ಡಿವೈಎಸ್ಪಿ ಶಂಕರಗೌಡ ಮುಡಿಗೆ ಉತ್ಕೃಷ್ಟ ತನಿಖಾ ಪುರಸ್ಕಾರ

| Published : Sep 02 2025, 01:00 AM IST

ಡಿವೈಎಸ್ಪಿ ಶಂಕರಗೌಡ ಮುಡಿಗೆ ಉತ್ಕೃಷ್ಟ ತನಿಖಾ ಪುರಸ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಕೊಲೆ, ಸುಲಿಗೆ, ರೇಪ್‌, ಅಪಘಾದಂತಹ ಘಟನೆಗಳಲ್ಲಿ ನಿಷ್ಪಕ್ಷಪಾತ ಪೊಲೀಸ್‌ ಇನ್ವೆಸ್ಟಿಗೇಶನ್‌ ನಡೆದಾಗಷ್ಟೇ ಅಪರಾಧಿಗಳ ಹೆಡಮುರಿ ಕಟ್ಟಲು ಸಾಧ್ಯ ಅನ್ನೋದ್ರಲ್ಲಿ ದೂಸ್ರಾ ಮಾತಿಲ್ಲ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಕೊಲೆ, ಸುಲಿಗೆ, ರೇಪ್‌, ಅಪಘಾದಂತಹ ಘಟನೆಗಳಲ್ಲಿ ನಿಷ್ಪಕ್ಷಪಾತ ಪೊಲೀಸ್‌ ಇನ್ವೆಸ್ಟಿಗೇಶನ್‌ ನಡೆದಾಗಷ್ಟೇ ಅಪರಾಧಿಗಳ ಹೆಡಮುರಿ ಕಟ್ಟಲು ಸಾಧ್ಯ ಅನ್ನೋದ್ರಲ್ಲಿ ದೂಸ್ರಾ ಮಾತಿಲ್ಲ.

ಪೊಲೀಸಿಂಗ್‌ನಲ್ಲಿರುವ ಈ ತನಿಖಾಸ್ತ್ರವನ್ನ ತಮ್ಮ ಸುದೀರ್ಘ ಎರಡೂವರೆ ದಶಕಗಳ ಪೊಲೀಸ್‌ ಕೆಲಸದಲ್ಲಿ ಜಾಣತನ ಬಳಸುತ್ತ ಹಂತಕರು, ಕಾಮುಕರು, ಸ್ಕ್ಯಾಂ ಮಾಡುವವರು, ಬೇಕಾಬಿಟ್ಟಿ ವಾಹನ ಚಾಲಕರಾದಿಯಾಗಿ ಹಲವರನ್ನು ಕಂಬಿ ಎಣಿಸುವಂತೆ ಮಾಡಿರುವ ಕಲಬುರಗಿ ಪೊಲೀಸ್‌ ಅಧಿಕಾರಿ ಶಂಕರಗೌಡ ಪಾಟೀಲರು ಗೃಹಮಂತ್ರಿ ಉತ್ಕೃಷ್ಟ ತನಿಖಾ ಪುರಸ್ಕಾರ (2022)ಕ್ಕೆ ಪಾತ್ರರಾಗಿ ಬಿಸಿಲೂರಿನ ಖಾಕಿ ಗೌರವ ಹೆಚ್ಚಿಸಿದ್ದಾರೆ.

ಪ್ರಸ್ತುತ ಶಹಾಬಾದ್‌ ಡಿವೈಎಸ್ಪಿಯಾಗಿರುವ ಶಂಕರಗೌಡ ಅವರನ್ನು ಕೇಂದ್ರ ಗೃಹಮಂತ್ರಿಯವರ ಶಹಬಾಸಗಿರಿ ಪಡೆಯುವಂತಾಗಲು ಅವರ ಸೂಕ್ಷ್ಮಗ್ರಾಹಿ ತನಿಖಾ ಶೈಲಿಯೇ ಕಾರಣ ಎನ್ನುವಲ್ಲಿ ಎರಡು ಮಾತಿಲ್ಲ.

ಶಂಕರಗೌಡ ಪಾಟೀಲರು ಸಿಐಡಿಯಲ್ಲಿ ಡಿವೈಎಸ್ಪಿಯಾಗಿದ್ದ ವೇಳೆಯಲ್ಲೇ ಕೇಂದ್ರದ ಗೃಹ ಸಚಿವರ ಉತ್ಕೃಷ್ಟ ತನಿಖಾ ಪುರಸ್ಕಾರ 2022ರಲ್ಲೇ ಇವರನ್ನರಸಿ ಬಂದಿತ್ತು.

2001ರಲ್ಲಿ ಪಿಎಸ್‌ಐ ಆಗಿ ಕಲಬುರಗಿ ನಗರದ ಬ್ರಹ್ಮಪೂರ ಠಾಣೆಯಿಂದಲೇ ತಮ್ಮ ವೃತ್ತಿ ಆರಂಭಿಸಿದ್ದ ಶಂಕರಗೌಡ ಪಾಟೀಲರು, ಇದೀಗ ಕಲಬುರಗಿಯಲ್ಲೇ ಡಿವೈಎಸ್ಪಿ ಯಾಗಿ ಕೆಲಸದಲ್ಲಿದ್ದಾರೆ. ಸುಲೇಪೇಟ್‌, ಸೇಡಂನಲ್ಲಿದ್ದು ನಂತರ ಇನ್ಸಪೆಕ್ಟರ್‌ ಹುದ್ದೆಗೆ ಬಡ್ತಿ ಪಡೆದು ಯಾದಗಿರಿ, ಬೆಳಗಾವಿಯಲ್ಲೂ ಸೇವೆ ಸಲ್ಲಿಸಿದರು. 2021ರಲ್ಲಿ ಡಿವೈಎಸ್ಪಿ ಹುದ್ದೆಗೆ ಪದೋನ್ನತಿ ಹೊಂದಿ ಕಲಬುರಗಿಯಲ್ಲೇ ಸಿಐಡಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸಿದ್ದ ಶಂಕರಗೌಡರು ಈ ಅವಧಿಯಲ್ಲಿ ಇಡೀ ದೇಶದ ಗಮನ ಸೆಳೆದಿದ್ದ ಪಿಎಸ್‌ಐ ನೇಮಕಾತಿ ಹಗರಣವನ್ನೇ ತಮ್ಮ ತನಿಖೆಯ ಮೂಲಕ ಜಾಲಾಡಿ ಅದಕ್ಕೊಂದು ತಾರ್ಕಿಕ ಅಂತ್ಯ ನೀಡಿದವರು.

ವೈಜ್ಞಾನಿಕ, ತಾಂತ್ರಿಕ ಸಾಕ್ಷಿ ಪುರಾವಣೆ ಕಲೆಹಾಕಿ ನಾವು ತನಿಖೆಗೆ ಮುಂದಾದಾಗ ಆರೋಪಿ ಹೆಡಮುರಿ ಕಟ್ಟೋದು ಸುಲಭ. ಜಾಣತನದಿಂದ ತನಿಖೆ ನಡೆಸಬೇಕೇ ಹೌರತು ಅಲ್ಲಿ ಯಾವುದೇ ಕಿಂಚಿತ್‌ ಅಲಕ್ಷತನವೂ ಆಗಬಾರದು. ಅಪಘಾತ ಪ್ರಕರಣಗಳಲ್ಲಿಯೂ ತನಿಖೆ ಚುರುಕಾಗಿ, ಜಾಣತನದಿಂದ ನಡೆಸಿದ್ದೇ ಆದಲ್ಲಿ ಅಪಘಾತ ಮಾಡಿರುವ ಆರೋಪಿಗಳಿಗೂ ಶಿಕ್ಷೆಯಾಗುವಂತೆ ಮಾಡಬಹುದು, ಇಂತಹ ಅನೇಕ ಪ್ರಕರಣಗಳಲ್ಲಿ ಶಿಕ್ಷೆಯಾಗುವಂತೆ ಮಾಡಿರುವೆ. ನನಗೆ ಸಿಕ್ಕಿರುವ ಪುರಸ್ಕಾರ ನನ್ನ ಜತೆ ಹಗಲಿರುಳು ಕೆಲಸ ಮಾಡಿರುವ ಇಡೀ ತನಿಖಾ ತಂಡಕ್ಕೂ ಸಲ್ಲುತ್ತದೆ.

ಶಂಕರಗೌಡ ಪಾಟೀಲ್‌, ಡಿವೈಎಸ್ಪಿ, ಶಹಾಬಾದ್‌, ಕಲಬುರಗಿ ಜಿಲ್ಲೆ

ಅರಪಾಧಿಗಳ ಹೆಡಮುರಿ ಕಟ್ಟಿದ್ದ ಡಿವೈಎಸ್‌ಪಿಪ್ರಸ್ತುತ ಕಲಬುರಗಿ ಜಿಲ್ಲೆಯ ಶಹಾಬಾದ್‌ ಡಿವೈಎಸ್ಪಿಯಾಗಿರುವ ಶಂಕರಗೌಡ ಪಾಟೀಲರು ತನಿಖೆಗೇ ಸವಾಲೆಸೆದಂತಹ ಹಲವು ಕ್ಲಿಷ್ಟಕರ ಪ್ರಕರಣಗಳಲ್ಲಿ ಅರಪಾಧಿಗಳ ಹೆಜ್ಜೆಜಾಡು ಹಿಡಿದು ಹೊಡಮುರಿ ಕಟ್ಟಿದ್ದರು. ಲಾಕ್‌ಡೌನ್‌ನಲ್ಲಿ ಕಮಲಾಪುರದ ದಿನಸಿ ತಾಂಡಾ ಬೆಚ್ಚಿ ಬೀಳಿಸಿದ್ದ ದಂಪತಿ ಡಬ್ಬಲ್‌ ಮರ್ಡರ್‌ ರಹಸ್ಯ ಭೇದಿಸಿ ಗಮನ ಸೆಳೆದಿದ್ದ ಗೌಡರು, ಮಹಾಗಾಂವ್‌ನ ತಡಕಲ್‌ನಲ್ಲಿಯೂ ನಡೆದಿದ್ದ ಜೋಡಿ ಕೊಲೆ ರಹಸ್ಯ ಭೇದಿಸಿ ಹಂತಕರನ್ನು ಕಂಬಿ ಹಿಂದೆ ತಳ್ಳಿದರು. ಕ್ಲಿಷ್ಟಕರ 51 ಅಪರಾಧ ಪ್ರಕರಣಗಳಲ್ಲಿ ಗೌಡರ ಜಾಣತನದ ತನಿಖೆಯಿಂದಾಗಿ ಅನೇಕರು ಜೀವಾವಧಿ ಶಿಕ್ಷೆಗೊಳಗಾಗಿದ್ದಾರೆ. ಅಪಘಾತ ಪ್ರಕರಣದಲ್ಲಿಯೂ ವೈಜ್ಞಾನಿಕ, ತಾಂತ್ರಿಕ ಸಾಕ್ಷಾಧಾರಗಳ ತನಿಖೆ ನಡೆದಲ್ಲಿ ತಪ್ಪು ಮಾಡಿದವರಿಗೆ ಕಂಬಿ ಹಿಂದೆ ತಳ್ಳಬಹುದು ಎಂದು ಅನೇಕ ಅಪಘಾತ ಕರಣಗಳಲ್ಲಿಯೂ ಗೌಡರು ತನಿಖಾ ಪರತೆ ಮರೆದಿದ್ದಾರೆ. ಅದರಲ್ಲೂ 2008ರಲ್ಲಿ ನಂದೂರ ತಾಂಡಾದ ಮದುವೆ ದಿಬ್ಬಣದ ಲಾರಿ ಮುಗುಚಿ ಬಿದ್ದು 14 ಜನರ ಬಲಿ ಪಡೆದ ಅಪಘಾತ ಪ್ರಕರಣದಲ್ಲಿ ಚಾಲಕ ಪಾನಮತ್ತನಾಗಿದ್ದೇ ಅಪಘಾತಕ್ಕೆ ಕಾರಣವೆಂದು ಸಾಬೀತುಪಡಿಸಿದ್ದ ಕಾರಣದಿಂದಾಗಿ ಚಾಲಕನಿಗೆ ಶಿಕ್ಷೆಯಾಗಿದ್ದು ಗಮನಾರ್ಹ.

ಬಾಲಕಿ ರೇಪ್‌-ಮರ್ಡರ್‌- 21 ದಿನದಲ್ಲಿ ಆರೋಪಪಟ್ಟಿ ಸಲ್ಲಿಕೆ2019ರಲ್ಲಿ ಚಿಂಚೋಳಿಯ ಸುಲೇಪೇಟ್‌ ಠಾಣಾ ವ್ಯಾಪ್ತಿಯ ಯಾಗಾಪೂರ ಗ್ರಾಮದಲ್ಲಿ ಬಾಲಕಿಯ ರೇಪ್‌ ಮಾಡಿ ಕೊಲೆ ಮಾಡಿರುವ ಭೀಮತ್ಸ್‌ ಘಟನೆಯ ತನಿಖೆ ನಡೆಸಿದ್ದ ಶಂಕರಗೌಡರು ಆರೋಪಿಯನ್ನು ಬಂಧಿಸಿದ್ದಲ್ಲದೆ ನಿರಂತರ ಸಾಕ್ಷಿ, ಪುರಾವೆ ಕಲೆ ಹಾಕಿದ್ದಲ್ಲದೆ 21 ದಿನದಲ್ಲೇ ಆರೋಪಪಟ್ಟಿ ಸಲ್ಲಿಸಿ ಮುಂದೆ 101 ದಿನದಲ್ಲೇ ಪ್ರಕರಣದಲ್ಲಿ ನ್ಯಾಯಾಲಯದಿಂದ ತೀರ್ಪು ಹೊರಬಿದ್ದು, ಕಾಮುಕನಿಗೆ ಶಿಕ್ಷೆಯಾಗುವಂತೆ ಮಾಡಿದ್ದು, ಶಂಕರಗೌಡರ ತನಿಖಾಪರತೆಗೆ ಕನ್ನಡಿ. ಗೌಡರ ತನಿಖೆಯ ವೇಗ, ಜಾಣ್ಮೆ, ಚುರುಕತನ ಪರಿಗಣಿಸಿಯೇ ಸಿಎಂ ಮೆಡಲ್‌ ಸೇರಿ ಹಲವು ಪುರಸ್ಕಾರ ಇವರಿಗೆ ಸಂದಿವೆ.