ಸಾರಾಂಶ
ಅಸಂಘಟಿತ ಕ್ಷೇತ್ರದ ಬಹುಸಂಖ್ಯಾತ ಕಾರ್ಮಿಕರು 60 ವರ್ಷ ವಯೋಮಿತಿ ಮೀರಿದ ನಂತರವೂ ಕೆಲಸ ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಇ-ಶ್ರಮ್ ಪೋರ್ಟಲ್ ನೋಂದಣಿಯನ್ನು ಕೇವಲ 16ರಿಂದ 59 ವರ್ಷದ ಕಾರ್ಮಿಕರಿಗೆ ಮಾತ್ರ ಸೀಮಿತಗೊಳಿಸಿರುವ ಬಗ್ಗೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸದನದ ಗಮನ ಸೆಳೆದರು.
- ಸಂಸತ್ ಸದನದಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆದ ಸಂಸದೆ - - - ದಾವಣಗೆರೆ: ಅಸಂಘಟಿತ ಕ್ಷೇತ್ರದ ಬಹುಸಂಖ್ಯಾತ ಕಾರ್ಮಿಕರು 60 ವರ್ಷ ವಯೋಮಿತಿ ಮೀರಿದ ನಂತರವೂ ಕೆಲಸ ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಇ-ಶ್ರಮ್ ಪೋರ್ಟಲ್ ನೋಂದಣಿಯನ್ನು ಕೇವಲ 16ರಿಂದ 59 ವರ್ಷದ ಕಾರ್ಮಿಕರಿಗೆ ಮಾತ್ರ ಸೀಮಿತಗೊಳಿಸಿರುವ ಬಗ್ಗೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸದನದ ಗಮನ ಸೆಳೆದರು.
ನವದೆಹಲಿಯಲ್ಲಿ ಸಂಸತ್ ಸದನದ ಪ್ರಶ್ನೋತ್ತರ ವೇಳೆಯಲ್ಲಿ ಈ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದ ಸಂಸದರು, ಈ ವಯೋಮಿತಿಯ ಕಾರಣದಿಂದ ಉಂಟಾಗುವ ಪರಿಣಾಮಗಳ ಕುರಿತು ಸರ್ಕಾರ ಅಧ್ಯಯನ ನಡೆಸಿದೆಯೇ? ಹಿರಿಯ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ವ್ಯಾಪ್ತಿಯನ್ನು ವಿಸ್ತರಿಸಲು ಅರ್ಹತೆ ವಿಸ್ತರಿಸುವ ಯಾವುದೇ ಯೋಜನೆಗಳಿವೆಯೇ? ಎಂದು ಪ್ರಶ್ನಿಸಿದರು.ಸಂಸದರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಇಲಾಖೆಯ ಸಚಿವ ಡಾ.ಮನ್ ಸುಖ್ ಮಾಂಡವೀಯ ಅವರು ನೋಂದಾಯಿತ ಕಾರ್ಮಿಕರಿಗೆ ವಿವಿಧ ಯೋಜನಾ ಲಾಭಗಳು ಲಭ್ಯವಿವೆ. ಉದ್ಯೋಗ ಅವಕಾಶಗಳನ್ನು ಒದಗಿಸಲು ಇ-ಶ್ರಮ ಪೋರ್ಟಲ್ ಅನ್ನು ನ್ಯಾಷನಲ್ ಕೆರಿಯರ್ ಸರ್ವಿಸ್ ಪೋರ್ಟಲ್‌ನೊಂದಿಗೆ ಏಕೀಕೃತಗೊಳಿಸಲಾಗಿದೆ ಎಂದು ತಿಳಿಸಿದರು.
ಹಿರಿಯ ಕಾರ್ಮಿಕರಿಗೆ ಲಭ್ಯವಿರುವ ಉಪಯೋಗದ ಬಗ್ಗೆ ಸಂಸದರು ವಿಶೇಷವಾಗಿ ಕೇಳಿದಾಗ, ಸಚಿವರು ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನಧನ್ ಯೋಜನೆ ಬಗ್ಗೆ ಉಲ್ಲೇಖಿಸಿದರು. ಇದು 60 ವರ್ಷಗಳ ನಂತರ ಪ್ರತಿ ತಿಂಗಳು ₹3,000 ಕನಿಷ್ಠ ಖಾತರಿ ಪಿಂಚಣಿಯನ್ನು ಒದಗಿಸುತ್ತದೆ. ಆದರೆ, 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಕಾರ್ಮಿಕರನ್ನು ಇ-ಶ್ರಮ ನೋಂದಣಿಯಿಂದ ಹೊರಗುಳಿಸಲಾಗುತ್ತಿದೆ ಎಂಬ ಪ್ರಮುಖ ಪ್ರಶ್ನೆಗೆ ಕೇಂದ್ರ ಸಚಿವರು ಸಮರ್ಪಕ ಮಾಹಿತಿ ಒದಗಿಸಲು ಸಾಧ್ಯವಾಗಲಿಲ್ಲ.- - - -17ಕೆಡಿವಿಜಿ33: ದಾವಣಗೆರೆಯ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸಂಸತ್ ಸದನದಲ್ಲಿ ಇ-ಶ್ರಮ್ ಕಾರ್ಡ್ ಕುರಿತು ಪ್ರಸ್ತಾಪಿಸಿ, ಕೇಂದ್ರ ಸರ್ಕಾರದ ಗಮನ ಸೆಳೆದರು.