ನಗರದಲ್ಲಿ ಎತ್ತ ನೋಡಿದರತ್ತ ಕಾಮಗಾರಿಗ‍ಳು, ಎಲ್ಲೆಂದರಲ್ಲಿ ಧೂಳೋ ಧೂಳು, ಗುಂಡಿ ಬಿದ್ದರಸ್ತೆಗಳು, ಬಾಯಿ ತೆರೆದ ಚರಂಡಿಗಳು, ನಡೆಯಲು ದಾರಿ ಇಲ್ಲದೆ ಪಾದಚಾರಿಗಳ ಸಂಕಟ, ಧೂಳಿನಿಂದಾಗಿ ವಾಹನ ಸವಾರರ ಪೀಕಲಾಟ...ಇದು ನಗರದ ಸದ್ಯದ ಸ್ಥಿತಿ.

ಉಮಾಶಂಕರ ಕಾರ್ಯ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಎತ್ತ ನೋಡಿದರತ್ತ ಕಾಮಗಾರಿಗ‍ಳು, ಎಲ್ಲೆಂದರಲ್ಲಿ ಧೂಳೋ ಧೂಳು, ಗುಂಡಿ ಬಿದ್ದರಸ್ತೆಗಳು, ಬಾಯಿ ತೆರೆದ ಚರಂಡಿಗಳು, ನಡೆಯಲು ದಾರಿ ಇಲ್ಲದೆ ಪಾದಚಾರಿಗಳ ಸಂಕಟ, ಧೂಳಿನಿಂದಾಗಿ ವಾಹನ ಸವಾರರ ಪೀಕಲಾಟ...ಇದು ನಗರದ ಸದ್ಯದ ಸ್ಥಿತಿ.

ನಗರದ ಮೆಜೆಸ್ಟಿಕ್ ಸುತ್ತಮುತ್ತ ರಸ್ತೆಗಳಲ್ಲಿ ಕಾಮಗಾರಿಗಳು ಆರಂಭವಾಗಿ ತಿಂಗಳುಗಳೇ ಕಳೆದಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಜಲ್ಲಿಕಲ್ಲುಗಳು, ರಸ್ತೆಗುಂಡಿಗಳ ಮಧ್ಯೆಯೇ ವಾಹನ ಸಂಚರಿಸುತ್ತಿವೆ. ಮಂದಗತಿ ಕಾಮಗಾರಿ ನಾಗರಿಕರ ಮೇಲೆ ನೇರ ಪರಿಣಾಮ ಬೀರುತ್ತಿದೆ. ನಗರದ ಓಕಳಿಪುರಂ ಅಂಡರ್ ಪಾಸ್ ಬಳಿ ಡಾಂಬರು ಹಾಕಲು ರಸ್ತೆ ಅಗೆದು ವಾರಗಳೇ ಕಳೆದಿದ್ದರೂ ಡಾಂಬರು ಹಾಕದೆ ಧೂಳು ಆಳೆತ್ತರ ಏಳುತ್ತಿದೆ. ಧೂಳು ಸೇವಿಸುತ್ತಲೇ ಜಿಬಿಎಗೆ ಹಿಡಿಶಾಪ ಹಾಕುತ್ತಾ ಜನರು ಸಾಗುತ್ತಿದ್ದಾರೆ. ಬೈಕ್‌ಗಳಲ್ಲಿ ಮಹಿಳೆಯರು, ಹಸುಗೂಸುಗಳನ್ನು ಕೂರಿಸಿಕೊಂಡರಂತೂ ಅವರ ಸ್ಥಿತಿ ಚಿಂತಾಜನಕ.

ನಗರದಲ್ಲಿ ಎಚ್1ಎನ್1 ಭೀತಿ, ಕೆಮ್ಮು, ನೆಗಡಿ, ಕಫ ಸೋಂಕು ಇದೆ. ಮಾಲಿನ್ಯ ರಹಿತ ಗಾಳಿ, ಹೊಗೆ ರಹಿತ ವಾತಾವರಣ ನಿರ್ಮಾಣ ಮಾಡಬೇಕಾದ ಜಿಬಿಎ ಕಾಮಗಾರಿಗಳ ಮೂಲಕ ಧೂಳಿನ ಪರಿಸ್ಥಿತಿಗೆ ದಾರಿ ಮಾಡಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ರೇಸ್ ಕೋರ್ಸ್ ರಸ್ತೆಯಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿ ಇನ್ನೂ ಮುಗಿದಿಲ್ಲ. ಜನಾರ್ಧನ ಹೋಟೆಲ್ ವೃತ್ತದಿಂದ ರೇಸ್ ಕೋರ್ಸ್ ಮುಖ್ಯದ್ವಾರದವರೆಗೆ ಒಂದು ಕಡೆ ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ಇದರಿಂದಾಗಿ ಶಿವಾನಂದ ವೃತ್ತ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರ ಮಂದಗತಿಯಲ್ಲಿ ಸಾಗಬೇಕಾಗಿದೆ. ಶೇಷಾದ್ರಿಪುರಂ ರಸ್ತೆಯಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿ, ಮೌರ್ಯ ವೃತ್ತದಿಂದ ರೇಸ್ ಕೋರ್ಸ್ ಮುಖ್ಯದ್ವಾರದವರೆಗೆ ಕೇಬಲ್ ಅಳವಡಿಕೆ, ಒಳಚರಂಡಿ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿವೆ.

