ದಸರಾ ಹಬ್ಬಕ್ಕೆ ಮನೆಮನೆಯಲ್ಲೂ ಸಂಭ್ರಮ

| Published : Oct 07 2024, 01:32 AM IST

ದಸರಾ ಹಬ್ಬಕ್ಕೆ ಮನೆಮನೆಯಲ್ಲೂ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ: ದಸರಾ ಹಬ್ಬ ನಾಡಿನ ಹಬ್ಬವಾಗಿದ್ದು, ಮೈಸೂರು ಮತ್ತು ಚಾಮರಾಜನಗರದ ಮನೆ ಮನೆಗಳಲ್ಲೂ ದಸರಾ ಆಚರಣೆ ನಡೆಯುತ್ತಿದೆ, ದೀಪಾಲಂಕಾರ, ಸಾಂಸ್ಕೃತಿಕ ಮತ್ತು ದೇವತಾ ಕಾರ್ಯಕ್ರಮಗಳು ಸಂಭ್ರಮವನ್ನುಂಟು ಮಾಡುತ್ತವೆ ಎಂದು ತಾಲೂಕು ಕಸಾಪ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ತಿಳಿಸಿದರು.

ಚಾಮರಾಜನಗರ: ದಸರಾ ಹಬ್ಬ ನಾಡಿನ ಹಬ್ಬವಾಗಿದ್ದು, ಮೈಸೂರು ಮತ್ತು ಚಾಮರಾಜನಗರದ ಮನೆ ಮನೆಗಳಲ್ಲೂ ದಸರಾ ಆಚರಣೆ ನಡೆಯುತ್ತಿದೆ, ದೀಪಾಲಂಕಾರ, ಸಾಂಸ್ಕೃತಿಕ ಮತ್ತು ದೇವತಾ ಕಾರ್ಯಕ್ರಮಗಳು ಸಂಭ್ರಮವನ್ನುಂಟು ಮಾಡುತ್ತವೆ ಎಂದು ತಾಲೂಕು ಕಸಾಪ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದಸರಾ ಮತ್ತು ಮೈಸೂರು ಒಡೆಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ದಸರಾ ಮಹೋತ್ಸವ ತದನಂತರ ಒಡೆಯರ್ ಸಂಸ್ಥಾನದ ಮೈಸೂರಿನಲ್ಲಿ ಆರಂಭಿಸಿ ನಾಡಿನ ಸಂಸ್ಕೃತಿ, ಪರಂಪರೆ, ಕಲೆ, ಸಾಹಿತ್ಯ ವಾಸ್ತುಶಿಲ್ಪ , ಅಭಿವೃದ್ಧಿ, ನೀರಾವರಿ, ಪ್ರಕೃತಿ ಮತ್ತು ಆಧ್ಯಾತ್ಮಿಕ ಶಕ್ತಿ ಅಲ್ಲದೆ ಎಲ್ಲ ಸಮಗ್ರ ಕ್ಷೇತ್ರಗಳ ವಿಕಾಸದ ಪ್ರಗತಿಯನ್ನು ಸಮಾಜಕ್ಕೆ ಅರಿವು ಮೂಡಿಸುವ ಕಾರ್ಯಕ್ರಮವಾಗಿ ರೂಪಿತವಾಗಿರುವುದು ಹೆಮ್ಮೆಯ ವಿಷಯವಾಗಿದೆ. ಮೈಸೂರು-ಚಾಮರಾಜನಗರ ಅವಿನಾಭಾವದ ಭಾವನಾತ್ಮಕ ಸಂಬಂಧವನ್ನು ಹೊಂದಿದೆ. ಮೈಸೂರಿನ ಭಾಗವಾಗಿದ್ದ ಚಾಮರಾಜನಗರ ತನ್ನದೇ ಆದ ಜಿಲ್ಲೆಯ ಸ್ವರೂಪವನ್ನು ಪಡೆದ ನಂತರ ಚಾಮರಾಜನಗರದಲ್ಲೂ ಸರ್ಕಾರ ವಿಶೇಷವಾಗಿ ದಸರಾ ಆಚರಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮತ್ತು ಸಾಂಸ್ಕೃತಿಕ , ಅಧ್ಯಾತ್ಮಿಕ ಮೌಲ್ಯಗಳನ್ನು ಸಮರ್ಪಿಸುವ ಮತ್ತು ಜನತೆಯನ್ನು ಸಾಂಸ್ಕೃತಿಕ ಲೋಕಕ್ಕೆ ತೆಗೆದುಕೊಂಡು ಹೋಗುವ ವಿಶೇಷವಾದ ಕಾರ್ಯಕ್ರಮಗಳನ್ನು ರೂಪಿಸಿದೆ. ಇದಕ್ಕಾಗಿ ಜನತೆಗೆ ಧನ್ಯವಾದಗಳು ಅರ್ಪಿಸಬೇಕಾಗಿದೆ. ಮೈಸೂರು ಒಡೆಯರ ಕೊಡುಗೆ ಅಪಾರವಾದದ್ದು. ಕಲೆಯ ಸಾಹಿತ್ಯ, ಸಂಗೀತ, ನೃತ್ಯ ಮತ್ತು ವಿವಿಧ ಲಲಿತ ಕಲೆಗಳ ವಿಕಾಸಕ್ಕಾಗಿ ಮೈಸೂರು ಒಡೆಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ದಸರಾ ಒಂದು ನಾಡಹಬ್ಬ ಹಾಗೂ ಸ್ವರ್ಗವನ್ನು ಕಾಣುವ ಒಂದು ಸಮಯ ಎಂದು ಬಣ್ಣಿಸಿದರು.

