ಜಾನಪದ ಸಾಹಿತ್ಯ ಮತ್ತು ಸಂಗೀತಕ್ಕೆ ಮಾನವನನ್ನು ಉತ್ತಮ ನಾಗರಿಕನನ್ನಾಗಿ ರೂಪಿಸುವ ಶಕ್ತಿಯಿದೆ. ಸಮಾಜದ ಅಂಕುಡೊಂಕು ತಿದ್ದುವ ಶಕ್ತಿ ಜಾನಪದಕ್ಕಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪರಿಷತ್ತಿನ ಮಹಿಳಾ ಘಟಕಗಳನ್ನು ರಾಜ್ಯದಲ್ಲೆಡೆ ಅಸ್ಥಿತ್ವಕ್ಕೆ ತರಲಾಗಿದೆ. ಅದರಂತೆ ಮುದ್ದೇಬಿಹಾಳ ತಾಲೂಕು ಮಹಿಳಾ ಘಟಕ ಉದ್ಘಾಟನೆಗೊಳ್ಳುತ್ತಿದೆ ಎಂದು ಕನ್ನಡ ಜಾನಪದ ಪರಿಷತ್‌ ರಾಜ್ಯಾಧ್ಯಕ್ಷ ಎಸ್.ಬಾಲಾಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಜಾನಪದ ಸಾಹಿತ್ಯ, ಸಂಗೀತ, ಕಲೆ ಮತ್ತು ಸಂಸ್ಕೃತಿ ಮುಂದಿನ ಪೀಳಿಗೆಗೆ ವರ್ಗಾವಣೆಯಾಗುವಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ ಎಂದು ಕನ್ನಡ ಜಾನಪದ ಪರಿಷತ್‌ ರಾಜ್ಯಾಧ್ಯಕ್ಷ ಎಸ್.ಬಾಲಾಜಿ ಹೇಳಿದರು.

ಪಟ್ಟಣದ ಬೆಂಗಳೂರು ಬೇಕರಿ ಫಂಕ್ಷನ್ ಹಾಲ್‌ನಲ್ಲಿ ಮಂಗಳವಾರ ನಡೆದ ಕನ್ನಡ ಜಾನಪದ ಪರಿಷತ್, ಬೆಂಗಳೂರು ಇದರ ಮುದ್ದೇಬಿಹಾಳ ತಾಲೂಕು ಮಹಿಳಾ ಘಟಕದ ಉದ್ಘಾಟನೆ, ಪದಾಧಿಕಾರಿಗಳಿಗೆ ಪದಪತ್ರ ಪ್ರದಾನ ಹಾಗೂ ಜಾನಪದ ಕ್ಷೇತ್ರದ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ದ್ವಂದ್ವ ಹಾಗೂ ಅಶ್ಲೀಲ ಹಾಡುಗಳನ್ನು ಜನಪದ ಎಂದು ಬಿಂಬಿಸಿ ಹೊಸ ಪೀಳಿಗೆಗಳಿಗೆ ತಪ್ಪು ಸಂದೇಶ ನೀಡುತ್ತಿರುವುದು ಸಮಾಜಘಾತಕ ಕ್ರಮ, ಇದಕ್ಕೆ ಸರ್ಕಾರ ಕೂಡಲೇ ಕಡಿವಾಣ ಹಾಕಬೇಕೆಂದರು.

