ಸಾರಾಂಶ
ಉತ್ತರ ಕನ್ನಡದಲ್ಲಿ ಉತ್ತರ ಭಾರತದ ದಸರಾ ಆಚರಣೆಯ ವೈಭವ ನೋಡಬೇಕೆ? ಹಾಗಿದ್ದರೆ ದಾಂಡೇಲಿಗೆ ಬನ್ನಿ. ದಾಂಡಿಯಾ ಹಾಗೂ ರಾಮಲೀಲಾ ಉತ್ಸವ ದಾಂಡೇಲಿ ದಸರಾದ ಪ್ರಮುಖ ಆಕರ್ಷಣೆಯಾಗಿದೆ.
ಕಾರವಾರ:
ಉತ್ತರ ಕನ್ನಡದಲ್ಲಿ ಉತ್ತರ ಭಾರತದ ದಸರಾ ಆಚರಣೆಯ ವೈಭವ ನೋಡಬೇಕೆ? ಹಾಗಿದ್ದರೆ ದಾಂಡೇಲಿಗೆ ಬನ್ನಿ. ದಾಂಡಿಯಾ ಹಾಗೂ ರಾಮಲೀಲಾ ಉತ್ಸವ ದಾಂಡೇಲಿ ದಸರಾದ ಪ್ರಮುಖ ಆಕರ್ಷಣೆಯಾಗಿದೆ.ಒಂಬತ್ತು ದಿನ ವಿಜೃಂಭಣೆಯಿಂದ ಮಹಾನವಮಿ ದಿನ ಉತ್ತರ ಭಾರತೀಯ ಗರ್ಭಾ ನೃತ್ಯ ದಾಂಡೇಲಿ ನಗರದ ಅನೇಕ ಕಡೆಗಳಲ್ಲಿ ಸಂಭ್ರಮದಿಂದ ನಡೆಯುತ್ತದೆ. ಮಕ್ಕಳು, ಮಹಿಳೆಯರೂ ಪಾಲ್ಗೊಳ್ಳುವ ಈ ದಾಂಡಿಯಾ ನೋಡಲೆಂದೆ ಸಾವಿರಾರು ಜನರು ಸೇರುತ್ತಾರೆ. ಆಧುನಿಕ ಸಂಗೀತಕ್ಕೆ ಹೆಜ್ಜೆ ಹಾಕುತ್ತ ವೃತ್ತಾಕಾರವಾಗಿ ತಿರುಗುತ್ತ ದಾಂಡಿಯಾದ ಸೊಬಗು ಸಂಜೆಯಾಗುತ್ತಿದ್ದಂತೆ ಅಲ್ಲಲ್ಲಿ ಕಾಣಲು ಸಾಧ್ಯ.
ವಿಜಯ ದಶಮಿ ದಿನ ನಡೆಯುವ ರಾಮಲೀಲಾ ಉತ್ಸವ ದಾಂಡೇಲಿ ದಸರಾಕ್ಕೆ ಮೆರುಗು ತಂದಿದೆ. 50 ಸಾವಿರಕ್ಕೂ ಹೆಚ್ಚು ಜನರು ಕುತೂಹಲದಿಂದ ವೀಕ್ಷಿಸುವ ರಾಮಲೀಲಾ ಉತ್ಸವ ವೆಸ್ಟ್ ಕೋಸ್ಟ್ ಪೇಪರ್ ಮಿಲ್‌ನ ಡೀಲಕ್ಸ್ ಮೈದಾನದಲ್ಲಿ ನಡೆಯುತ್ತದೆ. ರಾವಣ, ಕುಂಭಕರ್ಣ ಹಾಗೂ ಮೇಘನಾದರ ಬೃಹತ್ ಪ್ರತಿಕೃತಿ ನಿರ್ಮಿಸಿ ಅದನ್ನು ದಹಿಸುವ ಮೂಲಕ ಉತ್ಸವ ಆಚರಿಸಲಾಗುತ್ತದೆ. ಶಿಷ್ಟರ ರಕ್ಷಣೆ, ದುಷ್ಟರ ಮರ್ಧನ ಎಂಬ ಆಶಯದಲ್ಲಿ ಈ ರಾಮಲೀಲಾ ನಡೆಯುತ್ತದೆ.ಪ್ರತಿ ವಿಜಯ ದಶಮಿಯಂದು ದಾಂಡೇಲಪ್ಪಾ ಜಾತ್ರೆಯೂ ನಡೆಯುತ್ತದೆ. ಇಲ್ಲಿನ ಉದ್ಯಮಗಳಲ್ಲಿ ಉದ್ಯೋಗಿಗಳಾಗಿ ಸೇರಿದ ಉತ್ತರ ಭಾರತದವರು ರಾಮಲೀಲಾ ಉತ್ಸವ ಆಚರಣೆ ಆರಂಭಿಸಿದ್ದು ಅದೀಗ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತಿದೆ.