ಸಾರಾಂಶ
ವಾಸಿಗರ ಮೇಲೆ ಭಯೋತ್ಪಾದಕರು ನಡೆಸಿರುವ ದಾಳಿಯು ಆಘಾತಕಾರಿ
ಗಜೇಂದ್ರಗಡ: ಕಾಶ್ಮೀರದ ಪಹಲ್ಗಾಮ್ ಸಮೀಪದಲ್ಲಿರುವ ಪ್ರಖ್ಯಾತ ಪ್ರವಾಸಿತಾಣ ಬೈಸರನ್ ಕಣಿವೆಯಲ್ಲಿ ಮಂಗಳವಾರ ಶಿವಮೊಗ್ಗದ ಮಂಜುನಾಥ್ ಹಾಗೂ ಬೆಂಗಳೂರಿನ ಭರತ್ ಭೂಷಣ್ ಸೇರಿದಂತೆ ೨೮ ಜನ ಪ್ರವಾಸಿಗರನ್ನು ಬಲಿ ಪಡೆದಿರುವ ಭಯೋತ್ಪಾದಕರ ಪೈಶಾಚಿಕ ಕ್ರೌರ್ಯ ಖಂಡನಾರ್ಹ ಎಂದು ಡಿವೈಎಫ್‌ಐ ಜಿಲ್ಲಾ ಮುಖಂಡ ದಾವಲಸಾಬ್ ತಾಳಿಕೋಟಿ ಹೇಳಿದರು.
ಈ ಕುರಿತು ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿರುವ ದಾಳಿಯು ಆಘಾತಕಾರಿ.ಅಮಾಯಕರ ಮೇಲೆ ಹೀನ ದಾಳಿಗೈದು ಅಮೂಲ್ಯ ಜೀವ ಕೊಲೆಗೈದ ಅಪರಾಧಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಜಮ್ಮು ಕಾಶ್ಮೀರ ಜನರ ಸಮಸ್ಯೆಗಳಿಗೆ ರಾಜಕೀಯ ಪರಿಹಾರ ಕಂಡುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು. ಹೃದಯ ವಿದ್ರಾವಕ ಘಟನೆಯಲ್ಲಿ ಮಡಿದ ಕುಟುಂಬಗಳಿಗೆ ಡಿವೈಎಫ್‌ಐ ಸಂಘಟನೆ ಸಂತಾಪ ಸಲ್ಲಿಸುತ್ತದೆ.ರಾಷ್ಟ್ರದ ಭದ್ರತೆ ಅತ್ಯಂತ ಪ್ರಮುಖವಾಗಿದೆ. ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದಲ್ಲಿ ಸಹಜ ಸ್ಥಿತಿಯಿದೆ ಎಂದು ಹೇಳುತ್ತಿದೆ. ಆದರೆ, ವಾಸ್ತವ ಪರಿಸ್ಥಿತಿಯಲ್ಲಿ ಅಲ್ಲಿನ ನಿವಾಸಿಗಳು, ವಲಸೆ ಕಾರ್ಮಿಕರು ಹಾಗೂ ಪ್ರವಾಸಿಗರ ಮೇಲೆ ದಾಳಿಗಳು ನಡೆಯುತ್ತಿವೆ. ಆದ್ದರಿಂದ ಕೇಂದ್ರ ಸರ್ಕಾರ ಈಗಲಾದರೂ ಜಮ್ಮು ಕಾಶ್ಮೀರದಲ್ಲಿ ಸಹಜ ಸ್ಥಿತಿ ನೆಲೆಸಲು ಸೂಕ್ತ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.
ಹಿಂಸೆಯಿಂದ ಎಂದಿಗೂ ನಮ್ಮ ದೇಶದ ಒಗ್ಗಟ್ಟು,ಶಾಂತಿ, ಸಾಮರಸ್ಯ ಒಡೆದು ಹಾಕಲು ಸಾಧ್ಯವಿಲ್ಲ. ದೇಶದ ಐಕ್ಯತೆ, ಸೌಹಾರ್ದತೆಗೆ ಕಂಟಕವಾಗಿರುವ ಈ ಭಯೋತ್ಪಾದನೆ ಪಿಡುಗಿನ ವಿರುದ್ಧ ದೇಶದ ಜನತೆ ಒಟ್ಟಾಗಿ ನಿಲ್ಲುವುದು ಅಗತ್ಯವಿದೆ. ಭಯೋತ್ಪಾದನೆ ನಿರ್ಮೂಲನೆಗೊಳಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.