ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ದಸರಾ ಅತ್ಯಂತ ಜನಪ್ರಿಯವಾದದ್ದು, ನಾವೆಲ್ಲರೂ ಚಿಕ್ಕವರಿಂದಲೂ ಮೈಸೂರು ದಸರಾವನ್ನು ನೋಡಿಕೊಂಡು ಬೆಳೆದರೂ ಹಾಗೆ ಈ ನಮ್ಮ ನಾಡ ಹಬ್ಬ ಕೇವಲ ಜಿಲ್ಲೆಗಳಿಗೆ ರಾಜ್ಯಕ್ಕೆ ಸೀಮಿತವಲ್ಲ. ಈ ನಾಡ ಹಬ್ಬ ದೇಶ ವಿದೇಶಗಳಿಗೆ ಜನಪ್ರಿಯವಾದ ಹಬ್ಬವಾಗಿದೆ ಎಂದು ರೇಷ್ಮೆ ಹಾಗೂ ಪಶು ಸಂಗೋಪನ ಸಚಿವ ಕೆ. ವೆಂಕಟೇಶ್ ಹೇಳಿದರು.ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಿರುವ ಯುವ ಸಂಭ್ರಮ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ನಾಡಹಬ್ಬದಲ್ಲಿ ಲಕ್ಷಾಂತರ ಜನ ಬಂದು ವೀಕ್ಷಣೆ ಮಾಡಿ ಸಂತೋಷಪಟ್ಟು ಕಣ್ತುಂಬಿಕೊಳ್ಳುತ್ತಾರೆ. ಹಾಗೆ ಯುವ ಸಂಭ್ರಮವು ಕೂಡ ಒಂದಾಗಿದೆ. ಯುವ ಪೀಳಿಗೆಗಳಿಗೆ ಅತ್ಯಂತ ಪ್ರಿಯವಾದ ಹಬ್ಬವಾಗಿದೆ ನಾಡಹಬ್ಬ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ವಿವಿಧ ಜಿಲ್ಲೆಗಳಿಂದ ಕಾಲೇಜು ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಯಶಸ್ವಿಯಾಗಿ ನಡೆಯಲಿ ಶುಭ ಹಾರೈಸಿದರು.ಈ ವರ್ಷ ಯುವ ಸಂಭ್ರಮ ಅತ್ಯಂತ ವಿಶೇಷವಾಗಿ ನಡೆಯುತ್ತಿದ್ದು, ಇದರಲ್ಲಿ ಭಾಗವಹಿಸುವಂತಹ ಯುವಕ ಯುವತಿಯರಿಗೆ ಹಾಗೂ ಯುವ ಪ್ರೇಕ್ಷಕರಿಗೆ ಹೆಚ್ಚಾಗಿ ಮನೋರಂಜನೆಯಿಂದ ಸಂಭ್ರಮಿಸುವಂತದು ಎಂದು ಹೇಳಿದರು.
ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಯುವಕರ ಸಂಭ್ರಮ ಎಂದೇ ಹೇಳಲಾಗುವ ಯುವ ಸಂಭ್ರಮವು ದಸರಾ ಮಹೋತ್ಸವದ ಮೊದಲ ಅದ್ಧೂರಿ ಕಾರ್ಯಕ್ರಮವಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.ದಸರಾ ಮಹೋತ್ಸವದ ಮೊದಲನೇ ಕಾರ್ಯಕ್ರಮವಾದ ಯುವಸಂಭ್ರಮ ಯುವಕರಿಗೆ ರಾಸಾದೌತಣವಾಗಿದೆ. ಈ ಕಾರ್ಯಕ್ರಮವನ್ನು ವಿಜೃಂಭಣೆಯಾಗಿ ಮಾಡಲು ಸರ್ಕಾರ ಕಾರಣವಾಗಿದ್ದು, ಅತಿ ಹೆಚ್ಚು ಅನುದಾನವನ್ನು ನೀಡಿ ದಸರಾ ಆಚರಣೆಯ ಯುವಸಂಭ್ರಮದಲ್ಲಿ ಅವಿಸ್ಮರಣೀಯವಾಗಿರುವ ಕಾರ್ಯಕ್ರಮ ನೀಡಿದೆ ಎಂದು ತಿಳಿಸಿದರು.
