ಸಾರಾಂಶ
ಕನ್ನಡಪ್ರಭ ವಾರ್ತೆ ಬೀರೂರು
ಹೋಬಳಿಯ ಚಿಕ್ಕಿಂಗಳ ಗ್ರಾಮ ದೇವತೆ ಶ್ರೀ ದುರ್ಗಾಂಬೆ ದೇವಿ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ಕಳೆದ ಗುರುವಾರದಿಂದಲೇ ಊರ ಹೆಬ್ಬಾಗಿಲಿನಲ್ಲಿ ಜಂಡೆ ಗಣ ಹರಿಸುವುದು, ದೇವಿಗೆ ಕೆಂಡಾರ್ಚನೆ, ನಂತರ ಹೊಳೆ ಪೂಜೆ, ರಾತ್ರಿ ಕೆಂಡ ಪಾದಾರ್ಪಣೆ ನಡೆಯಿತು. ಕಳೆದ ಶುಕ್ರವಾರ ಬಲಿ ಪೂಜೆ, ಬಾನಸೇವೆ, ಬೇವಿನ ಸೀರೆ ನಡೆಸಿ ಮಧುವಣ ಗಿತ್ತಿ ಶಾಸ್ತ್ರ ನಡೆಯಿತು. ಶನಿವಾರ ಬೆಳಗ್ಗೆ 5.30ಕ್ಕೆ ಪಲ್ಗುಣಿ ನಕ್ಷತ್ರದಲ್ಲಿ ರಥಕ್ಕೆ ಕಳಶರೋಹಣ ನಡೆಯಿತು. ಮಧ್ಯಾಹ್ನ ಸುತ್ತಮುತ್ತಲ ಗ್ರಾಮಸ್ಥರಿಂದ ಪಾನಕದ ಬಂಡಿ ಉತ್ಸವ ಜರುಗಿತು. ಸಂಜೆ 4 ಗಂಟೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬ್ರಹ್ಮ ರಥೋತ್ಸವ ನಡೆಯಿತು.
ರಥೋತ್ಸವದ ಅಂಗವಾಗಿ ಶ್ರೀ ದುರ್ಗಾಂಬೆ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನೆರೆದಿದ್ದ ಭಕ್ತರು ತೇರಿಗೆ ಬಾಳೆಹಣ್ಣು ಎಸೆದು ತಮ್ಮ ಭಕ್ತಿ ಸಮರ್ಪಿಸುವುದರ ಮೂಲಕ ದೇವಾಲಯದ ಮುಂಭಾಗದಿಂದ ಊರಿನ ಹೆಬ್ಬಾಗಿಲಿನ ವರೆಗೂ ರಥ ಎಳೆದು ವಾಪಾಸು ದೇವಸ್ಥಾನ ತಲುಪಿಸಿದರು.ದೇವಾಲಯ ಸಮಿತಿಯ ಮುಖಂಡರಾದ ಲಕ್ಷ್ಮಣ್, ಸಿದ್ದಪ್ಪ, ನಾಗರಾಜ್, ಕುಮಾರಣ್ಣ, ಅಣ್ಣಯ್ಯ, ಮೂಡಲಗಿರಿಯಪ್ಪ, ಮಾಸ್ಟರ್ ಮಂಜಪ್ಪ, ಮಂಜು, ಚಂದ್ರು, ಸ್ವಾಮಿ, ನವೀನ್, ರಾಮಲಿಂಗಪ್ಪ, ಶ್ರೀಕಂಠಪ್ಪ ಸೇರಿದಂತೆ ಅಂಬೇಡ್ಕರ್ ಯುವಕ ಸಂಘದ ಸದಸ್ಯರು, ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಇದ್ದರು.
1.30 ಲಕ್ಷ ರು. ದೇವಿಯ ಬಾವುಟ ಹರಾಜು:ಪ್ರತಿ ವರ್ಷದಂತೆ ರಥೋತ್ಸವ ಸಂದರ್ಭದಲ್ಲಿ ಅಮ್ಮನವರಿಗೆ ಸೇರಿದ ಬಾವುಟವನ್ನು ದೇವಾಲಯದ ಸಮಿತಿ ರಥ ಎಳೆಯುವ ಮುನ್ನ ಹರಾಜು ಮಾಡಲಾಗುತ್ತದೆ. ಅದರಂತೆ ಚಿಕ್ಕಿಂಗಳ ಗ್ರಾಮದ ದಿವಂಗತ ಕಮಲಮ್ಮ ದುರ್ಗಪ್ಪ ಕುಟುಂಬದ ಪಾಂಡಣ್ಣ ಸತತ ಮೂರನೇ ಬಾರಿಗೆ 1.30 ಲಕ್ಷ ರು.ಗೆ ಹರಾಜು ಕೂಗಿ ಮೊದಲ ಪೂಜೆಗೆ ಪಾತ್ರರಾಗಿ ಬಾವುಟ ಪಡೆದುಕೊಂಡರು.
ಪತ್ರಿಕೆಯೊಂದಿಗೆ ಮಾತನಾಡಿದ ಪಾಂಡಣ್ಣ, ದೇವಿಯ ಬಾವುಟ ಪಡೆದು ಕೊಂಡ ನಂತರ ನನ್ನ ಕುಟುಂಬಕ್ಕೆ ಆರ್ಥಿಕವಾಗಿ ಮುನ್ನಡೆ ಸಾಗಿಸುವುದರ ಜೊತೆ ಅಭಿವೃದ್ಧಿ ಯಾಗಿದೆ. ಜೊತೆಗೆ ನೆಮ್ಮದಿ ಬದುಕು ಸಾಗುತ್ತಿದೆ. ಆ ತಾಯಿ ನಮ್ಮ ಮನೆ ಸದಾ ಕಾಯುತ್ತಿದ್ದಾಳೆ ಎಂದರು.ರಥೋತ್ಸವ ಮುಗಿದ ನಂತರ ಊರಿನ ಪ್ರಮುಖರು ಮತ್ತು ದಲಿತ ಸಮಿತಿ ಸದಸ್ಯರು 133ನೇ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಿಸಿ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು.