ಗ್ರಾಮೀಣ ಭಾಗದ ನಿವಾಸಿಗಳು ತಮ್ಮೂರಲ್ಲಿರುವ ಆಸ್ತಿಗಳ ಉತಾರ ಖಾತ್ರಿಪಡಿಸಿಕೊಳ್ಳಲು ಪಾರದರ್ಶಕ ವ್ಯವಸ್ಥೆ ಜಾರಿಯ ಬಗ್ಗೆ ಗ್ರಾಮೀಣ ಜನರ ಬಹುವರ್ಷಗಳ ಬೇಡಿಕೆಯಾಗಿತ್ತು
ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ
ಗ್ರಾಮೀಣ ಭಾಗದಲ್ಲಿನ ಆಸ್ತಿ ಖಾತ್ರಿಪಡಿಸಿಕೊಳ್ಳಲು ಮತ್ತು ಇ-ಸ್ವತ್ತು ಉತಾರ ಪಡೆಯಲು ಇ ಸ್ವತ್ತು 2.0 ಸಿಟಿಜನ್ ಆ್ಯಪ್ ಮೂಲಕ ಸರ್ಕಾರ ಅವಕಾಶ ನೀಡಿರುವುದು ಗ್ರಾಮೀಣ ಭಾಗದ ಜನತೆಗೆ ಅನುಕೂಲಕರವಾಗಲಿದೆ.ಗ್ರಾಮೀಣ ಭಾಗದ ನಿವಾಸಿಗಳು ತಮ್ಮೂರಲ್ಲಿರುವ ಆಸ್ತಿಗಳ ಉತಾರ ಖಾತ್ರಿಪಡಿಸಿಕೊಳ್ಳಲು ಪಾರದರ್ಶಕ ವ್ಯವಸ್ಥೆ ಜಾರಿಯ ಬಗ್ಗೆ ಗ್ರಾಮೀಣ ಜನರ ಬಹುವರ್ಷಗಳ ಬೇಡಿಕೆಯಾಗಿತ್ತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ತಿದ್ದುಪಡಿ-2025ರ ಮೂಲಕ ಗ್ರಾಮೀಣ ಜನರಿಗೆ ಅನುಕೂಲವಾಗುವ ವ್ಯವಸ್ಥೆ ಜಾರಿಗೆ ತಂದು ಸುಲಭವಾಗಿ ಇ-ಸ್ವತ್ತು ಉತಾರ ಪಡೆಯಲು ಅವಕಾಶ ಕಲ್ಪಿಸಿದ್ದು ಸಂತಸ ತಂದಿದ್ದು, ಇದರಿಂದ ತಿಂಗಳಾನುಗಟ್ಟಲೆ ಕಾಯುವುದು ತಪ್ಪುತ್ತಿದೆ ಎನ್ನುವದು ಜನರ ಅಭಿಪ್ರಾಯವಾಗಿದೆ.
ಆಸ್ತಿಗಳ ವಿವರ: ಗ್ರಾಮ ಠಾಣಾ, ಸರ್ಕಾರದ ವಸತಿ ಯೋಜನೆಯಡಿ ಮಂಜೂರಾದ ಆಸ್ತಿ, ಸ್ಥಳೀಯ ಯೋಜನಾ ಪ್ರದೇಶದಲ್ಲಿನ ಪ್ರಾಧಿಕಾರ ಅನುಮೋದನೆ ಆಸ್ತಿ, ಮಂಡಳ ಪಂಚಾಯಿತಿ ಆಸ್ತಿ, ವಿನ್ಯಾಸ ಹೊಂದಿರುವ ಆಸ್ತಿಗಳು, ಪಂಚಾಯಿತಿಯಿಂದ ಅನುಮೋದನೆಯಾಗಿರುವ ಆಸ್ತಿ, ಕೈಗಾರಿಕೆ ವಿನ್ಯಾಸ ಆಸ್ತಿ, ಗ್ರಾಪಂ ಅನುಮತಿಯಿಂದ ಪರಿವರ್ತಿತ ಆಸ್ತಿ, ಭೂ ಕಂದಾಯ ಕಾಯಿದೆಯಡಿ ಮಂಜೂರಾದ ಆಸ್ತಿ, ಪುನರ್ವಸತಿ ಆಸ್ತಿ, ಗ್ರಾಪಂ ವಿನ್ಯಾಸದ ಅನುಮೋದಿತ ಆಸ್ತಿ, ಕೇಂದ್ರ, ರಾಜ್ಯ ಸರ್ಕಾರಗಳ ನಿವೇಶನ, ಕಟ್ಟಡ, ಕರ್ನಾಟಕ ಭೂ ಸುಧಾರಣಾ ಅಧಿನಿಯಮ ಪ್ರಕರಣದಡಿ ಮಂಜೂರಾಗಿರುವ ಆಸ್ತಿ, ನಿಗಮ ಮಂಡಳಿ, ಪ್ರಾಧಿಕಾರದ ನಿವೇಶನ, ಕಟ್ಟಡ, ಗ್ರಾಪಂ ಅನುಮತಿ ಪಡೆದ ಅನುಮೋದಿತ ಕಟ್ಟಡ ನಿವೇಶನ, ಭೂಪರಿವರ್ತಿತ ಆಸ್ತಿ, ಭೂ ಪರಿವರ್ತನೆಯಾಗದೆ ಉಳಿದಿರುವ ಕೃಷಿ ಭೂಮಿಯಲ್ಲಿರುವ ನಿವೇಶನಗಳು, ಸಕ್ರಮ ಪ್ರಾಧಿಕಾರದ ವಿನ್ಯಾಸ ಆಸ್ತಿ, ಬಡಾವಣೆ, ಭೂ ಪರಿವರ್ತಿತ ಹಾಗೂ ಭೂ ಜಮೀನುಗಳ ಏಕ ನಿವೇಶನಕ್ಕೆ ಸಂಬಂಧಿಸಿದ ಖರೀದಿಯಾಗಿರುವ ಆಸ್ತಿಗಳಿಗೆ ಇ-ಸ್ವತ್ತು ಉತಾರ ಪಡೆಯಲು ಸಂಬಂಧಿಸಿದ ದಾಖಲೆ ನೀಡಿ ಸಿಟಿಜನ್ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
