ಸಕ್ರೆಬೈಲ್‌ನಿಂದ ಶಿವಮೊಗ್ಗ ನಗರಕ್ಕೆ ಬಂದ ದಸರಾ ಗಜಪಡೆ

| Published : Oct 22 2023, 01:00 AM IST

ಸಕ್ರೆಬೈಲ್‌ನಿಂದ ಶಿವಮೊಗ್ಗ ನಗರಕ್ಕೆ ಬಂದ ದಸರಾ ಗಜಪಡೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾಗರ, ನೇತ್ರಾವತಿ, ಹೇಮಾವತಿ ಆನೆಗಳ ಆಗಮನ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ವಿಶ್ವವಿಖ್ಯಾತ ಮೈಸೂರು ದಸರಾ ಬಿಟ್ಟರೆ ರಾಜ್ಯದಲ್ಲಿಯೇ ಅತ್ಯಂತ ವಿಜೃಂಭಣೆಯಿಂದ ದಸರಾ ಆಚರಿಸುವ ಶಿವಮೊಗ್ಗ ದಸರಾ ಮಹೋತ್ಸವಕ್ಕೆ ಈಗಾಗಲೇ ಸಕ್ರೆಬೈಲು ಆನೆ ಬಿಡಾರದ ಗಜಪಡೆ ಶಿವಮೊಗ್ಗಕ್ಕೆ ಆಗಮಿಸಿದ್ದು, ಈ ವರ್ಷವೂ ಆನೆ ''''ಸಾಗರ'''' ನೇತೃತ್ವದಲ್ಲಿ ನಡೆಯುವ ಅಂಬಾರಿ ಮೆರವಣಿಗೆ ದಸರಾ ಮೆರುಗು ಇಮ್ಮಡಿಗೊಳಿಸಲಿದೆ. ವಿಶೇಷವೆಂದರೆ, ಈ ಬಾರಿ ಅಂಬಾರಿ ಮೆರವಣಿಗೆಯಲ್ಲಿ ''''ಭಾನುಮತಿ'''' ಬದಲು ''''ಹೇಮಾವತಿ'''' ಹೆಜ್ಜೆ ಹಾಕಲಿದ್ದಾಳೆ. ಶಿವಮೊಗ್ಗದಲ್ಲಿ ಅಂಬಾರಿ ಹೊರುವ ಪರಂಪರೆ ಶುರುವಾದಾಗಿಂದ ಶಾಂತ ಸ್ವಭಾವದ ಸಾಗರ ಆನೆಯೇ ಈ ಕೆಲಸ ಮಾಡುತ್ತಿದೆ. ಈತನೊಂದಿಗೆ ಸಕ್ರೆಬೈಲು ಆನೆ ಬಿಡಾರದ ಹಿರಿಯಾನೆ ನೇತ್ರಾವತಿ ಮತ್ತು ಭಾನುಮತಿ ಸಾಥ್‌ ನೀಡುತ್ತಿದ್ದವು. ಆದರೆ, ಈ ವರ್ಷ ಭಾನುಮತಿ ಬದಲು ''''ಹೇಮಾವತಿ'''' ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದಾಳೆ. ಭಾನುಮತಿ ಗರ್ಭಿಣಿ ಆಗಿರುವುದರಿಂದ ಮೆರವಣಿಗೆಯಿಂದ ಕೈಬಿಡಲಾಗಿದೆ. ತಾಯಿ ಶ್ರೀ ಚಾಮುಂಡೇಶ್ವರಿಯ ವಿಗ್ರಹ ಹೊತ್ತ ದಸರಾ ಅಂಬಾರಿ ವೈಭವ ನೋಡುವುದೇ ಎಲ್ಲರಿಗೂ ಕುತೂಹಲ. ಅದೂ ರಾಜಬೀದಿಯಲ್ಲಿ ಗಜಪಡೆಯ ಮೆರವಣಿಗೆ ವೀಕ್ಷಿಸುವುದಕ್ಕಾಗಿಯೇ ಸಾವಿರಾರು ಜನ ಶಿವಮೊಗ್ಗಕ್ಕೆ ಆಗಮಿಸುತ್ತಾರೆ. ದಸರಾ ಹಿನ್ನೆಲೆ ವಾರದ ಹಿಂದೆಯೇ ಸಕ್ರೆಬೈಲು ಆನೆ ಬಿಡಾರದಲ್ಲಿ ಅಂಬಾರಿ ಸಾಗರ ಆನೆ ಜೊತೆಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕುವ ನೇತ್ರಾವತಿ ಹಾಗೂ ಹೇಮಾವತಿಗೂ ತರಬೇತಿ ಆರಂಭಿಸಲಾಗಿತ್ತು. ಸಕ್ರೆಬೈಲು ಆನೆ ಬಿಡಾರದಿಂದ ಗಾಜನೂರು ಡ್ಯಾಂವರೆಗೆ ಕರೆದೊಯ್ದು, 450 ಕೆಜಿಯ ಮರಳು ಚೀಲ ತುಂಬಿ ಮೂರು ಆನೆಗಳ ಮೇಲೆ ಹೊರಿಸಿ, ನಿತ್ಯ 3 ಕಿ.