ಸಾರಾಂಶ
ನಗರದ ಪೇಟೆ ಶ್ರೀರಾಮ ಮಂದಿರದಲ್ಲಿ ಪೂಜೆ ಸಲ್ಲಿಸುವ ಮೂಲಕ ಉತ್ಸವದ ಕಾರ್ಯಗಳಿಗೆ ಚಾಲನೆ ನೀಡಲಾಯಿತು.
ಮಡಿಕೇರಿ : ಮಡಿಕೇರಿಯ ಐತಿಹಾಸಿಕ ದಸರಾ ಉತ್ಸವಾಚರಣೆಗೆ ಸಂಪ್ರದಾಯದಂತೆ ಮಡಿಕೇರಿ ನಗರ ದಸರಾ ಉತ್ಸವ ಸಮಿತಿ ವತಿಯಿಂದ ನಗರದ ಪೇಟೆ ಶ್ರೀರಾಮಮಂದಿರದಲ್ಲಿ ಪೂಜೆ ಸಲ್ಲಿಸುವ ಮೂಲಕ ಉತ್ಸವದ ಕಾರ್ಯಗಳಿಗೆ ಶನಿವಾರ ಚಾಲನೆ ನೀಡಲಾಯಿತು.ಈ ಸಂದರ್ಭ ಮಡಿಕೇರಿ ನಗರ ದಸರಾ ಉತ್ಸವ ಸಮಿತಿಯ ನೂತನ ಕಾರ್ಯಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಐತಿಹಾಸಿಕ ಮಡಿಕೇರಿ ದಸರಾಗೆ ಚಾಲನೆ ನೀಡಲಾಗಿದೆ. ಈ ಭಾರಿ ಕಾರ್ಯಧ್ಯಕ್ಷ ಸ್ಥಾನದ ಮಹತ್ವದ ಜವಾಬ್ದಾರಿ ಕೂಡ ನನ್ನ ಮೇಲಿದ್ದು, ಅಚ್ಚುಕಟ್ಟಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ. ಈ ಭಾರಿಯ ದಸರಾಗೆ ಎಲ್ಲರ ಸಹಕಾರ ಕೂಡ ನಮಗೆ ಅಗತ್ಯ. ತಮ್ಮೆಲ್ಲರ ಸಹಕಾರದಿಂದ ಮಡಿಕೇರಿ ದಸರಾವನ್ನ ಬಹಳ ಅದ್ದೂರಿಯಾಗಿ ಆಚರಿಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ದಶಮಂಟಪ ಸಮಿತಿ ಅಧ್ಯಕ್ಷ ಹರೀಶ್ ಅಣ್ವೇಕರ್ ಸೇರಿದಂತೆ ದಶಮಂಟಪಗಳ ಸಮಿತಿ ಪದಾಧಿಕಾರಿಗಳು, ನಗರಸಭೆ ಸದಸ್ಯರು ಪಾಲ್ಗೊಂಡಿದ್ದರು.