ಆಸ್ತಿ ನೋಂದಾಯಿತ ಪ್ರಮಾಣ ಪತ್ರ, ತೆರಿಗೆ ಪಾವತಿ ರಸೀದಿ, ವಿದ್ಯುತ್ ಬಿಲ್, ಪಹಣಿ ಪತ್ರ, ಭೂಪರಿವರ್ತನೆ ಆದೇಶ ಪತ್ರ, ಮಂಜೂರಾದ ಆದೇಶ, ಋಣಭಾರ ಪತ್ರ ಅರ್ಜಿ ಜತೆಗೆ ಸಲ್ಲಿಸಬೇಕು.ಸಿಟಿಜನ್ ಆ್ಯಪ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ನಿವೇಶನ, ಕಟ್ಟಡಗಳ ಸ್ಥಳಕ್ಕೆ ಜಿಪಿಎಸ್ ಮೂಲಕ ದಾಖಲೆ ನಮೂದಿಸಲು ಗ್ರಾಪಂ ಕಾರ್ಯದರ್ಶಿ, ಸಿಬ್ಬಂದಿ ಭೇಟಿ ನೀಡುತ್ತಾರೆ. ಅಳತೆ, ವ್ಯಾಪ್ತಿಯ ವಿನ್ಯಾಸಗಳನ್ನು ಪತ್ತೆ ಹಚ್ಚಿದ ಬಳಿಕ ಪ್ರಕ್ರಿಯೆ ಮುಂದುವರಿಯಲಿದೆ.
15 ದಿನಗಳಲ್ಲಿ ಉತಾರ: ಅರ್ಜಿ ಸಲ್ಲಿಸಿದ ಬಳಿಕ ಉತಾರ ಪೂರೈಸಲು ಗ್ರಾಪಂ ಮಟ್ಟದಲ್ಲಿ 45 ದಿನಗಳವರೆಗೆ ಇದ್ದ ಅವಧಿಯನ್ನು ಈಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 15 ದಿನಗಳಿಗೆ ಸೀಮಿತಗೊಳಿಸಿದೆ.ಸಿಟಿಜನ್ ಆ್ಯಪ್ ಮೂಲಕ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದ ನಂತರ ದಿನಗಳಲ್ಲಿ ಕಾರ್ಯದರ್ಶಿ,ಅಧ್ಯಕ್ಷರು, ತಾಪಂ ಇಒ ತದ ನಂತರ ಪಿಡಿಒ ಅಂತಿಮ ಪರಿಷ್ಕರಣೆ ನಡೆಸಿದ ಬಳಿಕ ಇ- ಸ್ವತ್ತು ಉತಾರ ಪಡೆಯಬಹುದು.
ಆಸ್ತಿಯ ಇ-ಸ್ವತ್ತು ಉತಾರ ಪಡೆಯಲು ಸಿಟಿಜನ್ ಆ್ಯಪ್ ಮೂಲಕ ಆಸ್ತಿ ಮಾಲೀಕರು ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು. ನಂತರ ಗ್ರಾಪಂ ಅಧಿಕಾರಿಗಳು ಪರಿಶೀಲಿಸಿ ಕ್ರಮಕ್ಕೆ ಮುಂದಾಗಲಾಗುತ್ತದೆ. 15 ದಿನಗಳಲ್ಲಿ ಇ-ಸ್ವತ್ತು ಉತಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು. ಅರ್ಜಿ ಸಲ್ಲಿಸುವಾಗ ಕೆಲ ತಾಂತ್ರಿಕ ದೋಷಗಳು ಎದುರಾಗುತ್ತಿದ್ದು ಸರಿಪಡಿಸಲು ಸರ್ಕಾರ ಮುಂದಾಗಬೇಕು ಎಂದು ಹನಮನಾಳ ಗ್ರಾಪಂ ಪಿಡಿಒ ಪ್ರಶಾಂತ ಡಿ. ಹಿರೇಮಠ ತಿಳಿಸಿದ್ದಾರೆ.ಮನೆ ಮತ್ತು ಖಾಲಿ ಜಾಗದ ಆಸ್ತಿಯ ಇ ಸ್ವತ್ತು ಉತಾರಕ್ಕಾಗಿ ಗ್ರಾಪಂಗೆ ಎರಡು ಮೂರು ತಿಂಗಳಗಟ್ಟಲೆ ತಿರುಗಾಡಿದರೂ ಉತಾರ ಪಡೆದುಕೊಳ್ಳಲು ಆಗುತ್ತಿರಲಿಲ್ಲ ಈಗ ರಾಜ್ಯ ಸರ್ಕಾರ ಸಿಟಿಜನ್ ಆ್ಯಪ್ ಮೂಲಕ ಇ-ಸ್ವತ್ತು ಉತಾರ ಪಡೆಯಲು ಹೊಸ ವ್ಯವಸ್ಥೆ ಜಾರಿಗೆ ತಂದಿರುವದು ಸಾರ್ವಜನಿಕರಿಗೆ ಸಹಾಯಕವಾಗಲಿದೆ ಎಂದು ಹನುಮನಾಳ ನಿವಾಸಿ ಉಮಾದೇವಿ ಪೋಲಿಸಪಾಟೀಲ ತಿಳಿಸಿದ್ದಾರೆ.