ಅಬ್ಬರಿಸುತ್ತಿರುವ ಮಳೆಗೆ ಗುಡ್ಡ ಕುಸಿತ, ಪ್ರವಾಹ ಭೀತಿ

| Published : Jul 19 2024, 12:49 AM IST

ಅಬ್ಬರಿಸುತ್ತಿರುವ ಮಳೆಗೆ ಗುಡ್ಡ ಕುಸಿತ, ಪ್ರವಾಹ ಭೀತಿ
Share this Article
  • FB
  • TW
  • Linkdin
  • Email

ಸಾರಾಂಶ

ಬುಧವಾರ ಇಳಿಮುಖವಾಗಿದ್ದ ಮಳೆ ಗುರುವಾರ ಮತ್ತೆ ಅಬ್ಬರಿಸುತ್ತಿದೆ. ದಟ್ಟವಾದ ಮೋಡ ಕವಿದ ವಾತಾವರಣದೊಂದಿಗೆ ಆಗಾಗ ಸುರಿಯುವ ಭಾರಿ ಮಳೆ ಮತ್ತೆ ಪ್ರವಾಹದ ಆತಂಕವನ್ನು ತಂದೊಡ್ಡಿದೆ.

ಕಾರವಾರ: ಜಿಲ್ಲೆಯಲ್ಲಿ ಗುರುವಾರ ಮತ್ತೆ ಮಳೆಯ ಅಬ್ಬರ ಹೆಚ್ಚಿದೆ. ಶಿರೂರು ಗುಡ್ಡ ಕುಸಿತ ತೆರವು ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ದುರಂತದಲ್ಲಿ ನಾಪತ್ತೆಯಾಗಿದ್ದ ಇನ್ನೂ ಇಬ್ಬರ ಮೃತದೇಹ ಪತ್ತೆಯಾಗಿವೆ. ನದಿಯಲ್ಲಿ ತೇಲುತ್ತಿರುವ ಟ್ಯಾಂಕರ್‌ನಿಂದ ಅಪಾಯಕಾರಿ ಅನಿಲ ಹೊರತೆಗೆಯುವ ಕಾರ್ಯಾಚರಣೆ ಆರಂಭವಾಗಿದೆ. ಜಿಲ್ಲೆಯ ಇತರೆಡೆಗಳಲ್ಲೂ ಗುಡ್ಡ ಕುಸಿತ ಉಂಟಾಗುತ್ತಿದ್ದು, ಜನತೆ ಭಯಭೀತರಾಗಿದ್ದಾರೆ. ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನಾಲ್ವರ ಶವ ಪತ್ತೆಯಾಗಿತ್ತು. ಇದರಲ್ಲಿ ಮೂವರು ಒಂದೇ ಕುಟುಂಬದವರು (ಲಕ್ಷ್ಮಣ ನಾಯ್ಕ ಕುಟುಂಬ). ಇನ್ನೊಬ್ಬ ಚಾಲಕನ ಶವ ದೊರಕಿತ್ತು. ಗುರುವಾರ ಲಕ್ಷ್ಮಣ ನಾಯ್ಕ ಕುಟುಂಬದ ಬಾಲಕಿ ಆವಂತಿಕಾ ಹಾಗೂ ಲಾರಿ ಚಾಲಕ ತಮಿಳುನಾಡಿನ ಮುರುಗನ್ ಎಂಬಾತನ ಶವ ಈ ಹಿಂದೆ ದೊರಕಿದ ಸ್ಥಳದಲ್ಲೇ ಅಂದರೆ ಗೋಕರ್ಣ ಸಮೀಪ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಇದರೊಂದಿಗೆ ಪತ್ತೆಯಾದ ಮೃತದೇಹಗಳ ಸಂಖ್ಯೆ 6ಕ್ಕೇರಿದೆ. ಗುಡ್ಡ ಕುಸಿದು ಮನೆ ಪಕ್ಕದ ಗಂಗಾವಳಿ ನದಿ ಸೇರಿದ್ದರಿಂದ ಮನೆಯಲ್ಲಿದ್ದವರು ನದಿ ಮೂಲಕ ಶವವಾಗಿ ಸಮುದ್ರ ಸೇರಿದ್ದರು. ಶಿರೂರು ದುರಂತದಲ್ಲಿ ಒಟ್ಟೂ 10 ಜನರು ನಾಪತ್ತೆಯಾದ ಬಗ್ಗೆ ದೂರುಗಳು ಬಂದಿವೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ. ಆ ಪ್ರಕಾರ ಇನ್ನೂ ನಾಲ್ವರ ಮೃತದೇಹ ಪತ್ತೆಯಾಗಬೇಕಿದೆ. ಗುಡ್ಡ ತೆರವು ಕಾರ್ಯಾಚರಣೆ: ಈ ನಡುವೆ ಶಿರೂರು ಹೆದ್ದಾರಿಯಲ್ಲಿ ಕುಸಿದ ಗುಡ್ಡ ತೆರವು ಕಾರ್ಯಾಚರಣೆ ಎನ್‌ಡಿಆರ್‌ಎಫ್ ನೇತೃತ್ವದಲ್ಲಿ ಹಗಲು- ರಾತ್ರಿ ನಡೆಯುತ್ತಿದೆ. ಸುರಿಯುತ್ತಿರುವ ಮಳೆಗೆ ಮೇಲಿಂದ ಮೇಲೆ ಗುಡ್ಡ ಕುಸಿಯುತ್ತಿದೆ. ಸಂಚಾರಕ್ಕೆ ಇನ್ನೂ ಎರಡು ದಿನ ಮುಕ್ತವಾಗುವ ಸಾಧ್ಯತೆ ಬಹುತೇಕ ಕಡಿಮೆ. ಕುಮಟಾ- ಶಿರಸಿ ಹೆದ್ದಾರಿಯ ರಾಗಿಹೊಸಳ್ಳಿ ಬಳಿ ಗುಡ್ಡ ಕುಸಿದಿದ್ದು, ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಕಾರ್ಯ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಕಾರವಾರ- ಇಳಕಲ್ ಹೆದ್ದಾರಿಯಲ್ಲಿ ಕಡವಾಡ- ಮಂದ್ರಾಳಿ ಬಳಿ ಗುಡ್ಡ ಕುಸಿದಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ. ಹೆದ್ದಾರಿ ಸಂಚಾರಕ್ಕೆ ಇನ್ನೂ ಒಂದು ದಿನ ಬೇಕಾಗಬಹುದು ಎಂದು ತಿಳಿಸಲಾಗಿದೆ. ಇತರೆಡೆ ಗುಡ್ಡ ಕುಸಿತ: ಗೋವಾ- ಮಂಗಳೂರು ಚತುಷ್ಪಥ ಹೆದ್ದಾರಿಯಲ್ಲಿ ಕುಮಟಾ ತಾಲೂಕಿನ ಬರ್ಗಿ ಬಳಿ ಗುಡ್ಡ ಕುಸಿದು ಸಂಚಾರ ಸ್ಥಗಿತವಾಗಿತ್ತು. ಈಗ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಗುಡ್ಡ ತೆರವು ಕಾರ್ಯ ನಡೆಯುತ್ತಿದೆ. ಗೋಕರ್ಣ ಸಮೀಪದ ದೇವರಭಾವಿ ಬಳಿಯ ಗುಡ್ಡ 200 ಮೀಟರಿಗೂ ಹೆಚ್ಚು ಅಗಲದಲ್ಲಿ ಬಿರುಕು ಬಿಟ್ಟಿದ್ದು, ಯಾವ ಕ್ಷಣಕ್ಕೂ ಕುಸಿದು ಬೀಳುವ ಆತಂಕವಿದೆ. ಈ ಗುಡ್ಡ ಕೆಳಭಾಗದಲ್ಲಿ 10ಕ್ಕೂ ಅಧಿಕ ಮನೆಗಳಿದ್ದು, ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಶಿರೂರು ಗುಡ್ಡ ಕುಸಿತದ ಘಟನೆಯಿಂದ ಹೆದರಿದ ಹಲವರು ಮನೆ ಖಾಲಿ ಮಾಡಿದ್ದಾರೆ.ಅಬ್ಬರಿಸುತ್ತಿರುವ ಭಾರಿ ಮಳೆ: ಬುಧವಾರ ಇಳಿಮುಖವಾಗಿದ್ದ ಮಳೆ ಗುರುವಾರ ಮತ್ತೆ ಅಬ್ಬರಿಸುತ್ತಿದೆ. ದಟ್ಟವಾದ ಮೋಡ ಕವಿದ ವಾತಾವರಣದೊಂದಿಗೆ ಆಗಾಗ ಸುರಿಯುವ ಭಾರಿ ಮಳೆ ಮತ್ತೆ ಪ್ರವಾಹದ ಆತಂಕವನ್ನು ತಂದೊಡ್ಡಿದೆ. ಭಟ್ಕಳದ ಚತುಷ್ಪಥ ಹೆದ್ದಾರಿ ರಂಗಿನಕಟ್ಟೆ ಜಲಾವೃತವಾಗಿದೆ. ಕುಮಟಾದ ಚಂಡಿಕಾ ನದಿ ಉಪ್ಪಿನಪಟ್ಟಣ ಸೇತುವೆ ಮೇಲೆ ಪ್ರವಹಿಸುತ್ತಿದೆ. ಅಘನಾಶಿಸಿ ಗಂಗಾವಳಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಕುಮಟಾ, ಹೊನ್ನಾವರ, ಅಂಕೋಲಾ, ಕಾರವಾರದಲ್ಲಿ ಭಾರೀ ಮಳೆಯಾಗುತ್ತಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೋಯಿಡಾ, ಮುಂಡಗೋಡ, ಹಳಿಯಾಳ ಹಾಗೂ ದಾಂಡೇಲಿಯಲ್ಲೂ ಮಳೆ ಜೋರಾಗಿದೆ.