ಶಾಸಕ ತನ್ವೀರ್ ಸೆಠ್ ಅವರು ಮಾತನಾಡಿ ಯುವಸಂಭ್ರಮದಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಕಾರ್ಯಕ್ರಮಗಳು ನಡೆಯಲಿದ್ದು, ಅಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಪ್ರತಿಯೊಬ್ಬರೂ ನೋಡಬೇಕು. ಕಾರ್ಯಕ್ರಮ ನೀಡಲು ಬಂದಿರುವಂತಹ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಅವರಲ್ಲಿ ಇನ್ನು ಹೆಚ್ಚಿನ ಆತ್ಮವಿಶ್ವಾಸವನ್ನು ಮೂಡಿಸಬೇಕು ಎಂದರು.ಎಲ್ಲಾ ಯುವ ಪೀಳಿಗೆಗಳು ಅರಿತುಕೊಂಡು ಎಲ್ಲರಿಗೂ ಸಮಾನತೆಯನ್ನು ತಂದುಕೊಟ್ಟಿರುವ ಸಂವಿಧಾನದ ಆಶಯವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸಮಾನತೆ ಮತ್ತು ಬ್ರಾತೃತ್ವವನ್ನು ಬೆಳೆಸಬೇಕು ಎಂದು ಹೇಳಿದರು.
ಎಕ್ಕ ಸಿನಿಮಾ ಖ್ಯಾತಿಯ ಯುವ ರಾಜ್ ಕುಮಾರ್ ಮಾತನಾಡಿ, ತುಂಬಾ ಖುಷಿ ಆಗುತ್ತಿದೆ. ದಸರಾ ಅಂದರೆ ಎನರ್ಜಿ. ಅರಮನೆ, ರಾಜರು, ಕುವೆಂಪು ನೆನಪಾಗುತ್ತಾರೆ ಎಂದರು. ಬ್ಯಾಂಗಲ್ ಬಂಗಾರಿ ಗೀತೆ ನೃತ್ಯ ಮಾಡಿ ಜೋಶ್ ತುಂಬಿದರು.ನಟಿ ಅಮೃತ ಅಯ್ಯಂಗಾರ್ ಅವರು ಮಾತನಾಡಿ, ನಮ್ಮೂರಲ್ಲಿ ನಮ್ಮ ವೇದಿಕೆಯಲ್ಲಿ ನಿಂತು ಮಾತನಾಡಲು ಖುಷಿ ಆಗುತ್ತೆ. ಇದೇ ವೇದಿಕೆಯಲ್ಲಿ ನಾನು ನೃತ್ಯ ಮಾಡಿದ್ದೇನೆ. ಮೈಸೂರಿಗೆ ಬರಲು ಖುಷಿ ಆಗುತ್ತೆ. ದಸರಾಗೆ ಕಿಕ್ ಸ್ಟಾರ್ಟ್ ಕೊಡೊದು ಯುವ ಸಂಭ್ರಮ, ನಮ್ಮ ನಾಡಹಬ್ಬವನ್ನು ತಲಾ ತಲಾಂತರದಿಂದ ಬೆಳೆಸಿಕೊಂಡು ಬಂದು, ಇಂದಿಗೂ ಅದೇ ವಿಜೃಂಭಣೆಯಿಂದ ಆಚರಿಸುತ್ತಿರುವುದು ಸಂತಸದ ಸಂಗತಿ. ನಾವು ಇದರಲ್ಲಿ ಪಾಲ್ಗೊಂಡಿರುವುದು ಹೆಚ್ಚಿನ ಖುಷಿ ನೀಡಿದೆ. ಕರ್ನಾಟಕದ ಹೆಮ್ಮೆಯಾಗಿರುವ ದಸರಾವನ್ನು ಎಲ್ಲರೂ ಸಂಭ್ರಮದಿಂದ ಆಚರಿಸಿ ಯಶಸ್ವಿಗೊಳಿಸೋಣ ಎಂದರು.
ಬಳಿಕ ಮೊದಲ ದಿನ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ನೃತ್ಯಗಳು ನಡೆದವು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಡಾ. ಪುಷ್ಪಾವತಿ ಅಮರ್ ನಾಥ್, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್, ನಗರ ಪಾಲಿಕೆ ಆಯುಕ್ತ ಶೇಕ್ ತನ್ವಿರ್ ಆಸಿಫ್ ಇದ್ದರು.
ರಂಗ ಮೂಡಿಸಿದ ವಿದ್ಯಾರ್ಥಿಗಳು:ಮೊದಲಿಗೆ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ವಿದ್ಯಾರ್ಥಿಗಳು ಸ್ವರಭಾರತಿ ಗೀತೆಗೆ ನರ್ತಿಸಿದರು.
ರಾಜೇಂದ್ರ ನಗರ ಶ್ರೀ ಛಾಯದೇವಿ ಕಾಲೇಜ್ ಆಫ್ ಎಜುಕೇಷನ್ ವಿದ್ಯಾರ್ಥಿಗಳು ಗ್ಯಾರಂಟಿ ಯೋಜನೆ ಅನುಷ್ಠಾನ ಗೀತ ಗುಚ್ಚ ನೃತ್ಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ ಮಹಾದೇವಪ್ಪ ಅವರ ಭಾವಚಿತ್ರ ಹಿಡಿದು ಸರ್ಕಾರ ನೀಡಿರುವ ಎಲ್ಲಾ ಉಚಿತ ಭಾಗ್ಯಗಳನ್ನು ಭಿತ್ತರಿಸುವುದರ ಮುಖಾಂತರ ಅರಿವು ಮೂಡಿಸಿದರು.ಮೈಸೂರಿನ ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ರಾಷ್ಟ್ರ ಸಂವಿಧಾನಕ್ಕೆ ನೀನೆ ಶಿಲ್ಪಿಯು ನೀನೇ ಕಲಿಸಿಕೊಟ್ಟೆ ಸಮಾನತೆಯನ್ನು ಹಾಡಿಗೆ ನೃತ್ಯದ ಮೂಲಕ ಮನರಂಜಿಸುತ್ತಾ ನೆರದಿದ್ದ ಪ್ರೇಕ್ಷಕರು ಟಾರ್ಚ್ ಲೈಟ್ ಹಾಕುವುದರ ಮುಖಾಂತರ ಜೈ ಭೀಮ್ ಜೈ ಭೀಮ್ ಎಂದು ಘೋಷಣೆ ಕೂಗೂತ್ತಾ ತಾವು ಕೂಡ ನೃತ್ಯ ಮಾಡುತ್ತಾ ಸಿಳ್ಳೆ ಹಾಕಿ ಸಂಭ್ರಮಿಸಿದರು.
ದಸರಾ ಯುವ ಸಂಭ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಧಾರಿತ:ಡಾ ವಿಷ್ಣುವರ್ಧನ್ ನಟಿಸಿರುವ ಸಿಂಹಾದ್ರಿಯ ಸಿಂಹ ಹಾಡನ್ನು ಕೇಳಿಸುವುದರ ಮುಖಾಂತರ ಬಿ. ಇ.ಎಡ್ ಕಾಲೇಜಿನ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.
ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿಗಳಿಂದ ವಿ.ರವಿಚಂದ್ರನ್ ನಟಿಸಿರುವ ಆಟ ಹುಡುಗಾಟವೋ ಪರಮಾತ್ಮನಾ ಆಟವೋ ಹಾಡಿಗೆ ನೃತ್ಯ ಮಾಡುತ್ತಾ ಜಿನುಗುವ ಮಳೆಯಲ್ಲು ಕಿಕ್ಕಿರದ ಯುವಜನತೆ ಕುಣಿದು ಕುಪ್ಪಳಿಸಿದರು.ಜ್ಞಾನಧಾರ ಪ್ರಥಮ ದರ್ಜೆ ಕಾಲೇಜಿನ ತಂಡವು ಕನ್ನಡ ಸಿನಿಮಾಧಾರಿತ ನೃತ್ಯವನ್ನು ಪ್ರಸ್ತುತಪಡಿಸಿ ಮನರಂಜಿಸಿದರು.
ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಆದಿವಾಸಿ ಸಮುದಾಯದ ಜೀವನ ಶೈಲಿ ಅವರ ಸಂಸ್ಕತಿ ಯನ್ನು ಬಲೂನ್ ಒಳಗೆ ಇರಿಸಿ ನೃತ್ಯದ ಮೂಲಕ ಮನರಂಜಿಸಿದರು. ಕಾರ್ಯಕ್ರಮ ಪ್ರಾರಂಭಗೊಂಡ 1 ಗಂಟೆಯಲ್ಲೇ ಮಳೆ ಜೋರಾಯಿತು. ಆದರೂ ಜಗ್ಗದ ಯುವ ಸಮೂಹ ಕೊಡೆ ಹಿಡಿದುಕೊಂಡೇ ನೃತ್ಯವನ್ನು ವೀಕ್ಷಿಸಿದರು.ಒಂದೆಡೆ ರಾಷ್ಟ್ರೀಯ ಭಾವೈಕ್ಯತೆ, ಕನ್ನಡದ ವೈಭವ ಸಾರಿದ ಕಾಲೇಜು ವಿದ್ಯಾರ್ಥಿಗಳು ನೃತ್ಯ ಮತ್ತೊಂದೆಡೆ ಮಳೆಯ ನೀಧಿನಾದ. ಕೊಡೆ, ಟಾರ್ಪಾಲ್‌ಗಳನ್ನು ಹಿಡಿದು ನೃತ್ಯ ವೈಭವ ಕಣ್ಣುಂಬಿಕೊಂಡ ಯುವ ಸಮೂಹ.