ಮೀ. ಓಡಾಡಿಸಲಾಗುತ್ತಿತ್ತು. ಒಂದು ವಾರದ ತರಬೇತಿ ಬಳಿಕ ಅವುಗಳು ಶುಕ್ರವಾರ ಶಿವಮೊಗ್ಗ ನಗರ ಪ್ರವೇಶಿಸಿದ್ದು, ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಇಲ್ಲಿ ಅಂಬಾರಿ ಹೊರುವುದಕ್ಕೂ ಮುನ್ನ ರಾಜಬೀದಿಯಲ್ಲಿ ಗಜಪಡೆ ಸಾಗಲಿವೆ. ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ವಿಶೇಷ ಖಾದ್ಯ ನೀಡಲಾಗುತ್ತದೆ. ವಾಸವಿ ಶಾಲೆ ಆವರಣದಲ್ಲಿ ಆನೆಗಳ ವಾಸ್ತವ್ಯ. ಆನೆಗಳಿಗೆ ಹಸಿರು ಸೊಪ್ಪು, ಹುಲ್ಲು, ಕಬ್ಬು, ಬಾಳೆಹಣ್ಣು, ಭತ್ತದ ಹುಲ್ಲು, ತೆಂಗಿನಕಾಯಿ, ಅಕ್ಕಿ, ಕುಚಲಕ್ಕಿ, ಬೆಲ್ಲ, ಹೆಸರುಕಾಳು, ಉದ್ದಿನ ಕಾಳುಗಳ ಖಾದ್ಯಗಳನ್ನು ನೀಡಲಾಗುತ್ತದೆ. - - - ಬಾಕ್ಸ್‌ ಗಜಪಡೆಗೆ ಪಾಲಿಕೆಯಿಂದ ಅದ್ಧೂರಿ ಸ್ವಾಗತ ಅಂಬಾರಿ ಹೊರಲಿರುವ ಸಾಗರ ಆನೆ, ಕುಮ್ಕಿ ಆನೆಗಳಾದ ನೇತ್ರಾವತಿ ಮತ್ತು ಹೇಮಾವತಿ ನಗರಕ್ಕೆ ಆಗಮಿಸಿವೆ. ಶುಕ್ರವಾರ ಸಂಜೆ ಮಹಾನಗರ ಪಾಲಿಕೆ ಸದಸ್ಯರು ಆನೆಗಳಿಗೆ ಪೂಜೆ ಸಲ್ಲಿಸಿ, ಸ್ವಾಗತಿಸಿದರು. ಕೋಟೆ ರಸ್ತೆಯ ವಾಸವಿ ಶಾಲೆಯಲ್ಲಿ ಆನೆಗಳು ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಇನ್ನು, ಆನೆಗಳು ಬಂದಿರುವ ವಿಚಾರ ತಿಳಿದು ಜನ ವಾಸವಿ ಶಾಲೆಯತ್ತ ಧಾವಿಸಿದರು. ಆನೆಗಳ ಫೋಟೋಗಳ ಕ್ಲಿಕ್ಕಿಸಿ ಸಂಭ್ರಮಿಸುತ್ತಿದ್ದಾರೆ. ತಾಲೀಮು ಆರಂಭಿಸಿದ ಆನೆಗಳು: ನಗರಕ್ಕೆ ಆಗಮಿಸುತ್ತಿದ್ದಂತೆ ಆನೆಗಳು ತಾಲೀಮು ಆರಂಭಿಸಿವೆ. ಕೋಟೆ ರಸ್ತೆಯಿಂದ ದಸರಾ ಮೆರವಣಿಗೆ ಸಾಗುವ ಮಾರ್ಗದಲ್ಲಿ ಆನೆಗಳನ್ನು ಶನಿವಾರ ಬೆಳಗ್ಗೆ ಕರೆದೊಯ್ಯಲಾಯಿತು. ನಗರದ ವಾಹನ ದಟ್ಟಣೆ, ಕಟ್ಟಡಗಳು ಮತ್ತು ಇಲ್ಲಿಯ ಪರಿಸರಕ್ಕೆ ಆನೆಗಳು ಹೊಂದಿಕೊಳ್ಳಬೇಕಿದೆ. ಈ ಹಿನ್ನೆಲೆ ತಾಲೀಮು ಪ್ರಮುಖವಾಗುತ್ತದೆ. ಸಕ್ರೆಬೈಲು ಬಿಡಾರದ ಸಿಬ್ಬಂದಿ ತಾಲೀಮಿನಲ್ಲಿ ಪಾಲ್ಗೊಂಡಿದ್ದರು. - - - -21ಎಸ್‌ಎಂಜಿಕೆಪಿ04: ಶಿವಮೊಗ್ಗ ದಸರಾ ಮಹೋತ್ಸವ ಅಂಗವಾಗಿ ಶಿವಮೊಗ್ಗಕ್ಕೆ ಆಗಮಿಸಿರುವ ಸಕ್ರೆಬೈಲು ಗಜ ಪಡೆಗೆ ತಾಲೀಮು ನಡೆಯಿತು.