ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಮರಣಶಯ್ಯೆಯಲ್ಲಿ ಇರುವ ರೋಗಿಗಳಿಗೆ ರಾಜ್ಯದಲ್ಲಿ ಗೌರವಯುತ ಸಾವಿನ ಹಕ್ಕು!

| N/A | Published : Feb 01 2025, 01:30 AM IST / Updated: Feb 01 2025, 05:35 AM IST

Vidhan soudha
ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಮರಣಶಯ್ಯೆಯಲ್ಲಿ ಇರುವ ರೋಗಿಗಳಿಗೆ ರಾಜ್ಯದಲ್ಲಿ ಗೌರವಯುತ ಸಾವಿನ ಹಕ್ಕು!
Share this Article
  • FB
  • TW
  • Linkdin
  • Email

ಸಾರಾಂಶ

ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಯಾವುದೇ ಚಿಕಿತ್ಸೆ ನೀಡಿದರೂ ಗುಣಮುಖರಾಗಲು ಸಾಧ್ಯವೇ ಇಲ್ಲದ ರೋಗಿಗಳಿಗೆ ಘನತೆಯಿಂದ ಸಾಯುವ ಹಕ್ಕನ್ನು ನೀಡುವ ನಿಯಮಗಳನ್ನು ಕರ್ನಾಟಕದಲ್ಲೂ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಆದೇಶ ಹೊರಡಿಸಿದೆ.

 ಬೆಂಗಳೂರು : ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಯಾವುದೇ ಚಿಕಿತ್ಸೆ ನೀಡಿದರೂ ಗುಣಮುಖರಾಗಲು ಸಾಧ್ಯವೇ ಇಲ್ಲದ ರೋಗಿಗಳಿಗೆ ಘನತೆಯಿಂದ ಸಾಯುವ ಹಕ್ಕನ್ನು ನೀಡುವ ನಿಯಮಗಳನ್ನು ಕರ್ನಾಟಕದಲ್ಲೂ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಆದೇಶ ಹೊರಡಿಸಿದೆ.

ಸುಪ್ರೀಂಕೋರ್ಟ್‌ ಆದೇಶದಂತೆ ಕರ್ನಾಟಕದಲ್ಲಿ ಈ ಐತಿಹಾಸಿಕ ಕಾನೂನು ಜಾರಿ ಮಾಡಲಾಗಿದ್ದು, ಈ ಸಂಬಂಧ ಬುಧವಾರ ಆರೋಗ್ಯಇಲಾಖೆ ಆದೇಶ ಮಾಡಿದೆ.

ಸುಪ್ರೀಂ ಕೋರ್ಟ್‌ ಆದೇಶದನ್ವಯ ಚಿಕಿತ್ಸೆಯಿಂದ ಪ್ರಯೋಜನವಾಗದ, ಯಾವುದೇ ರೀತಿಯಲ್ಲೂ ಬದುಕಿ ಉಳಿಯಲಾಗದ ಹಾಗೂ ಕೋಮಾ ಸ್ಥಿತಿಯಲ್ಲಿರುವ ರೋಗಿಗೆ ಘನತೆಯಿಂದ ಸಾಯುವ ಹಕ್ಕು ನೀಡಲು ಅವಕಾಶ ಕಲ್ಪಿಸಲಾಗಿದೆ. ಇದರಡಿ ಗುಣವಾಗುವ ಯಾವುದೇ ಸಾಧ್ಯತೆಯಿಲ್ಲದಿದ್ದಾಗ ವೆಂಟಿಲೇಟರ್‌ ಅಥವಾ ಲೈಫ್‌ ಸಪೋರ್ಟ್ ತೆಗೆಯಲು ‘ಡಬ್ಲ್ಯೂಎಲ್‌ಎಸ್‌ಟಿ’ (ವಿತ್‌ ಡ್ರಾ ಆರ್‌ ವಿತ್‌ಹೆಲ್ಡ್‌ ಲೈಫ್‌ಸಸ್ಟೈನಿಂಗ್ ಟ್ರೀಟ್‌ಮೆಂಟ್‌) ಹೆಸರಿನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಹೇಗಿರಲಿದೆ ಪ್ರಕ್ರಿಯೆ?:

ಗಂಭೀರವಾದ ಮತ್ತು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಯ ಕುಟುಂಬಸ್ಥರ ಮನವಿ ಮೇರೆಗೆ ತಜ್ಞರ ವೈದ್ಯರ ತಂಡ ಕಾರ್ಯ ನಿರ್ವಹಿಸಬೇಕು. ಇದಕ್ಕಾಗಿ ತಜ್ಞ ವೈದ್ಯರುಳ್ಳ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಎರಡು ಬೋರ್ಡ್‌ ನೇಮಕ ಮಾಡಲಾಗುತ್ತದೆ. ಪ್ರಾಥಮಿಕ ಬೋರ್ಡ್‌ನಲ್ಲಿ ಮೂವರು ವೈದ್ಯರು ಇರುತ್ತಾರೆ. ದ್ವಿತೀಯ ಬೋರ್ಡ್​​​ನಲ್ಲಿ ಸಹ ಮೂವರು ವೈದ್ಯರು ಇರಲಿದ್ದಾರೆ. ಈ ಪೈಕಿ ಒಬ್ಬರು ಸರ್ಕಾರಿ ವೈದ್ಯರಾಗಿದ್ದು ಜಿಲ್ಲಾ ಮುಖ್ಯ ಆರೋಗ್ಯಾಧಿಕಾರಿಯಿಂದ ನೇಮಕವಾಗಿರುತ್ತಾರೆ.

ದಯಾಮರಣದ ಮನವಿಯನ್ನು ಮೊದಲು ಪ್ರಾಥಮಿಕ ಬೋರ್ಡ್‌ ಪರಿಶೀಲಿಸುತ್ತದೆ. ನಂತರ ಆ ವರದಿಯನ್ನು ದ್ವಿತೀಯ ಬೋರ್ಡ್ ಪರಿಶೀಲನೆ ನಡೆಸುತ್ತದೆ. ಎರಡೂ ಮಂಡಳಿಗಳು ನಿರ್ಧರಿಸಿದ ಬಳಿಕ ರೋಗಿಯ ಹತ್ತಿರ ಸಂಬಂಧಿಯ ಅನುಮತಿ ಪಡೆಯಲಾಗುತ್ತದೆ. ಮಂಡಳಿಯ ತೀರ್ಮಾನವನ್ನು ಅನುಷ್ಠಾನಕ್ಕೆ ಮೊದಲು ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಲಯ (ಜೆಎಂಎಫ್‌ಸಿ)ಕ್ಕೆ ಕಳುಹಿಸಿ ಅನುಮತಿ ಪಡೆಯಬೇಕು. ಬಳಿಕ ಜೀವರಕ್ಷಕ ವ್ಯವಸ್ಥೆ ತೆಗೆಯಬೇಕು. ಈ ನಡುವೆ ಪ್ರತಿಯನ್ನು ದಾಖಲೆ ನಿರ್ವಹಣೆಗಾಗಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರಿಗೂ ಕಳುಹಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಇಚ್ಛಾಪತ್ರ (ಎಂಎಡಿ) ಬರೆಯಲೂ ಅವಕಾಶ:

ಪ್ರಸ್ತುತ ಆರೋಗ್ಯವಂತರಾಗಿರುವ ವ್ಯಕ್ತಿಗಳು ಸಹ ಮುಂದೆ ತಾವು ಗಂಭೀರ ಹಾಗೂ ಗುಣಮುಖರಾಗಲು ಸಾಧ್ಯವಿಲ್ಲದ ಅನಾರೋಗ್ಯಕ್ಕೆ ತುತ್ತಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಚಿಕಿತ್ಸೆ ಮುಂದುವರೆಸಬೇಕೇ ಅಥವಾ ಕೈ ಬಿಡಬೇಕೇ ಎಂಬ ಬಗ್ಗೆ ತೀರ್ಮಾನಿಸಲು ಇಬ್ಬರು ವ್ಯಕ್ತಿಗಳಿಗೆ ಅಧಿಕಾರ ನೀಡಿ ಅಡ್ವಾನ್ಸ್‌ ಮೆಡಿಕಲ್‌ ಡೈರೆಕ್ಟಿವ್‌ (ಎಎಂಡಿ) ಹೆಸರಿನಲ್ಲಿ ಇಚ್ಛಾ ಪ್ರಮಾಣಪತ್ರ ನೀಡಲೂ ನಿಯಮಗಳಲ್ಲಿ ಅವಕಾಶ ನೀಡಲಾಗಿದೆ.

- ಐತಿಹಾಸಿಕ ಕಾನೂನು ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ- ಜೀವಂತ ವ್ಯಕ್ತಿಗಳಿಗೂ ಇಚ್ಛಾಮರಣ ಪತ್ರ ಅವಕಾಶ

ಅನೇಕ ಕುಟುಂಬಗಳಿಗೆ ಆದೇಶದಿಂದ ಅನುಕೂಲ

ಚಿಕಿತ್ಸೆಯಿಂದ ಜೀವ ಉಳಿಸಲು ಸಾಧ್ಯವಿಲ್ಲ ಎಂಬುದನ್ನು ದೃಢೀಕರಿಸಿದ ನಂತರ ಘನತೆಯಿಂದ ಸಾಯುವ ಅವಕಾಶವನ್ನು ಈ ಕಾನೂನು ನೀಡುತ್ತದೆ. ಇದರಿಂದ ಅನೇಕ ಕುಟುಂಬಗಳು ಮತ್ತು ವ್ಯಕ್ತಿಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಗೌರವಯುತವಾದ ಸಾವು ಬಯಸುವವರಿಗೂ ಅನುಕೂಲ. - ದಿನೇಶ್ ಗುಂಡೂರಾವ್‌, ಆರೋಗ್ಯ ಸಚಿವ