ಸಾರಾಂಶ
ಆಡಳಿತ ಸುಧಾರಣಾ ಆಯೋಗ ಸಭೆಯಲ್ಲಿ ಬಹುತೇಕ ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳು ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳುವ ಕುರಿತು ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರಿಗೆ ಒತ್ತಾಯಿಸಿದರು.
ಧಾರವಾಡ: ಇಲ್ಲಿಯ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಆಡಳಿತ ಸುಧಾರಣಾ ಆಯೋಗ ಸಭೆಯಲ್ಲಿ ಬಹುತೇಕ ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳು ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳುವ ಕುರಿತು ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರಿಗೆ ಒತ್ತಾಯಿಸಿದರು.
ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆ ಹೀಗೆ ಬಹುತೇಕ ಇಲಾಖೆಗಳಲ್ಲಿ ಶೇ. 20 ರಿಂದ 40ರಷ್ಟು ಮಾತ್ರ ಕಾಯಂ ಹುದ್ದೆಗಳಿದ್ದು, ಗುತ್ತಿಗೆ ಆಧಾರದ ಮೇಲೆ ಇಲಾಖೆಗಳನ್ನು ನಡೆಸುವ ಸ್ಥಿತಿ ಇದೆ. ಇದರಿಂದ ಭ್ರಷ್ಟಾಚಾರಕ್ಕೂ ದಾರಿಯಾಗುತ್ತಿದೆ. ಗುತ್ತಿಗೆ ನೌಕರರಿಂದ ಅಪವ್ಯಯವಾದ ಹಣ ವಸೂಲಿ ಮಾಡುವುದು ಸಹ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಖಾಲಿ ಇರುವ ಕಾಯಂ ಹುದ್ದೆಗಳನ್ನು ತುಂಬಬೇಕು ಎಂಬ ಆಗ್ರಹಗಳು ಸಭೆಯಲ್ಲಿ ಕೇಳಿ ಬಂದವು. ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಬೆಳೆ ಹಾನಿ ಉಂಟಾದಾಗ ಹೊಲಗಳಿಗೆ ಹೋಗಲು ಸಿಬ್ಬಂದಿ ಇಲ್ಲ ಎಂದು ಕೃಷಿ ಇಲಾಖೆ ಉಪ ನಿರ್ದೇಶಕರು ತಮ್ಮ ಅಳಲು ತೋಡಿಕೊಂಡರೆ, ವಿವಿಧ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿಸಿ ಎಂದು ಡಿಎಚ್‌ಒ ಡಾ. ಶಶಿಕಲಾ ಮನವಿ ಮಾಡಿದರು.ಈ ಸಮಸ್ಯೆ ಆಲಿಸಿದ ಆಯೋಗದ ಅಧ್ಯಕ್ಷ ಆರ್.ವಿ. ದೇಶಾಪಂಡೆ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳು ಮತ್ತು ಕೆಲ ಇಲಾಖೆಗಳಲ್ಲಿ ಕಾರ್ಯಭಾರ ಕಡಿಮೆ ಇರುವ ಹುದ್ದೆಗಳು ಮುಂದುವರಿದಿರುವುದರಿಂದ ಕೆಲವು ಸಲ ಆಡಳಿತದಲ್ಲಿ ವಿಳಂಬತೆ, ನಿಧಾನಗತಿ ಕಾಣಿಸುತ್ತದೆ. ಹೆಚ್ಚುವರಿ ಹುದ್ದೆಗಳ ಸೃಷ್ಟಿ ಮಾಡುವ ಜೊತೆಗೆ, ಈಗಾಗಲೇ ಕೆಲವು ಇಲಾಖೆಗಳಲ್ಲಿ ಹೆಚ್ಚುವರಿ ಆಗಿರುವ ಹುದ್ದೆಗಳನ್ನು ರದ್ದು ಪಡಿಸುವ ಬಗ್ಗೆಯೂ ಮಾಹಿತಿ ನೀಡಬೇಕು. ಈ ಎಲ್ಲ ಮಾಹಿತಿಯುಳ್ಳ ಅಧಿಕಾರಿಗಳ ಅಭಿಪ್ರಾಯವೂ ಆಡಳಿತ ಸುಧಾರಣೆಯಲ್ಲಿ ಮುಖ್ಯವಾಗಿದೆ ಎಂದರು.
