ಸಾರಾಂಶ
ಧಾರವಾಡದಲ್ಲಿ ಕರ್ನಾಟಕ ರಾಜ್ಯ ಮಾದಿಗ ಮಹಾಸಭೆಯಿಂದ ಆದ್ಯ ವಚನಕಾರ ಮಾದಾರ ಚೆನ್ನಯ್ಯ ಜಯಂತ್ಯುತ್ಸವ ನಡೆಯಿತು.
ಧಾರವಾಡ: ಸಂವಿಧಾನದ ಶತಮಾನೋತ್ಸವ ಆಚರಣೆ ವೇಳೆಗೆ ದೇಶದಲ್ಲಿ ಮೀಸಲಾತಿ ಸೌಲಭ್ಯ ಕ್ಷೀಣಿಸಿರುತ್ತವೆ. ನಿಮ್ಮ ವರ್ಗಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಈಗಿನಿಂದಲೇ ಹೊಸ ಹೆಜ್ಜೆ ಇಡಬೇಕಿದೆ ಎಂದು ಡಾ. ವಿಶ್ವನಾಥ್ ಎಂ. ಹೇಳಿದರು.
ಇಲ್ಲಿಯ ಕರ್ನಾಟಕ ರಾಜ್ಯ ಮಾದಿಗ ಮಹಾಸಭೆ ನಗರದಲ್ಲಿ ಆಯೋಜಿಸಿದ್ದ ಆದ್ಯ ವಚನಕಾರ ಮಾದಾರ ಚೆನ್ನಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿದರು.ಒಂದು ಸಮುದಾಯದ ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಲು ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗೆ ಅತ್ಯಗತ್ಯ. ಈ ದಿಸೆಯಲ್ಲಿ ಬರೀ ಸರ್ಕಾರಿ ಹುದ್ದೆಗಳ ಮೀಸಲಾತಿ ನಂಬಿಕೊಂಡು ಕುಳಿತರೆ ಆಗುವುದಿಲ್ಲ. ಖಾಸಗೀಕರಣ ಪ್ರಭಾವದಿಂದ ಸರ್ಕಾರಿ ಅವಕಾಶಗಳು ಕಡಿಮೆ ಆಗುತ್ತಿದ್ದರಿಂದ ಕೆಳ ವರ್ಗಗಳು ಈ ದಿಸೆಯಲ್ಲಿ ಗಂಭೀರ ಚಿಂತನೆ ನಡೆಸಬೇಕಿದೆ ಎಂದರು.
ಪ್ರಾಂಶುಪಾಲ ಮಹಾದೇವ ಹುಲಗೆಜ್ಜಿ, ಉಪನ್ಯಾಸಕ ಡಾ. ಮಾಲತೇಶ ಪೂಜಾರ, ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿದರು.ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ನಿವೃತ್ತರಾದ, ವಿವಿಧ ಹುದ್ದೆಗಳಿಗೆ ಆಯ್ಕೆಯಾದ, ಪ್ರಶಸ್ತಿಗೆ ಭಾಜನರಾದ ಸಮಾಜದ ಪ್ರಮುಖರಾದ ಹನುಮಂತಪ್ಪ ಮಾರಡಗಿ, ಯಲ್ಲಪ್ಪ ಹುಲಮನಿ, ಹನುಮಂತಪ್ಪ ಕಾಳಿ, ಲಕ್ಷ್ಮಿಬಾಯಿ ಹರಿಜನ, ಜಕನೂರ, ಮಾಳಗಿ ಅವರನ್ನು ಸನ್ಮಾನಿಸಲಾಯಿತು.
ಮಹಾಸಭೆಯ ಅಧ್ಯಕ್ಷ ಪಿ. ವೆಂಕಪ್ಪ ಅಧ್ಯಕ್ಷತೆ ವಹಿಸಿದ್ದರು. ಮರೀಶ ನಾಗಣ್ಣವರ, ಮಹೇಶ ಹುಲ್ಲೆಣ್ಣವರ, ರಮೇಶ್ ಬಗಲಿ, ಮೋಹನ ಹಿರೇಮನಿ, ಕೆ.ಎಸ್. ಬಂಗಾರಿ, ಸಿ.ಬಿ. ಹಾದಿಮನಿ, ಪಿ.ಡಿ. ಬಸನಾಳ, ಬಸವರಾಜ ಶಿವಪುರ, ಕೆ.ಎಂ. ಪೂಜಾರ ಇದ್ದರು.