ಕಾಂಗ್ರೆಸ್ ಮುಖಂಡ, ಅಸ್ಕಿ ಫೌಂಡೇಶನ್‌ ಅಧ್ಯಕ್ಷ ಸಿ.ಬಿ.ಅಸ್ಕಿ ಮಾತನಾಡಿ, ನಮ್ಮ ಪೂರ್ವಜರಿಂದ ಬಂದ ಜನಪದವನ್ನು ನಾವುಗಳು ಉಳಿಸಿಕೊಂಡ ಹೋಗಬೇಕಾಗಿದೆ. ಇಂದು ಉತ್ತರ ಕರ್ನಾಟಕದ ಹೆಸರೇಳಿಕೊಂಡು ಅಶ್ಲೀಲ ಜಾನಪದ ಹಾಡುಗಳನ್ನು ಹಾಡುವುದನ್ನು ತಡೆಯಲು ವೇದಿಕೆಗಳು ನಿರ್ಮಾಣವಾಗುತ್ತಿರುವುದು ಒಳ್ಳೆಯ ಕಾರ್ಯ. ಜನಪದಗೋಸ್ಕರ ಮಹಿಳಾ ಸಮ್ಮೇಳನ ಮಾಡಿದರೆ ನಮ್ಮ ಸಹಕಾರ ಇರುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್ ಮಹಿಳಾ ಮುಖಂಡರಾದ ಸಂಗೀತಾ ನಾಡಗೌಡ ಮಾತನಾಡಿ, ಇಂದಿನ ಯುವ ಜಾನಪದ ಹೆಸರಿನಲ್ಲಿ ಅಶ್ಲೀಲತೆಯ ಕಡೆಗೆ ಯುವ ಸಮೂಹ ಜಾರುತ್ತಿರುವುದು ದುರಂತದ ಸಂಗತಿ. ಅಶ್ಲೀಲ ಹಾಡುಗಳನ್ನು ಹಾಡುವ ಗಾಯಕರನ್ನು ಕರೆಸಿ ವೈಭವಿಕರಿಸುತ್ತಿರುವ ಸಮಾಜದ ವಿರುದ್ಧ ಹರಿಹಾಯ್ದ ಅವರು, ಭೂತಾಯಿಗೆ ಹೆಣ್ಣು ಎಂದು ಸಂಭೋಧಿಸುವ ಜನರು ಆ ಹೆಣ್ಣಿನ ಹೆಸರಿನಲ್ಲಿ ಅಶ್ಲೀಲತೆಯ ಹಾಡುಗಳನ್ನು ಸಾಹಿತ್ಯ ಮಾಡಿ ಹಾಡುವರ ಮನೆಯಲ್ಲಿ ಹೆಣ್ಣು ಮಕ್ಕಳು ಇರುವದಿಲ್ಲವೇ? ಎಂದು ಪ್ರಶ್ನೆ ಮಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಜಯಪುರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದ್ರಾಕ್ಷಾಯಣಿ ಬಿರಾದಾರ ಮಾತನಾಡಿ, ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಯಿಂದ ಜಾನಪದ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗೆ ಹೊಸ ಚೈತನ್ಯ ಸಿಗಲಿದೆ ಎಂದರು.ವಿಜಯಪುರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪುಂಡಲೀಕಯ ಮುರಾಳ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಾಗಲಕೋಟೆ ಜಿಲ್ಲಾಧ್ಯಕ್ಷ ಡಿ.ಎಂ.ಸಾವಕಾರ, ತಾಲೂಕು ಮಹಿಳಾ ಘಟಕದ ವಿವಿಧ ಪದಾಧಿಕಾರಿಗಳಿಗೆ ಪದಪತ್ರ ಪ್ರದಾನ ಮಾಡಿದರು. ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ದೀಪರತ್ನ ಆಲೂರ ಸೇರಿದಂತೆ ಗೌರವಾಧ್ಯಕ್ಷರು, ಸಂಚಾಲಕರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಜಂಟಿ ಕಾರ್ಯದರ್ಶಿ ಸೇರಿದಂತೆ ವಿವಿಧ ಪದಾಧಿಕಾರಿಗಳಿಗೆ ಪದಪತ್ರ ಪ್ರದಾನ ಮಾಡಲಾಯಿತು. ಜಾನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು.

ವಿವಿಧ ಮಹಿಳಾ ಸಂಘಟನೆಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು, ಜಾನಪದ ಕಲಾವಿದರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪ್ರತಿಭಾ ಅಂಗಡಗೇರಿ, ಎ.ಆರ್‌.ಮುಲ್ಲಾ, ಸಂಗಣ್ಣ ಕಂಚಾಣಿ, ಅಶ್ವೀನಿ ಬಿರಾದಾರ, ಚೈತನ್ಯ ಮುದ್ದೇಬಿಹಾಳ ಸೇರಿದಂತೆ ಹಲವರಿದ್ದರು. ಜಿಲ್ಲಾಧ್ಯಕ್ಷ ಪುಂಡಲೀಕ ಮುರಾಳ ಪ್ರಾಸ್ತವಿಕವಾಗಿ ಮಾತನಾಡಿದರು.