ಆಡಳಿತದಲ್ಲಿ ಸರಳತೆ ಮತ್ತು ಜನಸ್ನೇಹಿ ಆಗಿದ್ದಾಗ ಮಾತ್ರ ಸರ್ಕಾರ ಜನಕಲ್ಯಾಣ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳು ಅರ್ಹರಿಗೆ ತಲುಪಲು ಸಾಧ್ಯ. ಆಡಳಿತದಲ್ಲಿ ಸುಧಾರಣೆಯೊಂದಿಗೆ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರುವುದು ಅಗತ್ಯವಾಗಿದೆ ಎಂದ ಅವರು, ಇಂದಿನ ಸರ್ಕಾರಗಳು ಅಭಿವೃದ್ಧಿ ಕಾರ್ಯಕ್ರಮಗಳ ಜೊತೆಗೆ ಜನರ ದಿನನಿತ್ಯದ ಜೀವನಮಟ್ಟ ಸುಧಾರಣೆಗೆ ಹೆಚ್ಚು ಒತ್ತು ನೀಡುತ್ತಿವೆ. ಸಕಾಲ ಕಾಯ್ದೆ ಅನುಷ್ಠಾನಕ್ಕೆ ಬಂದಿದ್ದರೂ ಅನೇಕ ಯೋಜನೆಗಳಲ್ಲಿ ಅನಗತ್ಯ ದಾಖಲಾತಿ ಗೊಂದಲದಿಂದಾಗಿ ವಿಳಂಬವಾಗುತ್ತಿದೆ. ಇದಕ್ಕೆ ಆಡಳಿತದ ವಿವಿಧ ಹಂತಗಳಲ್ಲಿ ಬದಲಾವಣೆ ಅಗತ್ಯವಾಗಿದ್ದು, ಅದನ್ನು ನೀಗಿಸಲು ಆಯೋಗ ಕಾರ್ಯ ಮಾಡುತ್ತಿದೆ ಎಂದರು.ಮನವಿ
ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‌ಟಾಪ್ ನೀಡಬೇಕು. ಕಂದಾಯ ಇಲಾಖೆಯ ತಹಸೀಲ್ದಾರ್ ಹುದ್ದೆಯ ಕಾರ್ಯಭಾರ ಅತಿಯಾಗಿದೆ. ದಿನನಿತ್ಯದ ಆಡಳಿತದ ಜೊತೆಗೆ ಪ್ರೊಟೋಕಾಲ್ ಡ್ಯೂಟಿ, ಇತರ ಕಾರ್ಯಭಾರಗಳು ಆಡಳಿತದ ಮೇಲೆ ಒತ್ತಡ ತರುತ್ತವೆ. ಪ್ರೋಟೋಕಾಲ್‌ಗೆ ಪ್ರತ್ಯೇಕ ಕೇಂದ್ರ ತೆರೆಯವುದು ಸೇರಿ ಇತರ ಬೇಡಿಕೆಗಳನ್ನು ಅಧಿಕಾರಿಗಳು ಆಯೋಗದ ಎದುರು ಪ್ರಸ್ತತಪಡಿಸಿದರು.ಆಡಳಿತ ಸುಧಾರಣಾ ಆಯೋಗದ ಕಾರ್ಯದರ್ಶಿ ಎನ್.ಎಸ್. ಪ್ರಸನ್ ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಸ್ವಾಗತಿಸಿದರು. ಹುಡಾ ಅಧ್ಯಕ್ಷ ಶಾಕೀರ್ ಸನದಿ, ಜಿಪಂ ಸಿಇಒ ಸ್ವರೂಪಾ ಟಿ.ಕೆ., ಆಯೋಗದ ವಿಶೇಷ ಕಾರ್ಯದರ್ಶಿ ರಮೇಶಕುಮಾರ ದೇಸಾಯಿ ಇದ್ದರು.ಗ್ರಾಮೀಣದಲ್ಲೂ ಸರ್ವೇ
ಹು-ಧಾ ಮಹಾನಗರ ಪಾಲಿಕೆಯಲ್ಲಿ ಪ್ರತಿಯೊಂದು ಆಸ್ತಿಗೆ ಇರುವಂತೆ ಗ್ರಾಮೀಣ ಪ್ರದೇಶದಲ್ಲಿ ಸರ್ವೆ ನಂಬರ್, ನಕಾಶೆ ಅವಶ್ಯವಾಗಿದೆ. ಗ್ರಾಪಂನ ಸಾರ್ವಜನಿಕ ಆಸ್ತಿಗಳಿಗೆ ಸರಿಯಾದ ದಾಖಲೆ ಇಲ್ಲದ ಹಿನ್ನೆಲೆಯಲ್ಲಿ ಅತಿಕ್ರಮಣ ಶುರುವಾಗಿದೆ. ಅಕ್ರಮ ಸಕ್ರಮ ಬಡಾವಣೆಗಳೂ ಗ್ರಾಮೀಣಕ್ಕೂ ವಿಸ್ತರಣೆಯಾಗಿದೆ. ಗ್ರಾಮೀಣ ಭಾಗದಲ್ಲೂ ಆಸ್ತಿ ಮೌಲ್ಯ ಜಾಸ್ತಿಯಾಗಿದ್ದು ಮುಂದೊಂದು ದಿನ ತೀವ್ರ ಸಮಸ್ಯೆ ಆಗಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ವಿಚಾರವಾಗಿ ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಬಿ.ಎಸ್. ಮುಗನೂರಮಠ ಆಯೋಗದ ಗಮನ ಸೆಳೆದರು.