ಎಮ್ಮಿಗನೂರು ಗ್ರಾಮವನ್ನು ಪೋತಿ–ಪಹಣಿ ಮುಕ್ತ ಗ್ರಾಮವನ್ನಾಗಿ ಪರಿವರ್ತಿಸುವ ಗುರಿ ಹೊಂದಿ ಗ್ರಾಮವನ್ನು ದತ್ತು ತೆಗೆದುಕೊಂಡಿರುವುದನ್ನು ಸ್ಮರಿಸಿದರು

ಕಂಪ್ಲಿ: ತಾಲೂಕಿನ ಎಮ್ಮಿಗನೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಪ್ರಾಯೋಜಕತ್ವದಲ್ಲಿ ಇ-ಪೌತಿ ಆಂದೋಲನ ಮತ್ತು ತಾಲೂಕು ಆಡಳಿತ ನಡೆಸಿದ ಪಿಂಚಣಿ ದಿನ ಕಾರ್ಯಕ್ರಮ ಬುಧವಾರ ಜರುಗಿತು.ಬಳ್ಳಾರಿ ಎಡಿಸಿ ಮಹಮ್ಮದ್ ಎನ್. ಜುಬೇರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಎಮ್ಮಿಗನೂರು ಗ್ರಾಮವನ್ನು ಪೋತಿ–ಪಹಣಿ ಮುಕ್ತ ಗ್ರಾಮವನ್ನಾಗಿ ಪರಿವರ್ತಿಸುವ ಗುರಿ ಹೊಂದಿ ಗ್ರಾಮವನ್ನು ದತ್ತು ತೆಗೆದುಕೊಂಡಿರುವುದನ್ನು ಸ್ಮರಿಸಿದರು. ಜೀವಂತ ವ್ಯಕ್ತಿಗಳ ಹೆಸರಿನಲ್ಲಿ ಪಹಣಿ ಇದ್ದಲ್ಲಿ ಸರ್ಕಾರದ ಯೋಜನೆಗಳು ಪಡೆಯಬಹುದು.ಗ್ರಾಮದ ನವೀಕರಿಸಲ್ಪಟ್ಟ ಪಹಣಿಗಳ ವಿವರಗಳನ್ನು ಹಂಚಿಕೊಂಡ ಅವರು, 361 ಪೋತಿದಾರರ ಪಹಣಿಗಳಲ್ಲಿ 168ಕ್ಕೆ ವಾರಸುದಾರರ ಹೆಸರಿನಲ್ಲಿ ಬದಲಾವಣೆ ನಡೆದಿದೆ. 186 ಪಹಣಿಗಳು ಏಕ ಮಾಲೀಕತ್ವದಲ್ಲಿವೆ ಹಾಗೂ 51 ಪಹಣಿಗಳಿಗೆ ವಾರಸುದಾರ ಬದಲಾವಣೆಗಾಗಿ ಅರ್ಜಿ ಸ್ವೀಕರಿಸಲಾಗಿದೆ. ಇದೇ ಸಂದರ್ಭ ನಾಲ್ವರು ಫಲಾನುಭವಿಗಳಿಗೆ ಸರ್ಕಾರಿ ಪಿಂಚಣಿ ಮಂಜೂರಾತಿ ಆದೇಶ ಪ್ರತಿಗಳನ್ನು ಹಸ್ತಾಂತರಿಸಲಾಯಿತು. ಇನ್ನೂ ಮೂರು ಅರ್ಜಿಗಳು ಪ್ರಕ್ರಿಯೆಯಲ್ಲಿವೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದರು.

ಕಚೇರಿಗೆ ಪದೇಪದೇ ಅಲೆದಾಡುವ ಅವಶ್ಯಕತೆ ಬಾರದಂತೆ ಇ-ಪೌತಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಂಡರೆ ಗ್ರಾಮದಲ್ಲಿ ಶಾಶ್ವತ ಸಮಸ್ಯಾ ಪರಿಹಾರ ಸಾಧ್ಯ ಎಂದು ಹೇಳಿದರು.

ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬರಗಿ ಮಹೇಶಗೌಡ ಹಾಗೂ ಗ್ರಾಮಸ್ಥೆ ನೀಲಮ್ಮ ಮಾತನಾಡಿ, ತಾಂತ್ರಿಕ ಅಡಚಣೆಗಳ ಕಾರಣದಿಂದ ಕೆಲ ವಾರಸುದಾರರ ಹೆಸರಿನ ಬದಲಾವಣೆ ಪ್ರಕ್ರಿಯೆ ವಿಳಂಬವಾಗುತ್ತಿರುವುದನ್ನು ಗಮನಕ್ಕೆ ತಂದು, ಸಮಸ್ಯೆಗಳಿಗೆ ಅಧಿಕಾರಿಗಳು ತ್ವರಿತ ಪರಿಹಾರ ನೀಡಬೇಕು. ಪಿಂಚಣಿ ಸಹಿತ ಬಾಕಿ ಸರ್ಕಾರಿ ಸೌಲಭ್ಯಗಳನ್ನು ಅಲೆಸದೆ ಒದಗಿಸುವುದು ಅವರ ಜವಾಬ್ದಾರಿಯಾಗಿದೆ. ಗ್ರಾಮವನ್ನು ದತ್ತು ಪಡೆದಿರುವುದು ಕೇವಲ ಘೋಷಣೆಯಾಗಬಾರದು. ಇದರ ಫಲ ಗ್ರಾಮಸ್ಥರಿಗೆ ತಲುಪುವಂತೆ ಅಧಿಕಾರಿಗಳು ವೇಗದ ಸೇವೆ ಒದಗಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಜೂಗಲ ಮಂಜುನಾಯಕ, ಪಿಡಿಒ ಹಾಲಹರವಿ ಶೇಷಗಿರಿ, ಕಂದಾಯ ನಿರೀಕ್ಷಕ ವೈ.ಎಂ. ಜಗದೀಶ, ವಿಎಒಗಳು ಎಚ್.ವಿ. ಮಂಜುನಾಥ, ಮಹಮ್ಮದ್ ರಫ್, ಕೆ. ಮಂಜುನಾಥ, ತಾಪಂ ಮಾಜಿ ಸದಸ್ಯ ವೆಂಕಟರಾಮರಾಜು ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.