ಚಾಮರಾಜನಗರ ಮೈಸೂರು ದಸರಾದಲ್ಲಿ ವಿಶೇಷವಾಗಿ ಕುಸ್ತಿ ಹಾಗೂ ಸಾಂಸ್ಕೃತಿಕ ನೃತ್ಯ ಪರಂಪರೆಗಳ ಅವಿನಾಭಾವದ ಸಂಕೇತವಾಗಿ ಇಂದಿಗೂ ಭಾಗವಹಿಸುತ್ತಿರುವುದು ನಗರಕ್ಕೆ ಬಹು ಗೌರವವನ್ನು ತಂದಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ದಸರಾ ವೈಭವವನ್ನು ಚಿಂತಿಸುವ ಮತ್ತು ಶ್ರಮಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸುವ ಕಾರ್ಯ ಮಾಡಬೇಕು ಎಂದು ಋಗ್ವೇದಿ ತಿಳಿಸಿದರು.

ಉದ್ಘಾಟನೆ ನೆರವೇರಿಸಿದ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ರಾಜ್ಯಾಧ್ಯಕ್ಷ ಶ್ರೀನಿವಾಸ್‌ಗೌಡ ಮಾತನಾಡಿ, ಸರ್ಕಾರ ಇತಿಹಾಸ , ಪರಂಪರೆಗೆ ಗೌರವ ತರುವ ಕಾರ್ಯವನ್ನು ಮಾಡುತ್ತಿದೆ. ದಸರಾ ಹಬ್ಬದ ವಿಶೇಷಗಳನ್ನು ಸಮುದಾಯಕ್ಕೆ ತಿಳಿಸಿ ಮತ್ತೊಮ್ಮೆ ಹಳೆಯ ಪದ್ಧತಿಗಳನ್ನು ವಿಸ್ತಾರಗೊಳಿಸಿ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆ ಪುನರ್‌ಸ್ಥಾಪನೆಗೊಳಿಸುವ ಅವಶ್ಯಕತೆ ಇದೆ. ಚಾಮರಾಜನಗರದ ನಿರ್ಮಾಣವೇ ಮೈಸೂರು ಒಡೆಯರ ಕೊಡುಗೆ. ಚಾಮರಾಜೇಶ್ವರ ಸ್ವಾಮಿ ದೇವಾಲಯದ ನಿರ್ಮಾಣ, ಖಾಸಗಿ ಜನನ ಮಂಟಪದಲ್ಲಿ ಮತ್ತೆ ದಸರಾ ದರ್ಬಾರ್ ಆರಂಭಿಸಿರುವ ಜಿಲ್ಲಾಡಳಿತಕ್ಕೆ ಸರ್ವರೂ ಸಹಕಾರ ನೀಡಬೇಕು . ತಾಲೂಕು ಕಸಾಪ ಅಧ್ಯಕ್ಷ ಋಗ್ವೇದಿ ವಿಶೇಷವಾಗಿ ಕಾರ್ಯಕ್ರಮಗಳನ್ನು ರೂಪಿಸಿ ದಸರಾ ಹಬ್ಬದ ಬಗ್ಗೆ ತಿಳಿಯುವ, ನಿರಂತರವಾಗಿ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಿ ಸಮಾಜವನ್ನು ಒಂದು ಗೂಡಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನೀಯ ಎಂದರು.

ಕಸಾಪ ನಿರ್ದೇಶಕ ಮಂಜುನಾಥ ಆರಾಧ್ಯ ಮಾತನಾಡಿ, ತಾಯಿ ಚಾಮುಂಡಿ ಮಹಿಷಾಸುರನನ್ನು ಸಂಹರಿಸಿದ ನೆನಪಿಗಾಗಿ ಹಳೆ ಮೈಸೂರಿನಲ್ಲಿ ವಿಶೇಷವಾಗಿ ದಸರಾ ಹಬ್ಬ ನಡೆದು ಬಂದಿದೆ. ಉತ್ತರ ಭಾರತದಲ್ಲಿ ರಾವಣನನ್ನು ಕೊಂದ ರಾಮನನ್ನು ವಿಶೇಷವಾಗಿ ಪೂಜಿಸುವ ರಾವಣ ದಹನ ಮಾಡುವ ಮೂಲಕ ದಸರಾ ಹಬ್ಬ ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಕಸಾಪದ ಸರಸ್ವತಿ ಶಿವಲಿಂಗ ಮೂರ್ತಿ, ಪರಶಿವ ಶೆಟ್ಟಿ, ಪರಮೇಶ್ವರಪ್ಪ, ವೆಂಕಟೇಶ್ ಬಾಬು, ಪಣ್ಯದ ಹುಂಡಿ ರಾಜು ಮಹಾದೇವ, ಕಾರ್ತಿಕ್ , ಮಹೇಶ್ ಉಪಸ್ಥಿತರಿದ್ದರು.