ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುದಸರಾ ಗಜಪಡೆಯು ಸೋಮವಾರ ಸಹ ನಡಿಗೆ ತಾಲೀಮಿನಲ್ಲಿ ಪಾಲ್ಗೊಂಡಿದ್ದವು. ಅಂಬಾರಿ ಆನೆ ಅಭಿಮನ್ಯು, ಧನಂಜಯ, ಗೋಪಿ, ಭೀಮ, ರೋಹಿತ್, ಏಕಲವ್ಯ, ವರಲಕ್ಷ್ಮಿ ಮತ್ತು ಲಕ್ಷ್ಮಿ ಆನೆಗಳು ನಡಿಗೆ ತಾಲೀಮಿನಲ್ಲಿ ಪಾಲ್ಗೊಂಡಿದ್ದವು. ಕಂಜನ್ ಆನೆಯ ಕಾಲಿಗೆ ಉಳುಕಾಗಿರುವ ಕಾರಣ ತಾಲೀಮಿನಲ್ಲಿ ಭಾಗವಹಿಸಿರಲಿಲ್ಲ.ಅರಮನೆ ಆವರಣದ ಆನೆ ಬಿಡಾರದಿಂದ ಹೊರಟ 8 ಆನೆಗಳು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಆರ್ ಎಂಸಿ ವೃತ್ತಕ್ಕೆ ತಲುಪಿ ಅಲ್ಲಿಂದ ವಾಪಸ್ ಅರಮನೆ ಆನೆ ಬಿಡಾರಕ್ಕೆ ಬಂದು ಸೇರಿದವು.ಈ ವೇಳೆ ಆನೆ ವೈದ್ಯ ಡಾ. ಮುಜೀಬ್ ರೆಹಮಾನ್, ಆರ್ ಎಫ್ಒ ಸಂತೋಷ್ ಹೂಗಾರ್ ಹಾಗೂ ಸಿಬ್ಬಂದಿ ಇದ್ದರು. ಪೊಲೀಸರು ಭದ್ರತೆ ಕೈಗೊಂಡಿದ್ದರು.ಆನೆಗಳಿಗೆ ಮಜ್ಜನ: ನಡಿಗೆ ತಾಲೀಮು ಮುಗಿಸಿ ಬಂದ ಆನೆಗಳಿಗೆ ಮಾವುತರು, ಕಾವಾಡಿಗಳು ಅರಮನೆ ಆನೆ ಬಿಡಾರದಲ್ಲಿರುವ ನೀರಿನ ತೊಟ್ಟಿಯಲ್ಲಿ ಸ್ನಾನ ಮಾಡಿಸಿದರು. ಕಾಲು ಉಳುಕಿನಿಂದ ನಡಿಗೆ ತಾಲೀಮಿಗೆ ಗೈರಾಗಿದ್ದ ಕಂಜನ್ ಆನೆ ಚೇತರಿಸಿಕೊಳ್ಳುತ್ತಿದ್ದು, ಕಾವಾಡಿ ಸ್ನಾನ ಮಾಡಿಸಿದರು.ಇನ್ನೂ ಅಂಬಾರಿ ಆನೆ ಅಭಿಮನ್ಯುಗೆ ಕಾವಾಡಿಗಳು ಬ್ರಷ್ ನಿಂದ ಮೈ ಉಜ್ಜಿ ಜಳಕ ಮಾಡಿಸುತ್ತಿದ್ದು ಕಂಡು ಬಂತು.