ಕಾಯಕವೇ ಕೈಲಾಸ ಎನ್ನುವ ಶರಣರ ವಚನ ಪಠಿಸುವುದು ಸುಲಭ. ಅದನ್ನು ಬದುಕಲ್ಲಿ ಅಳವಡಿಸಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ಇಂತಹ ಸವಾಲನ್ನು ತಮ್ಮ 77ನೇ ವಯಸ್ಸಿನಲ್ಲೂ ನಗುತ್ತಲೇ ಸ್ವೀಕರಿಸಿ, ಸ್ವಾವಲಂಬನೆಯ ದಾರಿಯಲ್ಲಿ ಹೆಜ್ಜೆ ಹಾಕುತ್ತಿರುವ ಅಪರೂಪದ ಶ್ರಮಜೀವಿ ಪಟ್ಟಣದ 9ನೇ ವಾರ್ಡ್‌ನ ನಿವಾಸಿ ದುರ್ಗಪ್ಪ ಹಿರೇಮನಿ.

77 ವಯಸ್ಸಲ್ಲೂ ಸ್ವಾವಲಂಬನೆ ಬದುಕು ಸಾಗಿಸುತ್ತಿರುವ ಮಾದರಿ ವೃದ್ಧ

ಪಿ.ಎಸ್. ಪಾಟೀಲ

ಕನ್ನಡಪ್ರಭ ವಾರ್ತೆ ರೋಣ

ಕಾಯಕವೇ ಕೈಲಾಸ ಎನ್ನುವ ಶರಣರ ವಚನ ಪಠಿಸುವುದು ಸುಲಭ. ಅದನ್ನು ಬದುಕಲ್ಲಿ ಅಳವಡಿಸಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ಇಂತಹ ಸವಾಲನ್ನು ತಮ್ಮ 77ನೇ ವಯಸ್ಸಿನಲ್ಲೂ ನಗುತ್ತಲೇ ಸ್ವೀಕರಿಸಿ, ಸ್ವಾವಲಂಬನೆಯ ದಾರಿಯಲ್ಲಿ ಹೆಜ್ಜೆ ಹಾಕುತ್ತಿರುವ ಅಪರೂಪದ ಶ್ರಮಜೀವಿ ಪಟ್ಟಣದ 9ನೇ ವಾರ್ಡ್‌ನ ನಿವಾಸಿ ದುರ್ಗಪ್ಪ ಹಿರೇಮನಿ.

​ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ದಿನವೂ ಕಣ್ಣಿಗೆ ಬೀಳುವ ಈ ಹಿರಿಯ ಜೀವ. ಯುವ ಪೀಳಿಗೆ ನಾಚುವಂತೆ ತಮ್ಮ ನಿತ್ಯದ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ವಯಸ್ಸು 77 ಆದ್ರೂ ಬತ್ತದ ಉತ್ಸಾಹ ಎಲ್ಲರಿಗೂ ಮಾದರಿ.

ಸಾಣೆ ದುರ್ಗಪ್ಪಜ್ಜ:

​ಬೆಳಗಿನ ಜಾವ 6 ಗಂಟೆಗೆ ದುರ್ಗಪ್ಪನವರ ದಿನಚರಿ ಆರಂಭವಾಗುತ್ತದೆ. ಹಳೆಯದಾದರೂ ಸದೃಢವಾಗಿರುವ‌ ತಮ್ಮ ಸೈಕಲ್, ಚಾಕು-ಚೂರಿ ಸಾಣ ಹಿಡಿಯುವ ವಿಶೇಷ ಚಕ್ರದ ಕಲ್ಲು (ಶಾಪ್‌ನಿಂಗ್ ಸ್ಟೋನ್/ಸಾಣೆ ಕಲ್ಲು), ಅಗತ್ಯ ಉಪಕರಣಗಳು ಹಾಗೂ ಸಣ್ಣದೊಂದು ನೀರಿನ ಡಬ್ಬಿಯನ್ನು ಜತೆಯಲ್ಲಿಟ್ಟುಕೊಂಡು ಪಟ್ಟಣ ಮತ್ತು ಹಳ್ಳಿಗಳಿಗೆ ತೆರಳಿ ಚಾಕು, ಚೂರಿ, ಕತ್ತರ, ಕುಡಗೋಲು ಸಾಣೆ ಹಿಡಿಯುವುದಿದೇ ಏನ್ರೀ ಎನ್ನುತಾ ದಣಿವಿಲ್ಲದೇ ಓಣಿ ಓಣಿ ಸುತ್ತುತ್ತಾನೆ.

