ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಲೋಕಸಭಾ ಚುನಾವಣೆಯ ಟಿಕೆಟ್‌ಗೆ ಸಂಬಂಧಿಸಿದಂತೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಬಳಿಕ ಮಾಜಿ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸದಸ್ಯ ಡಿ.ವಿ.ಸದಾನಂದಗೌಡರೂ ಅಸಮಾಧಾನಗೊಂಡಿದ್ದು, ಮಂಗಳವಾರ ತಮ್ಮ ಮುಂದಿನ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.
‘ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆ ಪಕ್ಷದ ನಾಯಕರು ನನ್ನನ್ನು ಸಂಪರ್ಕಿಸಿರುವುದು ನಿಜ. ಈ ಬಗ್ಗೆ ಕುಟುಂಬದವರೊಂದಿಗೆ ಚರ್ಚಿಸಿ ಮಂಗಳವಾರ ನನ್ನ ಅಂತರಾಳದ ವಿಚಾರವನ್ನು ತಿಳಿಸುತ್ತೇನೆ’ ಎಂದು ಸದಾನಂದಗೌಡರು ತಿಳಿಸಿರುವುದು ಕುತೂಹಲ ಮೂಡಿಸಿದೆ.
ಸೋಮವಾರ ತಮ್ಮ ಹುಟ್ಟುಹಬ್ಬದ ಅಂಗವಾಗಿ ಪಕ್ಷದ ಮುಖಂಡರು ಹಾಗೂ ಬೆಂಬಲಿಗರಿಂದ ಶುಭಹಾರೈಕೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ನನ್ನ ಹೆಸರು ಮಾತ್ರ ಬಂತು. ದೆಹಲಿ ಹಾಗೂ ಸ್ಥಳೀಯವಾಗಿ ಒಂದಷ್ಟು ವಿದ್ಯಮಾನ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ನಿಮಗೇ ಟಿಕೆಟ್ ಎಂದು ಹೇಳಿ ಕೊನೆಯ ಕ್ಷಣದಲ್ಲಿ ನನ್ನ ರಕ್ಷಣೆಗೆ ಬರಲಿಲ್ಲ ಎಂದು ಹೇಳಿದರು.
‘ರಾಜ್ಯದಲ್ಲಿ ನನಗೆ ಆಗಿರುವ ಅನ್ಯಾಯದ ಬಗ್ಗೆ ಕೆಲವೊಂದು ಮನದಾಳದ ವಿಚಾರಗಳನ್ನು ಹೇಳಿಕೊಳ್ಳಬೇಕಿದೆ. ಅದಕ್ಕಾಗಿ ನಾಳೆ (ಮಂಗಳವಾರ) ಸುದ್ದಿಗೋಷ್ಠಿ ಕರೆಯುತ್ತೇನೆ. ನಾಳೆ ಯಾವ ನಿರ್ಣಯ ಎಂದು ಈಗಲೇ ಹೇಳಿಬಿಟ್ಟರೆ, ನಾಳೆಗೆ ಏನೂ ಉಳಿಯೋಲ್ಲ.
ರಾಜಕೀಯದಲ್ಲಿ ಏರುಪೇರು, ಮುಜುಗರ ಸಹಜ. ಆದರೆ, ತಿಳಿದೂ ತಿಳಿದು ಹೀಗೆ ಮಾಡಿರುವುದು ಬೇಜಾರಾಗಿದೆ’ ಎಂದು ಸದಾನಂದಗೌಡ ಹೇಳಿದರು.
ಚುನಾವಣಾ ರಾಜಕಾರಣದಿಂದ ದೂರ ಉಳಿಯಬೇಕು ಎಂದುಕೊಂಡಿದ್ದೆ. ಆದರೆ, ನೀವೇ ನಿಲ್ಲಬೇಕು ಎಂದು ರಾಜ್ಯ ಬಿಜೆಪಿಯ ಎಲ್ಲಾ ಪ್ರಮುಖರು ಹೇಳಿ ಎಳೆದು ತಂದರು.
ಕೊನೆಯ ಹಂತದಲ್ಲಿ ರಕ್ಷಣೆಗೆ ಬರಲಿಲ್ಲ. ಚೂರು ಮುಜುಗರ ಮಾಡಿದ್ದಾರೆ. ಬಿಜೆಪಿ ಪಾರ್ಟಿ ವಿತ್ ಡಿಫರೆನ್ಸ್ ಎನ್ನಲು ಏನೂ ಉಳಿದಿಲ್ಲ. ರಾಜಕೀಯದಲ್ಲಿ ಏರುಪೇರು, ಮುಜುಗರ ಸಾಮಾನ್ಯ.
ನನ್ನ ಕುಟುಂಬದವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ. ಈ ಕುರಿತು ಮಂಗಳವಾರ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದರು.
ನನ್ನನ್ನು ಬೇರೆ ಬೇರೆಯವರು ಸಂಪರ್ಕಿಸಿದ್ದಾರೆ. ಬಿಜೆಪಿ ಪ್ರಮುಖರು ಕೂಡ ನನ್ನೊಂದಿಗೆ ಚರ್ಚಿಸಿದ್ದಾರೆ. ಭಾನುವಾರ ಕೂಡ ನಮ್ಮ ಪಕ್ಷದ ಪ್ರಮುಖ ಪದಾಧಿಕಾರಿ ಭೇಟಿ ಮಾಡಿ ಸಾಂತ್ವನ ಮಾಡಿದ್ದಾರೆ.
ದೆಹಲಿ ಸೇರಿದಂತೆ ವಿವಿಧಡೆ ಅನೇಕ ವಿದ್ಯಮಾನ ನಡೆಯುತ್ತಿದೆ. ಅಂತರಾಳದ ವಿಚಾರ ಎಲ್ಲರ ಮುಂದೆ ಹೇಳಬೇಕಿದೆ ಎಂದರು. ಪುತ್ರನಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಕೆ.ಎಸ್. ಈಶ್ವರಪ್ಪ ಅವರು ರೆಬೆಲ್ ಆಗಿರುವ ಕುರಿತ ಪತ್ರಕರ್ತರ ಪ್ರಶ್ನೆಗೆ, ಪಕ್ಷಕ್ಕಾಗಿ ದುಡಿದವರಿಗೆ ಬೇಸರವಾಗಿದೆ.
ಬೇಸರಗೊಂಡಿರುವ ಎಲ್ಲರೂ ಸೇರಿ ಹೈಕಮಾಂಡ್ ಬಳಿ ತೆರಳಿ ಮಾತನಾಡಿ ತೀರ್ಮಾನ ತೆಗೆದುಕೊಳ್ಳೋಣ ಎಂದು ಈಶ್ವರಪ್ಪನವರಿಗೆ ಹೇಳಿದ್ದೆ. ಆದರೆ, ಈಗ ಅವರದೇ ಆದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ರಾಜಕೀಯ ನಿವೃತ್ತಿ ಘೋಷಣೆ ಸಾಧ್ಯತೆ?
ಸದಾನಂದಗೌಡ ಕಾಂಗ್ರೆಸ್‌ಗೆ ಹೋಗುವ ಬದಲು ರಾಜಕೀಯದಿಂದಲೇ ನಿವೃತ್ತಿ ಘೋಷಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಕಳೆದ ಸುಮಾರು ಆರು ತಿಂಗಳ ಹಿಂದೆಯೇ ಗೌಡರು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದರು.
ಆದಾದ ಬಳಿಕ ಲೋಕಸಭಾ ಚುನಾವಣೆಯ ಕಾವು ಏರುತ್ತಿದ್ದಂತೆಯೇ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಉಪಮುಖ್ಯಮಂತ್ರಿಗಳಾದ ಆರ್.ಅಶೋಕ್ ಹಾಗೂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸದಾನಂದಗೌಡರ ನಿವಾಸಕ್ಕೆ ತೆರಳಿ ಮತ್ತೊಮ್ಮೆ ಸ್ಪರ್ಧಿಸಬೇಕು ಎಂಬ ಮನವಿ ಮಾಡಿದ್ದರು.
ವಾಸ್ತವವಾಗಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಹೊರಗಿನವರು ಬಂದು ಕಣಕ್ಕಿಳಿಯಬಹುದು ಎಂಬ ಆತಂಕದಿಂದ ಈ ನಾಯಕರು ಗೌಡರಿಗೆ ಒತ್ತಡ ಹೇರಿದ್ದರು.
ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರೂ ಗೌಡರ ಹೆಸರನ್ನೇ ಪ್ರಮುಖವಾಗಿ ಶಿಫಾರಸು ಮಾಡಿದ್ದರು. ಹೀಗಾಗಿ, ಸದಾನಂದಗೌಡರು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡರು.
ಆದರೆ, ಕೊನೆಯ ಹಂತದಲ್ಲಿ ಟಿಕೆಟ್ ತಪ್ಪಿ ಹೋಯಿತು. ಇದು ಅವರಲ್ಲಿ ತೀವ್ರ ಆಕ್ರೋಶ ಉಂಟು ಮಾಡಿದೆ ಎಂದು ಮೂಲಗಳು ತಿಳಿಸಿವೆ.