ಸಾರಾಂಶ
ಕುಷ್ಟಗಿ: ಎಲ್ಪಿಜಿ ಗ್ಯಾಸಿನ ಸಹಾಯಧನ ಪಡೆಯಲು ಗ್ರಾಹಕರು ಡಿಸೆಂಬರ್ ಒಳಗೆ ಇ-ಕೆವೈಸಿ ಮಾಡಿಸಬೇಕೆನ್ನುವ ಸುಳ್ಳು ಮಾಹಿತಿ ಹರಿದಾಡಿದ ಹಿನ್ನೆಲೆಯಲ್ಲಿ ಕುಷ್ಟಗಿ ಪಟ್ಟಣದ ಭಾರತ್ ಗ್ಯಾಸ್ ಏಜೆನ್ಸಿ ಎದುರು ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದು, ಏಜೆನ್ಸಿಯವರು ಜನರನ್ನು ನಿಯಂತ್ರಣ ಮಾಡುವಲ್ಲಿ ಹರಸಾಹಸ ಪಡುವಂತಾಗಿದೆ.ಪಟ್ಟಣ ಸೇರಿದಂತೆ ತಾಲೂಕಿನ ಹತ್ತಾರು ಹಳ್ಳಿಗಳಿಂದ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಕುಟುಂಬ ಸಮೇತವಾಗಿ ಬುತ್ತಿ ಕಟ್ಟಿಕೊಂಡು ಬಂದು ಕುಳಿತುಕೊಂಡು ಈ ಕೆವೈಸಿ ಮಾಡಿಸಲು ಸರತಿ ಸಾಲಿನಲ್ಲಿ ನಿಂತುಕೊಂಡಿರುವುದು ಕಂಡು ಬರುತ್ತಿದೆ.ಈ ಕುರಿತು ಭಾರತ್ ಗ್ಯಾಸ್ ಏಜೆನ್ಸಿಯ ಪ್ರಶಾಂತಕುಮಾರ ಕನ್ನಡಪ್ರಭ ಪ್ರತಿನಿಧಿಯೊಂದಿಗೆ ಮಾತನಾಡಿ, ಗ್ಯಾಸಿನ ಇ-ಕೆವೈಸಿ ಮಾಡಿಸಲು ಡಿ.31 ಕೊನೆಯ ದಿನ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದರಿಂದಾಗಿ ಗ್ರಾಹಕರು ಆತಂಕಕ್ಕೆ ಒಳಗಾಗಿ ಏಜೆನ್ಸಿ ಎದುರು ಜಮಾಯಿಸುತ್ತಿದ್ದಾರೆ. ಆದರೆ ಇ-ಕೆವೈಸಿ ಮಾಡಿಸಬೇಕು ಎಂಬ ನಿಯಮವು ಆರಂಭವಾಗಿ ಸುಮಾರು ಎರಡು ವರ್ಷಗಳೇ ಕಳೆದಿವೆ. ಇಂದಿಗೂ ಕೊನೆಯ ದಿನಾಂಕ ನಿಗದಿ ಮಾಡಿಲ್ಲ. ಗ್ರಾಹಕರು ಆತಂಕಕ್ಕೆ ಒಳಗಾಗುವುದು ಬೇಡ ಎಂದರು.ಜನರ ಬಾಯಿಂದ ಡಿ.31ಕೊನೆಯ ದಿನಾಂಕ ಎಂದು ಕೇಳಿಕೊಂಡು ಇಂದು ಇ-ಕೆವೈಸಿ ಮಾಡಿಸಲು ಬಂದಿದ್ದು, ಇಲ್ಲಿಗೆ ಬಂದ ಮೇಲೆ ನಿಜ ಏನು ಎನ್ನುವುದು ನಮಗೆ ಗೊತ್ತಾಯಿತು ಎಂದು ಗುಮಗೇರಿ ಗ್ರಾಹಕ ಶುಖಮುನಿ ಗಡಗಿ ಹೇಳಿದರು.