ಉದ್ಯೋಗ ಖಾತ್ರಿ ಹಾಜರಾತಿಗೆ ಇ-ಕೆವೈಸಿ

| Published : Sep 14 2025, 01:04 AM IST

ಸಾರಾಂಶ

ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪುರುಷರೂ ಸೀರೆಯುಟ್ಟುಕೊಂಡು ತಲೆ ಎಣಿಕೆ ಮೂಲಕ ಹಾಜರಾತಿ ನೀಡುತ್ತಿರುವುದಕ್ಕೆ ಇ-ಕೆವೈಸಿ ಮೂಲಕ ಬ್ರೇಕ್ ಬೀಳಲಿದೆ.

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪುರುಷರೂ ಸೀರೆಯುಟ್ಟುಕೊಂಡು ತಲೆ ಎಣಿಕೆ ಮೂಲಕ ಹಾಜರಾತಿ ನೀಡುತ್ತಿರುವುದಕ್ಕೆ ಇ-ಕೆವೈಸಿ ಮೂಲಕ ಬ್ರೇಕ್ ಬೀಳಲಿದೆ. ಖುದ್ದು ಹಾಜರಾತಿ ಪರಿಶೀಲನೆಗೆ ಪ್ರಾಯೋಗಿಕವಾಗಿ ಕೊಪ್ಪಳ ಸೇರಿದಂತೆ ತುಮಕೂರು, ಹಾವೇರಿ, ಕೋಲಾರ, ಹಾಸನದಲ್ಲಿ ಇ-ಕೆವೈಸಿ ಜಾರಿಗೊಳಿಸಲು ಮುಂದಾಗಿದ್ದು ಸೆ.30ರೊಳಗೆ ನೋಂದಣಿಗೆ ಅವಕಾಶ ನೀಡಲಾಗಿದೆ. ಅ.1ರಿಂದ ಮುಖ ಆಧಾರಿತ (ಇ-ಕೆವೈಸಿ) ಹಾಜರಾತಿ ಜಾರಿಯಾಗಲಿದೆ.

ಈಗಿರುವ ಎನ್‌ಎಂಎಂಎಸ್ (ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್‌) ಜತೆಗೆ ಇ-ಕೆವೈಸಿ ಕಾರ್ಯ ನಿರ್ವಹಿಸಲಿದೆ. ಇದರಿಂದ ನಕಲಿ ಹಾಜರಾತಿಗೆ ಬ್ರೇಕ್ ಬೀಳಲಿದೆ. ಎನ್‌ಎಂಎಂಎಸ್‌ನಲ್ಲಿ ಖಾತ್ರಿ ಯೋಜನೆಯಲ್ಲಿ ಕಾರ್ಯ ನಿರ್ವಹಿಸುವವರ ವಿಡಿಯೋ ಮಾಡಿದಾಗ ಎಷ್ಟು ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಲೆ ಎಣಿಸಿ ಹಾಜರಾತಿ ಹಾಕಲಾಗುತ್ತಿತ್ತು. ಹೀಗಾಗಿ, ಗೈರಾದ ಮಹಿಳೆಯರ ಪರವಾಗಿ ಪುರುಷರೇ ಸೀರೆಯುಟ್ಟು ಹಾಜರಾತಿ ನೀಡುತ್ತಿದ್ದರು. ಪುರುಷರು ಗೈರಾದರೆ ಅಲ್ಲಿದ್ದವರೇ ನಿಂತು ಹಾಜರಾತಿ ನೀಡಿ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದರು. ಇತ್ತೀಚೆಗೆ ಸೀರೆಯುಟ್ಟು ಹಾಜರಾತಿ ನೀಡಿದ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದಂತೆ ಇದೀಗ ಇ-ಕೆವೈಸಿ ಹಾಜರಾತಿಗೆ ಸರ್ಕಾರ ಮುಂದಾಗಿದೆ.

ನೋಂದಣಿ ಆರಂಭ:

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರು ಸೆ.30ರೊಳಗೆ ಇ-ಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಜಾಬ್‌ ಕಾರ್ಡ್‌ ಆಧಾರದ ಮೇಲೆ ಕಾರ್ಮಿಕರು ಹಾಗೂ ಸಕ್ರಿಯ ಕಾರ್ಮಿಕರೆಂದು ವಿಭಾಗಿಸಲಾಗಿದೆ. ಸಕ್ರಿಯ ಎಂದರೆ ಖಾತ್ರಿ ಯೋಜನೆಯಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುವವರು. ಇವರನ್ನು ಪ್ರಾರಂಭದಲ್ಲಿ ಇ-ಕೆವೈಸಿ ಮಾಡಲಾಗುತ್ತದೆ.

ಇ-ಕೆವೈಸಿ ಹೊಂದಿರುವ ಕಾರ್ಮಿಕರ ಹಾಜರಾತಿ ತೆಗೆದುಕೊಳ್ಳುವಾಗ ಆಧಾರ್ ನಂಬರ್‌ ಹಾಗೂ ಸ್ಥಳದಲ್ಲಿದ್ದ ಕಾರ್ಮಿಕರ ಮುಖ ಹೊಂದಾಣಿಕೆ ಆದಲ್ಲಿ ಮಾತ್ರ ಎನ್‌ಎಂಎಂಎಸ್‌ನಲ್ಲಿ ಪರಿಗಣಿಸಲಾಗುತ್ತಿದೆ. ಈ ಕುರಿತು ವಿವಿಧ ಇಲಾಖೆ ಅಧಿಕಾರಿಗಳಿಗೆ ತರಬೇತಿಯನ್ನು ಸಹ ನೀಡಲಾಗಿದೆ.

ಈ ಮೂಲಕ ನಕಲಿ ಹಾಜರಾತಿ ಸೃಷ್ಟಿಸಿ ಕೋಟ್ಯಂತರ ರುಪಾಯಿ ಸರ್ಕಾರಕ್ಕೆ ವಂಚನೆ ಮಾಡುವುದಕ್ಕೆ ತಡೆ ಬೀಳುವುದರ ಜತೆಗೆ ಅರ್ಹ ಕಾರ್ಮಿಕರಿಗೆ ಸರ್ಕಾರದ ಆರ್ಥಿಕ ಸೌಲಭ್ಯ ಸಿಗಲು ನೆರವಾಗುತ್ತದೆ.

---

ಜಿಲ್ಲೆಯಲ್ಲಿರುವ ಸಕ್ರಿಯ ಕಾರ್ಮಿಕರು

ಜಿಲ್ಲೆಸಂಖ್ಯೆ

ತುಮಕೂರು3,82,088

ಹಾವೇರಿ2,89,783

ಕೋಲಾರ2,07,280

ಹಾಸನ2,96,906

ಕೊಪ್ಪಳ5,22,637---

ಕೋಟ್

ಹಾಜರಾತಿಯ ಸತ್ಯಾಸತ್ಯತೆ ಪರಿಶೀಲಿಸಲು ಇ-ಕೆವೈಸಿ ಅ.1ರಿಂದ ಜಾರಿಗೆ ಬರಲಿದೆ.

-ದುಂಡಪ್ಪ ತೂರಾದಿ ಇಒ ತಾಪಂ, ಕೊಪ್ಪಳ.