ಸಾರಾಂಶ
- ರೈತರು ಸಂತಸದಿಂದ ಇರುವುದರಿಂದ ಖುಷಿಯೋ ಖುಷಿ
- ಕಳೆದ ವರ್ಷಕ್ಕಿಂತ ಈ ವರ್ಷ ಖರೀದಿ ಭರಾಟೆ ಭರ್ಜರಿಕನ್ನಡಪ್ರಭ ವಾರ್ತೆ ಕೊಪ್ಪಳ
ಜಿಲ್ಲೆಯಲ್ಲಿ ದಸರಾ ಸಂಭ್ರಮ ಜೋರಾಗಿದ್ದು, ಖಂಡಾ ಪೂಜೆಯ ಮುನ್ನಾದಿನವಾದ ಗುರುವಾರ ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕುಷ್ಟಗಿ, ಕಾರಟಗಿ ಸೇರಿದಂತೆ ಹಲವು ಕಡೆ ಖರೀದಿಯ ಭರಾಟೆ ಜೋರಾಗಿರುವುದು ಕಂಡು ಬಂತು.ಜನರು ಆಯುಧ ಪೂಜೆಗಾಗಿ ಮಾರುಕಟ್ಟೆಯಲ್ಲಿ ಬಾಳೆ ಕಂಬ, ಕಬ್ಬು, ಜೋಳದ ದಂಟು, ಮಾವಿನತೋಳ ಸೇರಿದಂತೆ ಬಗೆ ಬಗೆಯ ವಸ್ತುಗಳನ್ನು ಖರೀದಿ ಮಾಡಿದರು. ಅದರಲ್ಲೂ ದೇವಿಯ ಪೂಜೆಗೆ ಕಡ್ಡಾಯವಾಗಿ ಬೇಕಾಗಿರುವ ಕುಂಬಳಕಾಯಿ ಖರೀದಿಯಂತೂ ಮಾರುಕಟ್ಟೆಯುದ್ದಕ್ಕೂ ಕಂಡು ಬಂದಿತು.
ದಸರಾ ನಿಮಿತ್ತ ಕೊಪ್ಪಳ ನಗರದ ತಾಲೂಕು ಕ್ರೀಡಾಂಗಣದಲ್ಲಿ ಹಾಗೂ ಬಸ್ ನಿಲ್ದಾಣದ ಎದುರಿಗೆ, ಜವಾಹರ ರಸ್ತೆಯಲ್ಲಿ ಕಾಲಿಡುವುದಕ್ಕೂ ಜಾಗ ಇಲ್ಲದಂತೆ ಮಾರುಕಟ್ಟೆ ಭರ್ತಿಯಾಗಿತ್ತು. ಹೀಗಾಗಿ, ಸಂಚಾರಕ್ಕೂ ಸಮಸ್ಯೆಯಾಗಿದ್ದರಿಂದ ಪೊಲೀಸರು ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಹೆಣಗಾಡುತ್ತಿದ್ದರು.ಹೂ, ಹಣ್ಣು ಖರೀದಿಯೂ ಜೋರಾಗಿತ್ತು. ಮಾರುಕಟ್ಟೆಯಲ್ಲಿ ಖರೀದಿ ಜೋರಾಗುತ್ತಿದ್ದಂತೆ ಸಹಜವಾಗಿಯೇ ದರವೂ ಸಹ ಏರಿಕೆಯಾಗಿದ್ದವು.
ಒಂದು ಕುಂಬಳಕಾಯಿಗೆ ಬರೋಬ್ಬರಿ ನೂರೈವತ್ತು ರೂಪಾಯಿಯಂತೆ ಮಾರಾಟ ಮಾಡುತ್ತಿದ್ದರು.ರೈತರಲ್ಲಿಯೂ ಸಂತಸ:ಪ್ರಸಕ್ತ ವರ್ಷ ಉತ್ತಮ ಮಳೆಯಾಗಿರುವುದರಿಂದ ಬೆಳೆಯೂ ಭರ್ಜರಿಯಾಗಿಯೇ ಬಂದಿದೆ. ಹೀಗಾಗಿ, ರೈತರ ಮೊಗದಲ್ಲಿಯೂ ಸಂತಸ ಇಮ್ಮಡಿಯಾಗಿದೆ. ಹೀಗಾಗಿ ರೈತರು ಸಹ ಮಾರುಕಟ್ಟೆಯಲ್ಲಿ ಸಂಭ್ರಮದಿಂದಲೇ ಭಾಗವಹಿಸಿರುವುದು ಕಂಡುಬಂತು. ರೈತರ ಸಂಭ್ರಮ ಎಲ್ಲರ ಸಂಭ್ರಮ ಎನ್ನಲಾಗುತ್ತದೆ. ಹೀಗಾಗಿ, ಇಡೀ ಮಾರುಕಟ್ಟೆಯಲ್ಲಿ ಕಳೆ ಹೆಚ್ಚಳವಾಗಿತ್ತು.
ಹೂವಿನ ದರ, ಕುಂಬಳಕಾಯಿ ದರ ಸೇರಿದಂತೆ ಎಲ್ಲದರ ದರವೂ ಹೆಚ್ಚಳವಾಗಿರುವುದು ಅವುಗಳನ್ನು ಬೆಳೆದಿರುವ ರೈತರ ಮೊಗದಲ್ಲಿ ಖುಷಿ ಇಮ್ಮಡಿಸುವಂತೆ ಮಾಡಿತ್ತು.ಜನಜಾತ್ರೆ:ಖರೀದಿಗಾಗಿ ಜನರು ಮಾರುಕಟ್ಟೆಯಲ್ಲಿ ಮುಗಿಬಿದ್ದಿದ್ದರಿಂದ ಕೊಪ್ಪಳ ನಗರದ ಜವಾಹರ ರಸ್ತೆ, ಹೆದ್ದಾರಿಯಲ್ಲಿ ಜನಜಾತ್ರೆಯೇ ಮೆರೆದಿತ್ತು. ಎಲ್ಲಿ ನೋಡಿದರೂ ಜನವೋ ಜನ ಎನ್ನುವಂತೆ ಮಾರುಕಟ್ಟೆ ಇತ್ತು.