಕ್ತಿ ಇರುವವರಿಗೆ ಬಿಟ್ಟು ಕೊಡಲಿ ಎಂದರು.ಪಕ್ಷದ ತಾಲೂಕು ಅಧ್ಯಕ್ಷ ಆರ್.ಕರುಣಾಮೂರ್ತಿ ಮಾತನಾಡಿ, ಖಾಸಗಿ ಕಾರ್ಯಕ್ರಮಗಳನ್ನು ಹೇಗಾದರೂ ಮಾಡಿಕೊಳ್ಳಲಿ. ಆದರೆ, ಸರ್ಕಾರಿ ಕಾರ್ಯಕ್ರಮಗಳನ್ನು ನಿಯಮ ಪ್ರಕಾರ ಮಾಡಬೇಕೆಂದು ಆಗ್ರಹಿಸಿದರು.
ಶಿವಮೊಗ್ಗ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಡಿ.ಆನಂದ್ ಮಾತನಾಡಿ, ಈ ಹಿಂದೆ ಜೆಡಿಎಸ್‌ನಲ್ಲಿದ್ದ ಎಸ್.ಕುಮಾರ್ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು ಕ್ಷೇತ್ರದಲ್ಲಿ ಜೆಡಿಎಸ್ ನಿರ್ಮೂಲನೆ ಮಾಡಬೇಕೆಂದು ಶಾಸಕರು ಮುಂದಾಗಿರುವುದು ಖಂಡನೀಯ. ಜೆಡಿಎಸ್ ನಿರ್ಮೂಲನೆ ಅಸಾಧ್ಯ ಎಂದು ಕಿಡಿಕಾರಿದರು.ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಜೆ.ಪಿ. ಯೋಗೇಶ್, ಎಚ್.ಬಿ. ರವಿಕುಮಾರ್, ಮಧುಸೂದನ್, ನಗರಸಭೆ ಸದಸ್ಯರಾದ ಉದಯ್ ಕುಮಾರ್, ಸವಿತಾ ಉಮೇಶ್, ರೇಖಾ ಪ್ರಕಾಶ್, ಧರ್ಮೇಗೌಡ, ಎಂ.ರಾಜು, ಸುಬ್ಬಣ್ಣ, ರಾಮಕೃಷ್ಣ, ಭಾಗ್ಯಮ್ಮ ಇನ್ನಿತರರು ಉಪಸ್ಥಿತರಿದ್ದರು.
- - - -ಡಿ28-ಬಿಡಿವಿಟಿ:ಭದ್ರಾವತಿಯಲ್ಲಿ ಬುಧವಾರ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿಗೌಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.