ಸಾರಾಂಶ
ಹೊಸಪೇಟೆ: ನಗರದ ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ದಸರಾ ಹಬ್ಬದ ನಿಮಿತ್ತ ಭಾನುವಾರ ಬಯಲು ಕುಸ್ತಿ ಪಂದ್ಯಾವಳಿ ನಡೆಯಿತು.
ಹರಪನಹಳ್ಳಿಯ ಪೈಲ್ವಾನ್ ಕೃಷ್ಣ ವಿಜಯನಗರ ಕೇಸರಿಯಾಗಿ ಹೊರಹೊಮ್ಮಿದರೆ, ಹೊಸಪೇಟೆಯ ಪೈಲ್ವಾನ್ ಪರಶುರಾಮ ವಿಜಯನಗರ ಕಂಠೀರವ ಬಿರುದು ಪಡೆದರು.ಬಯಲು ಕುಸ್ತಿ ಪಂದ್ಯಾವಳಿ ಭಾರೀ ರೋಚಕತೆಯಿಂದ ಕೂಡಿತ್ತು. ಈ ಪಂದ್ಯಾವಳಿಯಲ್ಲಿ ಬಳ್ಳಾರಿ, ವಿಜಯನಗರ ಜಿಲ್ಲೆಗಳ 100ಕ್ಕೂ ಅಧಿಕ ಪುರುಷ ಕುಸ್ತಿಪಟುಗಳು ಹಾಗೂ 20ಕ್ಕೂ ಅಧಿಕ ಮಹಿಳಾ ಕುಸ್ತಿಪಟುಗಳು ಭಾಗವಹಿಸಿದ್ದರು. ವಿವಿಧ ವಿಭಾಗಗಳಲ್ಲಿ ನಡೆದ ಪಂದ್ಯಾವಳಿಯಲ್ಲಿ ಪೈಲ್ವಾನ್‌ರು ತಮ್ಮ ಎದುರಾಳಿಗಳನ್ನು ಮಣಿಸಲು ಕಸರತ್ತು ನಡೆಸಿದರು. ವಿವಿಧ ಪಟ್ಟುಗಳನ್ನು ಹಾಕಿ ಎದುರಾಳಿಗಳನ್ನು ಮಣಿಸುವ ದೃಶ್ಯ ರೋಚಕತೆಯಿಂದ ಕೂಡಿತ್ತು.
ಅಂತಿಮವಾಗಿ ಹರಪನಹಳ್ಳಿಯ ಪೈಲ್ವಾನ್ ಕೃಷ್ಣ ವಿಜಯನಗರ ಕೇಸರಿ ಬಿರುದಿನೊಂದಿಗೆ 1 ಕೆಜಿ 250 ಗ್ರಾಂ. ಬೆಳ್ಳಿ ಗದೆ ತಮ್ಮದಾಗಿಸಿಕೊಂಡರು. ಹೊಸಪೇಟೆಯ ಪೈಲ್ವಾನ್ ಪರಶುರಾಮ ವಿಜಯನಗರ ಕಂಠೀರವ ಬಿರುದಿನೊಂದಿಗೆ 1 ಕೆಜಿ 250 ಗ್ರಾಂ. ಬೆಳ್ಳಿ ಗದೆ ಮುಡಿಗೇರಿಸಿಕೊಂಡರು. ಮಹಿಳಾ ಕುಸ್ತಿ ವಿಭಾಗದಲ್ಲಿ 20ಕ್ಕೂ ಅಧಿಕ ಕುಸ್ತಿಪಟುಗಳು ಭಾಗವಹಿಸಿದ್ದರು. ಕಂಪ್ಲಿ, ಮರಿಯಮ್ಮನಹಳ್ಳಿಯ ಮಹಿಳಾ ಕುಸ್ತಿಪಟುಗಳು ವಿಜೇತರಾಗಿ ಹೊರಹೊಮ್ಮಿದರು. ಈ ಕ್ರೀಡಾಕೂಟವನ್ನು ಸಾವಿರಾರು ಜನರು ಆಗಮಿಸಿ ವೀಕ್ಷಿಸಿದರು.ಶಾಸಕ ಗವಿಯಪ್ಪ ಚಾಲನೆ:ವಿಜಯನಗರ ಕ್ಷೇತ್ರದ ಶಾಸಕ ಎಚ್.ಆರ್. ಗವಿಯಪ್ಪ ಬಯಲು ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ದಸರಾ ಹಬ್ಬದ ಈ ವಿಶೇಷ ಕ್ರೀಡಾ ಕಾರ್ಯಕ್ರಮವು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವಂತಹದು. ಇಂತಹ ಪಂದ್ಯಾವಳಿಗಳನ್ನು ಇನ್ನಷ್ಟು ಆಯೋಜಿಸುವ ಮೂಲಕ ಈ ಭಾಗದಲ್ಲಿ ಕುಸ್ತಿ ಕ್ರೀಡೆಗೆ ಉತ್ತೇಜನ ನೀಡಬೇಕು. ಬಳ್ಳಾರಿ, ವಿಜಯನಗರ ಅವಳಿ ಜಿಲ್ಲೆಗಳ ಪೈಲ್ವಾನ್‌ರು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಅವರಿಗೆ ಅವಕಾಶ, ಉತ್ತೇಜನ ನೀಡಿದರೆ ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈ ಕ್ರೀಡಾಕೂಟ ಉದ್ಘಾಟನೆಗೆ ನಾನು ಸಂತೋಷದಿಂದ ಬಂದಿರುವೆ ಎಂದರು.ಡಿವೈಎಸ್ಪಿ ಟಿ. ಮಂಜುನಾಥ, ಮುಖಂಡರಾದ ಕುರಿ ಶಿವಮೂರ್ತಿ, ಗುಜ್ಜಲ ಶ್ರೀನಿವಾಸ್, ಅಶೋಕ್ ನಾಯ್ಕ, ಸಿ.ಎ. ಗಾಳೆಪ್ಪ, ಗೋಕುಲ, ಮಂಜುನಾಥ, ಗುಜ್ಜಲ ಭರಮಪ್ಪ, ಪಂಪಾ ನಾಯಕ, ಸರಳಾ ಕಾವ್ಯ, ತೀರ್ಪುಗಾರರಾದ ತಳವಾರಕೇರಿ ಹೀರಿ ಭೀಮಪ್ಪ, ಮರಿಯಮ್ಮನಹಳ್ಳಿ ಸಣ್ಣ ದುರುಗಪ್ಪ ಮತ್ತಿತರರು ಭಾಗವಹಿಸಿದ್ದರು.
ಹೊಸಪೇಟೆಯಲ್ಲಿ ಭಾನುವಾರ ನಡೆದ ಬಯಲು ಕುಸ್ತಿ ಪಂದ್ಯಾವಳಿಯನ್ನು ಶಾಸಕ ಎಚ್.ಆರ್. ಗವಿಯಪ್ಪನವರು ಉದ್ಘಾಟಿಸಿದರು. ಅತಿಥಿ ಗಣ್ಯರು ಇದ್ದರು.