ಅಡುಗೆ ಮನೆಯಲ್ಲಿ ಬಳಸುವ ಚಾಕು, ಚೂರಿ, ತರಕಾರಿ ಕತ್ತರಿಸುವ ಸಾಧನ, ಅಡಿಕೆ ಕತ್ತರಿ, ಕೃಷಿಕರು ಬಳಸುವ ಪಡಚಾ, ಕೊಡಲಿ ಹಾಗೂ ತೋಟಗಾರಿಕೆಯ ಕತ್ತರಿಗಳನ್ನು ಅತ್ಯಂತ ನೈಪುಣ್ಯತೆಯಿಂದ ಚೂಪು ಮಾಡಿ ಕೊಡುತ್ತಾನೆ. ಸೈಕಲ್ ಚಕ್ರಕ್ಕೆ ಸಾಣಿ ಕಲ್ಲನ್ನು ಬೆಲ್ಟ್‌ನಿಂದ ಜೋಡಿಸಿ, ಪೆಡ್ಲ್ ತುಳಿಯುತ್ತಾ ಮೊಣಚಾದ ವಸ್ತುಗಳನ್ನು ಚುಪಾಗಿಸುವ ಕಲಾತ್ಮಕತೆ ನೋಡುಗರನ್ನು ಚಕಿತರನ್ನಾಗಿಸುತ್ತದೆ.

ಕಿತ್ತು ತಿನ್ನುವ ಬಡತ, 15ನೇ ವಯಸ್ಸಿನಲ್ಲಿಯೇ ಸಾಣೆ ಹಿಡಿಯುವ ಕೆಲಸ ‌ಕಲಿತು, ಅದನ್ನೆ ಬದುಕಿನ ವೃತ್ತಿಯಾಗಿಸಿಕೊಂಡು 62 ವರ್ಷ ಇದೇ ಕಾಯಕ ಮಾಡುತ್ತಾ ಎಲ್ಲರಿಗೂ ಸಾಣೆ ದುರ್ಗಪ್ಪ ಎಂದು ಚಿರಪರಿಚಿತನಾಗಿದ್ದಾನೆ. ಈ ವರೆಗೂ ಚಾಕು, ಚೂರಿ, ಕತ್ತರಿ ಸೆರದಂತೆ ಅಂದಾಜು 10 ಲಕ್ಷಕ್ಕೂ ಹೆಚ್ಚು ಸಾಮಗ್ರಿಗಳನ್ನು ಸಾಧನೆ ಹಿಡಿದು ಕೊಟ್ಟಿದ್ದಾನೆ.

ಪಟ್ಟಣ ಮತ್ತು ಸಮೀಪದ ಹಳ್ಳಿಗಳಾದ ಬಾಸಲಾಪುರ, ಕೃಷ್ಣಾಪುರ, ಹಿರೇಮಣ್ಣೂರ, ಚಿಕ್ಕಮಣ್ಣೂರ, ಸಂದಿಗವಾಡ, ಅರಹುಣಸಿ, ಇಟಗಿ, ಆಬ್ಬಿಗೇರಿ, ಕೊತಬಾಳ, ಹಿರೇಹಾಳ, ಮುಗಳಿ, ಸವಡಿ ಮುಂತಾದೆಡೆ ಸೈಕಲ್ ಮೇಲೆಯೇ ಪ್ರಯಾಣಿಸುತ್ತಾರೆ.

ಯುವಕರಿಗೆ ಮಾದರಿ:

​ಇಂದಿನ ದಿನಗಳಲ್ಲಿ ಸಣ್ಣಪುಟ್ಟ ಕಷ್ಟಗಳಿಗೇ ಧೃತಿಗೆಡುವ ಅಥವಾ ಕೆಲಸವಿಲ್ಲವೆಂದು ನಿರುದ್ಯೋಗದ ನೆಪ ಹೇಳುವ ಯುವಜನತೆಗೆ ದುರ್ಗಪ್ಪನವರ ಬದುಕು ಒಂದು ತೆರೆದ ಪುಸ್ತಕ. ಇವರ ಬದುಕೇ ಮಾದರಿ. ಯಾವುದೇ ಕೆಲಸ ಸಣ್ಣದಲ್ಲ, ಪ್ರಾಮಾಣಿಕತೆಯಿಂದ ಮಾಡುವ ಪ್ರತಿಯೊಂದು ಕಾಯಕವೂ ಪೂಜನೀಯ ಎಂಬುದಕ್ಕೆ ಇವರೇ ಉದಾಹರಣೆ.ದೇಹದಲ್ಲಿ ಉಸಿರಿರುವವರೆಗೆ, ಕೈಕಾಲುಗಳು ಗಟ್ಟಿಯಾಗಿ ಇರುವವರೆಗೆ ಯಾರ ಮುಂದೆಯೂ ಕೈಚಾಚಬಾರದು, ನನ್ನ ಶ್ರಮದಿಂದಲೇ ನಾನು ಬದುಕಬೇಕು. ಮಕ್ಕಳು ಅಥವಾ ಸಮಾಜಕ್ಕೆ ಹೊರೆಯಾಗುವುದು ನನಗೆ ಇಷ್ಟವಿಲ್ಲ. ನನ್ನ ಕೈ ಕಾಲಲ್ಲಿ ಶಕ್ತಿ‌ ಇರುವ ತನಕವೂ ಈ ಉದ್ಯೋಗ ನಿಲ್ಲಿಸುವುದಿಲ್ಲ ಎನ್ನುತ್ತಾರೆ ದುರ್ಗಪ್ಪ ಹಿರೇಮನಿ.