ಸುಪ್ರೀಂಕೋರ್ಟ್ ಆದೇಶದಂತೆ ಕಾಮಗಾರಿ ಜಾಗದಲ್ಲಿ ಸೂಚನಾ ಫಲಕ, ಕಾಮಗಾರಿ ಹೆಸರು, ಗುತ್ತಿಗೆದಾರನ ಹೆಸರು, ವೆಚ್ಚದ ವಿವರಗಳ ನಾಮಫಲಕ ಹಾಕಬೇಕು. ಆದರೆ, ನಗರದೆಲ್ಲೆಡೆ ಎಲ್ಲಿಯೂ ಸೂಚನಾ ಫಲಕಗಳೂ ಇಲ್ಲ, ವಿವರಗಳನ್ನೂ ಹಾಕಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮಲೀನ ಗಾಳಿಯಿಂದ ಗರ್ಭಪಾತಕ್ಕೂ

ಕಾರಣವಾಗಬಹುದು: ಡಾ.ಪದ್ಮಿನಿ

ಮಲಿನ ಗಾಳಿ, ಧೂಳು ಸೇವಿಸಿದರೆ ಮಹಿಳೆಯರಿಗೆ ಶ್ವಾಸಕೋಶ ಖಾಯಿಲೆ, ಎದೆರೋಗಗಳ ಹೆಚ್ಚಳ, ಎಂಡೋ ಕ್ರೈನ್ ಡಿಸ್ರಪ್ಟರ್ಸ್ ನಿಂದ ಅಂಡಾಣು ಉತ್ಪತ್ತಿ ಕುಂಠಿತ, ಭ್ರೂಣದ ಮೇಲೆ ದುಷ್ಪರಿಣಾಮ, ಅನಾರೋಗ್ಯಕರ ಮಕ್ಕಳ ಜನನ, ಥೈರಾಯಿಡ್ ಹೆಚ್ಚಳ, ಹೃದಯರೋಗ, ನಾನ್ ಸ್ಮೋಕರ್ ಕ್ಯಾನ್ಸರ್‌ಗೂ ಕಾರಣವಾಗಬಹುದು. ಮಕ್ಕಳ ದೇಹದೊಳಗೆ ಪ್ರವೇಶಿಸಿದರೆ ಶ್ವಾಸಕೋಶ, ಹೃದಯ ಸಂಬಂಧಿ ಖಾಯಿಲೆಗೆ ಕಾರಣವಾಗಬಹುದು ಎಂದು ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಪದ್ಮಿನಿಪ್ರಸಾದ್ ಹೇಳುತ್ತಾರೆ.

4 ಸಾವಿರ ಕೋಟಿ ರು.ಕಾಮಗಾರಿ

ಜಿಬಿಎಯಿಂದ ಒಟ್ಟು 4000 ಕೋಟಿ ರು.ಕಾಮಗಾರಿ ಟೆಂಡರ್ ಆಗಿ ಕೆಲಸ ಆರಂಭಿಸಲಾಗಿದೆ. ಎಲ್ಲ ಕಡೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಬೇಕೆಂದು ಗುತ್ತಿಗೆದಾರರಿಗೆ ತಿಳಿಸಿದ್ದೇನೆ. 2000 ಕೋಟಿ ರು.ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಇದೂ ಸೇರಿದಂತೆ ನಗರದಲ್ಲಿ 6 6,000 ಕೋಟಿ ರು.ಕಾಮಗಾರಿಗಳು ನಡೆಯಲಿವೆ. ಇವೆಲ್ಲಾ ನಗರದ ಅಭಿವೃದ್ಧಿಗಾಗಿ. ಇದರೊಂದಿಗೆ ಬಿಡಬ್ಲ್ಯೂಎಸ್ಎಸ್‌ಬಿ ಕೂಡ ಕಾಮಗಾರಿ ನಡೆಸುತ್ತಿದೆ ಎಂದು ಜಿಬಿಎ ಆಯುಕ್ತ ಮಹೇಶ್ವರ ರಾವ್ ಕನ್ನಡಪ್ರಭಕ್ಕೆ ತಿಳಿಸಿದರು. ಎಲ್ಲೆಂದರಲ್ಲಿ ಕೇಬಲ್‌ಗಾಗಿ ರಸ್ತೆ ಅಗೆಯುವುದು ಕಂಡು ಬಂದಲ್ಲಿ ಫೋಟೋ, ವಿಡಿಯೋ ಸಹಿತ ತಮಗೆ ದೂರು ನೀಡಿದರೆ ಕೂಡಲೇ ಆ ಸಂಸ್ಥೆಯ ಪರವಾನಗಿಯನ್ನೇ ರದ್ದುಪಡಿಸುತ್ತೇನೆ. ಕೇಬಲ್ ಮಾಫಿಯಾಗೆ ಅವಕಾಶವೇ ಇಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದರು.