ಸಾರಾಂಶ
ಬೆಂಗಳೂರು : ಕಳೆದ ಸೆಪ್ಟಂಬರ್‌ನಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಇ ಖಾತಾ ವಿತರಣೆ ಆರಂಭಗೊಂಡಿದ್ದು, ಈ ವರೆಗೆ 5,612 ಆಸ್ತಿ ಮಾಲೀಕರು ಅಂತಿಮ ಇ ಖಾತಾ ಪಡೆದುಕೊಂಡಿದ್ದಾರೆ.
ಈವರೆಗೆ ಇ-ಖಾತಾ ವೆಬ್‌ಸೈಟ್‌ಗೆ 53 ಲಕ್ಷ ಮಂದಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. 6 ಲಕ್ಷ ಮಂದಿ ಕರಡು ಇ-ಖಾತಾ ಡೌನ್ಲೋಡ್ ಮಾಡಿಕೊಂಡು ಪರಿಶೀಲನೆ ಮಾಡಿ ಅಂತಿಮ ಇ-ಖಾತಾಕ್ಕೆ ಆನ್ ಲೈನ್ ಮೂಲಕ 30 ಸಾವಿರ ಅರ್ಜಿ ಸಲ್ಲಿಕೆಯಾಗಿದ್ದು, 5612 ಆಸ್ತಿ ಮಾಲೀಕರು ಅಂತಿಮ ಇ-ಖಾತಾ ಡೌನ್ಲೋಡ್ ಮಾಡಿಕೊಂಡಿದ್ದಾರೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.
ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿಗಳನ್ನು ತಕ್ಷಣವೇ ಮಾರಾಟ ಮಾಡಲು ಅಥವಾ ವರ್ಗಾಯಿಸಲು ಅಗತ್ಯವಿಲ್ಲದ ನಾಗರಿಕರು ಅಂತಿಮ ಇಖಾತಾ ಪಡೆಯಲು ಆತುರ ಅಗತ್ಯವಿಲ್ಲ. ಕರಡು ಇ-ಖಾತಾವನ್ನು ಡೌನ್ಲೋಡ್ ಮಾಡಿ, ನಂತರ ನಿಮ್ಮ ಅನುಕೂಲಕರ ಸಮಯದಲ್ಲಿ ಅಂತಿಮ ಇ-ಖಾತಾ ಪಡೆಯಲು ಹೆಚ್ಚುವರಿ ಮಾಹಿತಿಯನ್ನು ಆನ್ ಲೈನ್‌ನಲ್ಲಿ ಸಲ್ಲಿಸಬಹುದಾಗಿದೆ.
ಅಂತಿಮ ಇ ಖಾತಾ ಪಡೆಯಲು ಪಾಲಿಕೆಯ ಸಹಾಯವಾಣಿ 1533 ಕರೆ ಮಾಡಬಹುದಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ತಿಳಿಸುವುದಕ್ಕೆ ಯೂಟ್ಯೂಬ್‌ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ (https://youtu.be/GL8CWsdn3wo?si=Zu_EMs3SCw5-wQwT ಹಾಗೂ https://youtu.be/JR3BxET46po?si=jDoSKqy2V1IFUpf6) ವಿಡಿಯೋ ವೀಕ್ಷಣೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಆಸ್ತಿ ನೋಂದಾಯಿತ ಡೀಡ್ ಸಂಖ್ಯೆ, ಪಾಲಿಕೆಯ ಆಸ್ತಿ ತೆರಿಗೆ ಎಸ್ಎಂಎಸ್ ಸಂಖ್ಯೆ, ಆಧಾರ್ ಸಂಖ್ಯೆ, ಬೆಸ್ಕಾಂ ಬಿಲ್‌ನ 10 ಅಂಕಿಯ ಸಂಖ್ಯೆ ಮಾತ್ರ ನಮೂದಿಸಬೇಕಾಗಿದೆ. ನಿವೇಶನ ಆಸ್ತಿ ಬೆಸ್ಕಾಂ ಸಂಖ್ಯೆ ಅಗತ್ಯವಿಲ್ಲ. ಪಾಲಿಕೆಯ ದಾಖಲೆ ಪ್ರಕಾರ ಎ-ಖಾತಾ ಅಥವಾ ಬಿ-ಖಾತಾ ಆಸ್ತಿ ಮಾಲೀಕರು ಇ ಖಾತಾ ಪಡೆಯಬಹುದಾಗಿದೆ.
ಇ ಖಾತಾ ಪಡೆಯುವುದಕ್ಕೆ ಅರ್ಜಿ ಸಲ್ಲಿಸುವುದಕ್ಕೆ ನಗರದ ಬೆಂಗಳೂರು ಒನ್ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಆಧಾರ್ ಕಾರ್ಡ್ ಇಲ್ಲದವರು ಚಾಲನಾ ಪರವಾನಗಿ ಅಥವಾ ಪಾಸ್‌ಪೋರ್ಟ್ ಅಥವಾ ಮತದಾನ ಗುರುತಿನ ಚೀಟಿಯೊಂದಿಗೆ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಬಿಬಿಎಂಪಿ ತಿಳಿಸಿದೆ.